Mysuru Dasara 2024: ಗಜಪಡೆ ತಾಲೀಮಿಗೆ ಹೊಸ ಕಳೆ: ಭಾರದ ತಾಲೀಮು ಶುರು!
ಮೈಸೂರು,ಸೆಪ್ಟೆಂಬರ್ 02: ಐತಿಹಾಸಿಕ ಮೈಸೂರು ದಸರಾಕ್ಕೆ ನಗರದಲ್ಲಿ ನಿಧಾನವಾಗಿ ಕಳೆ ಬರುತ್ತಿದೆ. ಜತೆಗೆ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಗಜಪಡೆ ಕೂಡ ತಾಲೀಮನ್ನು ಕಠಿಣಗೊಳಿಸುತ್ತಾ ಸಾಗುತ್ತಿವೆ. ಇಲ್ಲಿ ತನಕ ಮಾಮೂಲಿಯಂತೆ ನಡಿಗೆಯ ಒಣತಾಲೀಮು ನಡೆಸುತ್ತಿದ್ದ ಕ್ಯಾಪ್ಟನ್ ಅಭಿಮನ್ಯು ಇದೀಗ ಭಾರ ಹೊತ್ತು ಹೆಜ್ಜೆ ಹಾಕಲಾರಂಭಿಸಿದ್ದಾನೆ. ಇದನ್ನು ಭಾರದ ತಾಲೀಮು ಎಂದು ಕರೆಯಲಾಗುತ್ತಿದೆ. ಈ ಭಾರದ ತಾಲೀಮು ಇದೀಗ ಶುರುವಾಗಿದ್ದು, ತಾಲೀಮಿಗೆ ಹೊಸ ಮೆರಗು ಬಂದಿದೆ.
ಗಜಪಡೆ ತಾಲೀಮು ವಿವಿಧ ಹಂತಗಳಲ್ಲಿ ನಡೆಯುವುದು ಮಾಮೂಲಿಯಾಗಿದ್ದು, ಅದರಂತೆ ಈ ಬಾರಿಯೂ ತಾಲೀಮನ್ನು ನಡೆಸಲಾಗುತ್ತಿದೆ. ಜಂಬೂ ಸವಾರಿ ವೇಳೆಗೆ ಸರ್ವ ವಿಧದಲ್ಲೂ ಗಜಪಡೆ ತಯಾರಾಗಬೇಕಾಗಿದೆ. ಹೀಗಾಗಿಯೇ ಅವುಗಳಿಗೆ ವಿವಿಧ ತಾಲೀಮು ಮಾಡಿಸಲಾಗುತ್ತಿದ್ದು, ಇದೀಗ ಭಾರದ ತಾಲೀಮು ಭಾನುವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಕ್ಯಾಪ್ಟನ್ ಅಭಿಮನ್ಯು 520 ಕೆ.ಜಿ ಭಾರ ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಿರಾಯಾಸವಾಗಿ ಹೆಜ್ಜೆ ಹಾಕಿರುವುದು ಗಮನಸೆಳೆದಿದೆ.

ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಭಾನುವಾರ ಬೆಳಗ್ಗೆ 7-15ಕ್ಕೆ ಅರ್ಚಕ ಪ್ರಹ್ಲಾದ್‌ರಾವ್ ಸಂಪ್ರದಾಯದಂತೆ ಆನೆಗಳ ಬೆನ್ನಿನ ಮೇಲೆ ಇಡುವ ಗಾದಿ, ನಮ್ದಾ ಹಾಗೂ ಅಭಿಮನ್ಯು, ಕುಕ್ಮಿ ಆನೆಗಳಾದ ಲಕ್ಷ್ಮೀ ಮತ್ತು ವರಲಕ್ಷ್ಮೀ ಆನೆಗಳ ಪಾದ ತೊಳೆದು ಪೂಜೆ ಸಲ್ಲಿಸಿದರೆ, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಪಂಚಫಲದೊಂದಿಗೆ ಬೆಲ್ಲ ಮತ್ತು ಕಬ್ಬನ್ನು ನೀಡಿದರು. ಇದಾದ ಬಳಿಕ ಅಭಿಮನ್ಯು ಬೆನ್ನಿಗೆ 250ಕೆ.ಜಿ ತೂಕದ ಗಾದಿ ಮತ್ತು ನಮ್ದಾ ಬಿಗಿದು, ಅದರಲ್ಲಿ ಕಬ್ಬಿಣದ ತೊಟ್ಟಿಲನ್ನು ಇರಿಸಿ 250 ಕೆ.ಜಿ ಮರಳು ಮೂಟೆ ಸೇರಿದಂತೆ ಸುಮಾರು 520ಕೆಜಿ ತೂಕದ ಭಾರ ಹೊರಿಸಲಾಯಿತು.
ಗಜಪಡೆಗೆ ವಿವಿಧ ಹಂತದ ತಾಲೀಮು
ಇದಾದ ನಂತರ ಮೂರು ಆನೆಗಳನ್ನು ಅರಮನೆ ಬಳಿಯ ಅಂಬಾರಿ ಕಟ್ಟುವ ಜಾಗಕ್ಕೆ ಕರೆದೊಯ್ದು ತಾಲೀಮು ಆರಂಭಿಸಲಾಯಿತು. ಬೆಳಗ್ಗೆ 8.38ಕ್ಕೆ ಅರಮನೆಯಿಂದ ರಾಜಮಾರ್ಗದಲ್ಲಿ 520 ಕೆ.ಜಿ ಭಾರ ಹೊತ್ತು ಹೊರಟ ಕ್ಯಾಪ್ಟನ್ ಅಭಿಮನ್ಯುವನ್ನು ಲಕ್ಷ್ಮೀ, ವರಲಕ್ಷ್ಮೀ, ಧನಂಜಯ, ಭೀಮ, ಗೋಪಿ, ರೋಹಿತ್ ಏಕಲವ್ಯ ಆನೆಗಳು ಹಿಂಬಾಲಿಸಿದವು. ಪಂಜಿನ ಕವಾಯತು ನಡೆಯುವ ಬನ್ನಿಮಂಟಪ ಮೈದಾನಕ್ಕೆ 1ಗಂಟೆ 15 ನಿಮಿಷದಲ್ಲಿ ತಲುಪಿದವು. ಬಳಿಕ ಭಾರ ಇಳಿಸಿ ವಾಪಸ್ ಕರೆತರಲಾಯಿತು. ಕಾಲಿನ ನೋವಿನ ಕಾರಣಕೆ ಕಂಜನ್‌ಗೆ ವಿಶ್ರಾಂತಿ ನೀಡಲಾಗುತ್ತಿದೆ.

ಮೊದಲ ದಿನ ಹೇಗೆ ಭಾರದ ತಾಲೀಮು ನಡೆಯುತ್ತದೆಯೋ ಅದರಂತೆಯೇ ಪ್ರತಿದಿನವೂ ನಡೆಯುತ್ತಿದೆ. ಮುಂದೆ ತಾಲೀಮಿನ ಸ್ವರೂಪ ಇನ್ನಷ್ಟು ಬದಲಾಗಲಿದೆ. ವಿಜಯದಶಮಿಯಂದು 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಅರಮನೆಯಿಂದ ಬನ್ನಿಮಂಟಪದವರೆಗೆ ಯಾವುದೇ ಸಮಸ್ಯೆ ಇಲ್ಲದೆ ನಿರಾಯಾಸವಾಗಿ ಹೊತ್ತೊಯ್ಯಲು ಅಂಬಾರಿ ಆನೆ ಅಭಿಮನ್ಯು ಸೇರಿದಂತೆ ಪ್ರಮುಖ ಆನೆಗಳಿಗೆ ಒಣ ತಾಲೀಮು, ಭಾರ ಹೊರುವ ತಾಲೀಮು ಹಾಗೂ ಮರದ ಅಂಬಾರಿ ಹೊರುವ ತಾಲೀಮನ್ನು ಹಂತ ಹಂತವಾಗಿ ನಡೆಸಲಾಗುತ್ತದೆ.
ಅಂಬಾರಿ ಹೊರಲು ಅಭಿಮನ್ಯು ಸಜ್ಜು
ಭಾರ ಹೊರುವ ತಾಲೀಮು ಮೊದಲ ದಿನದಿಂದಲೇ ಯಾವುದೇ ವಿಘ್ನವಿಲ್ಲದೆ ಸಾಗುತ್ತಾ ಬಂದಿದ್ದು ಅಭಿಮನ್ಯು ಬೆನ್ನಿನ ಮೇಲೆ 250 ಕೆ.ಜಿ ತೂಕದ ಗಾದಿ, ನಮ್ದಾ ಹಾಗೂ 250 ಕೆ.ಜಿ ತೂಕದ ಮರಳು ಮೂಟೆಯನ್ನಿಟ್ಟು ಭಾರ ಹೊರುವ ತಾಲೀಮು ಆರಂಭಿಸಲಾಗಿದ್ದು, ಭಾರ ಹೊತ್ತು ಅರಮನೆಯಿಂದ ಹೊರಟ ಕ್ಯಾಪ್ಟನ್ ನಿರಾಯಾಸವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿ ಸೈ ಎನಿಸಿಕೊಂಡಿದ್ದು ವಿಶೇಷವಾಗಿದೆ. ಇದು ಪ್ರತಿದಿನವೂ ನಡೆಯಲಿದೆ. ಇದೀಗ 5ನೇ ಬಾರಿಗೆ ಅಂಬಾರಿ ಹೊರಲು ಅಭಿಮನ್ಯು ಸಜ್ಜಾಗುತ್ತಿದ್ದು ಅದಕ್ಕೆ ಬೇಕಾದ ತಾಲೀಮನ್ನು ನಿರಾಯಾಸವಾಗಿ ಮಾಡುತ್ತಿದ್ದಾನೆ.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ರಾಜಮಾರ್ಗದಲ್ಲಿ ಗಜಪಡೆ ತಾಲೀಮು ನಡೆಸುವಾಗ ರಸ್ತೆ ಬದಿಯಲ್ಲಿ ಹೂ, ಹಣ್ಣು ವ್ಯಾಪಾರಿಗಳು ಆನೆಗಳನ್ನು ಕಂಡು ಕೈಮುಗಿದು, ತಮ್ಮಲ್ಲಿರುವ ಹೂ, ಹಣ್ಣುಗಳನ್ನು ಆನೆಗಳಿಗೆ ನೀಡುವ ಮೂಲಕ ಧನ್ಯತೆ ಮೆರೆಯುವ ದೃಶ್ಯ ಕಂಡುಬರುತ್ತಿದೆ. ಜತೆಗೆ ಜನರು ಕೂಡ ತಾಲೀಮು ನೋಡಲು ಮುಗಿ ಬೀಳುತ್ತಿರುವುದು ಮಾಮೂಲಿಯಾಗಿದೆ.
ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಹೇಳಿದ್ದೇನು?
ತಾಲೀಮು ಕುರಿತಂತೆ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾಹಿತಿ ನೀಡಿ ಗಜಪಡೆಗಳಿಗೆ ಭಾರದ ತಾಲೀಮು ಆರಂಭಿಸಲಾಗಿದ್ದು, ಮೊದಲ ದಿನ ಅಭಿಮನ್ಯುವಿಗೆ ಸುಮಾರು 520 ಕೆ.ಜಿ ಭಾರ ಹೊರಿಸಿ ತಾಲೀಮು ನಡೆಸಲಾಗಿದೆ. ಎಲ್ಲಾ ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ರೊಟೇಷನ್ ಆಗಿ ನಡೆಸಲಾಗುತ್ತದೆ. ಭಾರವನ್ನು ಹಂತ ಹಂತವಾಗಿ 750ಕೆಜಿ ಬರುವ ತನಕ ಹೆಚ್ಚಿಸಿ ತಾಲೀಮು ಮಾಡುತ್ತೇವೆ. ಭಾರ ಹೆಚ್ಚಿಸಿದ ನಂತರ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತದೆ. ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆಯಿಲ್ಲ. ಕಂಜನ್ ಆನೆಗೆ ಕಾಲಿನ ನೋವು ಇರುವುದರಿಂದ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ದಸರೆ ಜಂಬೂಸವಾರಿಗೆ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆನೆಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಆನೆಗಳ ತೂಕ ಹೆಚ್ಚಿಸಲು ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತಿದೆ. ಮೊದಲ ಬಾರಿಗೆ ಕರೆತಂದಿರುವ ಏಕಲವ್ಯ ಆನೆ ನಗರದ ವಾತಾವರಣಕ್ಕೆ ಒಗ್ಗಿಕೊಂಡಿದ್ದು, ನಿಭಯವಾಗಿ ಓಡಾಡಿಕೊಂಡಿದ್ದಾನೆ. 2ನೇ ಹಂತದ ಆನೆಗಳನ್ನು ಸೆ.5ರಂದು ಕರೆತರಲಾಗುವುದು ಎಂದು ತಿಳಿಸಿದ್ದು, ಆ ನಂತರ ಎಲ್ಲ ಆನೆಗಳು ಒಟ್ಟಾಗಿ ತಾಲೀಮು ನಡೆಸಲಿವೆ.
ಗಜಪಡೆ ತಾಲೀಮಿಗೆ ಹೊಸ ಕಳೆ
ಇದೆಲ್ಲದರ ನಡುವೆ ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಏಕಲವ್ಯ ಆನೆ ನಗರದ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದು, ಆನೆಗಳ ಜತೆಗೆ ಯಾವುದೇ ಭಯ, ಆತಂಕವಿಲ್ಲದೆ ತಾಲೀಮಿನಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ತಾಲೀಮಿನ ವೇಳೆ ಪಕ್ಕದಲ್ಲಿ ಅಧಿಕಾರಿಗಳ ಕಾರು ಸೇರಿದಂತೆ ಏನೇ ಶಬ್ಧವಾದರೂ ಭಯಪಡದೆ ಧೈರ್ಯದಿಂದ ಹೆಜ್ಜೆ ಇಡುವ ಮೂಲಕ ಅಧಿಕಾರಿಗಳಲ್ಲಿ ಭವಿಷ್ಯದ ಅಂಬಾರಿ ಆನೆ ಎಂದೇ ಭರವಸೆ ಮೂಡಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಗಜಪಡೆಯ ತಾಲೀಮು ಮೈಸೂರು ನಗರಕ್ಕೆ ಕಳೆಕಟ್ಟಿದ್ದಂತು ನಿಜ.












Click it and Unblock the Notifications