ಮೈಸೂರಿನ ವಿಶ್ವವಿಖ್ಯಾತ ಜಂಬೂಸವಾರಿಯ ಸೂತ್ರಧಾರಿಗಳು
ಮೈಸೂರು, ಸೆಪ್ಟೆಂಬರ್ 29 : ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಸಿದ್ಧತೆಗಳು ಸಮಾರೋಪಾದಿಯಲ್ಲಿ ಸಾಗಿದೆ. ಈ ಬಾರಿ 15 ಆನೆಗಳು ವಿವಿಧ ಆನೆ ಶಿಬಿರಗಳಿಂದ ಮೈಸೂರಿಗೆ ಆಗಮಿಸಿ ಎಲ್ಲ ರೀತಿಯ ತಾಲೀಮುಗಳನ್ನು ಮುಗಿಸಿ ಜಂಬೂಸವಾರಿಗೆ ಸಿದ್ಧವಾಗಿವೆ.
ಸೆ.30ರ ಶನಿವಾರ ಜಂಬೂ ಸವಾರಿ ನಡೆಯಲಿದ್ದು, ಈ ಮೂಲಕ 10 ದಿನದ ದಸರಾಕ್ಕೆ ತೆರೆ ಬೀಳಲಿದೆ. ಆ ನಂತರ ಗಜಪಡೆ ತಮ್ಮ ಶಿಬಿರಗಳತ್ತ ತೆರಳಲಿವೆ. ಈ ಬಾರಿ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ 15 ಆನೆಗಳು ಭಾಗವಹಿಸಲಿದ್ದು, ಅವುಗಳ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.
ಮುಂದಿನ ವರ್ಷಗಳಲ್ಲಿ ಅಂಬಾರಿ ಹೊರಲು ಎಲ್ಲ ರೀತಿಯಲ್ಲೂ ಸೂಕ್ತ ದೇಹದಾಢ್ರ್ಯ ಹೊಂದಿರುವ ಆನೆ ಭೀಮ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. ಭೀಮನಿಗೀಗ 17ವರ್ಷ ವಯಸ್ಸು. 3,410 ಕೆಜಿ ತೂಕವನ್ನು ಈ ಆನೆ ಹೊಂದಿದೆ. 2002ರಲ್ಲಿ ತಾಯಿಯಿಂದ ಬೇರ್ಪಟ್ಟು ಹಸುಗಳೊಂದಿಗೆ ಊರಿಗೆ ಬಂದಿದ್ದ 2 ವರ್ಷದ ಈತನನ್ನು ಮತ್ತಿಗೋಡು ಆನೆ ಶಿಬಿರಲ್ಲಿ ಹಾಲುಣಿಸಿ ಸಾಕಲಾಗಿದೆ.

ಅಂಬಾರಿ ಹೊರುವ ಆನೆ ಅರ್ಜುನ
57ವರ್ಷದ ಅರ್ಜುನ ಗಜಪಡೆಯ ಕ್ಯಾಪ್ಟನ್. 2012ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ವಹಿಸಿಕೊಂಡಿದ್ದಾನೆ. 1968ರಲ್ಲಿ ಹೆಚ್.ಡಿ.ಕೋಟೆಯ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾದ ಮೂಲಕ ಈತನನ್ನು ಸೆರೆ ಹಿಡಿಯಲಾಯಿತು. ಬಳ್ಳೆ ಆನೆಶಿಬಿರ ಈತನ ವಾಸ್ತವ್ಯದ ಕೇಂದ್ರ. ಎತ್ತರ 2.95ಮೀ. ಉದ್ದ 3.75 ಮೀ. ಅಂದಾಜು 5,250ಕೆಜಿ ತೂಕ.

14 ಬಾರಿ ಅಂಬಾರಿ ಹೊತ್ತಿರುವ ಬಲರಾಮ
ಮೈಸೂರು ದಸರಾದಲ್ಲಿ ಸುಮಾರು 20 ವರ್ಷಗಳಿಂದ ಭಾಗವಹಿಸುತ್ತಾ ಬಂದಿರುವ ಆನೆ ಬಲರಾಮ, 14ಬಾರಿ ಚಿನ್ನದ ಅಂಬಾರಿ ಹೊತ್ತು ದಾಖಲೆ ಬರೆದಿದ್ದಾನೆ. 1978ರಲ್ಲಿ ಈತ ಕೊಡಗಿನ ಕಟ್ಟೆಪುರ ಅರಣ್ಯದಲ್ಲಿ ಸೆರೆ ಸಿಕ್ಕಿದ್ದನು. ತಿತಿಮತಿಯ ಮತ್ತಿಗೋಡು ಆನೆಶಿಬಿರದಲ್ಲಿ ಇದು ವಾಸ್ತವ್ಯ ಹೂಡುತ್ತದೆ. 59ವರ್ಷ ವಯಸ್ಸಾಗಿದೆ. 2.7ಮೀ ಎತ್ತರ, 3.70 ಮೀ. ಉದ್ದ, ಸುಮಾರು 4,990 ಕೆಜಿ ತೂಕವಿದೆ.

ಸಂಗೀತದ ಗಾಡಿ ಎಳೆಯುವ ಅಭಿಮನ್ಯು
ಜಂಬೂಸವಾರಿಯಲ್ಲಿ 18ವರ್ಷಗಳ ಕಾಲ ಭಾಗವಹಿಸಿ ಅನುಭವ ಹೊಂದಿರುವ ಅಭಿಮನ್ಯುಗೆ ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಜವಬ್ದಾರಿ ನೀಡಲಾಗಿದೆ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಿದ್ದಾನೆ. 51ವರ್ಷದ ಅಭಿಮನ್ಯುವನ್ನು 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಪುಂಡ ಆನೆಗಳನ್ನು ಸದೆಬಡಿದು ಹೆಡೆಮುರಿಗೆ ಕಟ್ಟುವುದರಲ್ಲಿ ಈತ ನಿಸ್ಸೀಮ. ತಿತಿಮತಿಯ ಮತ್ತಿಗೋಡು ಆನೆ ಶಿಬಿರದಲ್ಲಿರುತ್ತಾನೆ. 2.68 ಮೀ ಎತ್ತರ, 3.51 ಮೀ. ಉದ್ದ ಹಾಗೂ ಅಂದಾಜು 4,870ಕೆಜಿ ತೂಕ ಹೊಂದಿದ್ದಾನೆ.

ಕಾಡಾನೆ ಪಳಗಿಸುವ ನಿಸ್ಸೀಮ
ಸುಮಾರು 62ವರ್ಷ ಪ್ರಾಯದ ಹಿರಿಯನಾದ ಗಜೇಂದ್ರ ಕಾಡಾನೆಗಳನ್ನು ಪಳಗಿಸುವುದರಲ್ಲಿ ಎತ್ತಿದಕೈ. 1987ರಲ್ಲಿ ಕೊಡಗಿನ ಕಟ್ಟೆಪುರ ಅರಣ್ಯದಲ್ಲಿ ಸೆರೆಸಿಕ್ಕಿದ್ದು ಚಾಮರಾಜನಗರದ ಕೆ.ಗುಡಿ ಆನೆಶಿಬಿರದಲ್ಲಿರುತ್ತಾನೆ. 2.94ಮೀ. ಎತ್ತರ, 3.80 ಮೀ. ಉದ್ದ ಮತ್ತು ಅಂದಾಜು 4,600ಕೆಜಿ ತೂಕ ಹೊಂದಿದ್ದಾನೆ. 18ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಪಟ್ಟದ ಆನೆಯ ಜವಾಬ್ದಾರಿ ಈತನದ್ದಾಗಿರುತ್ತದೆ.

10 ವರ್ಷಗಳಿಂದ ದಸಾರದಲ್ಲಿ ವಿಜಯಳ ಹಜ್ಜೆ
ಗಜಪಡೆಗಳ ಪೈಕಿ ಸಾಧು ಸ್ವಭಾವದ ಹೆಣ್ಣು ಆನೆ ವಿಜಯ. ಕಳೆದ 10 ವರ್ಷಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದಾಳೆ. ದುಬಾರೆ ಆನೆಶಿಬಿರದಲ್ಲಿರುವ ಈಕೆಯನ್ನು 1963ರಲ್ಲಿ ದುಬಾರೆ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. 2.29ಮೀ. ಎತ್ತರ, 3.00ಮೀ ಉದ್ದ ಹಾಗೂ ಅಂದಾಜು 2,770ಕೆಜಿ ತೂಕವನ್ನು ಹೊಂದಿದ್ದಾಳೆ.

6ನೇ ದಸರಾಗೆ ಬಂದ ಕಾವೇರಿ
ಕೊಡಗಿನ ಸೋಮವಾರಪೇಟೆಯ ಅಡನಾಡೂರು ಅರಣ್ಯಪ್ರದೇಶದಲ್ಲಿ 2009ರಲ್ಲಿ ಸೆರೆಸಿಕ್ಕಿರುವ ಹೆಣ್ಣಾನೆ ಕಾವೇರಿಗೆ ಈಗ 38ವರ್ಷ. 2.50ಮೀ ಎತ್ತರ, 3.32ಮೀ ಉದ್ದ ಹಾಗೂ ಅಂದಾಜು 2,820 ಕೆಜಿ ತೂಕ ಹೊಂದಿರುವ ಈಕೆ ದುಬಾರೆ ಆನೆಶಿಬಿರದವಳು. ಈಕೆಗೆ ಇದು 6ನೇ ಬಾರಿಯ ದಸರಾ ಮಹೋತ್ಸವವಾಗಿದೆ.

61 ವರ್ಷದ ಪ್ರಶಾಂತ
ಪ್ರಶಾಂತ ಹಿರಿಯನಾಗಿದ್ದು, 61ವರ್ಷ ವಯಸ್ಸಾಗಿದೆ. ಈತನನ್ನು 1993ರಲ್ಲಿ ಕೊಡಗಿನ ಕಾರೆಕೊಪ್ಪ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ದುಬಾರೆಯಲ್ಲಿ ವಾಸ್ತವ್ಯ ಹೂಡಿದ್ದಾನೆ. 2.61ಮೀ ಎತ್ತರ, 3.46 ಮೀ ಉದ್ದ ಮತ್ತು 4329ಕೆಜಿ ತೂಕ ಹೊಂದಿದ್ದಾನೆ. ಬೇರೆ ಬೇರೆ ಸಮಾರಂಭಗಳಲ್ಲಿ ಭಾಗವಹಿಸಿ ಅನುಭವ ಇರುವ ಈತ 11ನೇ ಬಾರಿಗೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.

ಗೋಪಾಲಸ್ವಾಮಿಗೆ 6ನೇ ದಸರಾ
6ನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿರುವ ಗೋಪಾಲಸ್ವಾಮಿ ತಿತಿಮತಿಯ ಮತ್ತಿಗೋಡು ಆನೆಶಿಬಿರದವನಾಗಿದ್ದು, 35ವರ್ಷ ವಯಸ್ಸಾಗಿದೆ. ಶಾಂತ ಸ್ವಭಾವದ ಬಲಶಾಲಿ ಆನೆ ಇದು. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸೆರೆಹಿಡಿಯಲಾಗಿದೆ. 2.62 ಮೀ. ಎತ್ತರ, 3.42ಮೀ. ಉದ್ದ ಅಂದಾಜು 3,242ಕೆಜಿ ತೂಕ ಹೊಂದಿದ್ದಾನೆ.

12ನೇ ದಸರಾದಲ್ಲಿ ವಿಕ್ರಮನ ಹೆಜ್ಜೆ
ವಿಕ್ರಮನನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ದುಬಾರೆ ಆನೆ ಶಿಬಿರದಲ್ಲಿ ವಾಸ್ತವ್ಯ. 44ವರ್ಷ ವಯಸ್ಸು, 2.60ಮೀ. ಎತ್ತರ, 3.43ಮೀ ಉದ್ದ ಹಾಗೂ ಅಂದಾಜು 3,820ಕೆಜಿ ತೂಕ ಹೊಂದಿದೆ. 12ನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದ್ದು, ಈ ಬಾರಿ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸುವ ಜವಬ್ದಾರಿ ನೀಡಲಾಗುತ್ತದೆ.

7ನೇ ಬಾರಿ ದಸರಾದಲ್ಲಿ ಗೋಪಿ
1993ರಲ್ಲಿ ಕಾರೆಕೊಪ್ಪ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾದ ಗೋಪಿ ದುಬಾರೆ ಆನೆಶಿಬಿರದವನು. ಅಲ್ಲಿ ಸಫಾರಿ ಕಾರ್ಯ ನಿರ್ವಹಿಸುತ್ತಾನೆ. 35ವರ್ಷ, ಎತ್ತರ 2.92 ಮೀ. ಉದ್ದ 3.42 ಮೀ. ಅಂದಾಜು ತೂಕ 3710ಕೆಜಿ. ಇದು ಈತನಿಗೆ 7ನೇ ಬಾರಿಯ ದಸರಾವಾಗಿದೆ.

14ನೇ ದಸರಾದಲ್ಲಿ ಬಲಶಾಲಿ ಹರ್ಷ
14ನೇ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಹರ್ಷನಿಗೆ ಈಗ 50ವರ್ಷ. 2.55 ಮೀ ಎತ್ತರ, 3.40 ಮೀ ಉದ್ದ ಅಂದಾಜು 3290ಕೆಜಿ ತೂಕವನ್ನು ಹೊಂದಿದ್ದಾನೆ. ದುಬಾರೆ ಆನೆಶಿಬಿರದವನಾದ ಈತನನ್ನು 1990ರಲ್ಲಿ ದೊಡ್ಡಬೆಟ್ಟದಲ್ಲಿ ಸೆರೆಹಿಡಿಯಲಾಗಿದೆ. ಈತ ಬಲಶಾಲಿ ಎಂಬುದರಲ್ಲಿ ಎರಡು ಮಾತಿಲ್ಲ.

ಈತನ ವಯಸ್ಸು 35
ದ್ರೋಣನನ್ನು ಹಾಸನದ ಯಸಳೂರಿ ಮಾದಳ್ಳಿ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು ಇದೀಗ 35 ವರ್ಷ. ಪುಂಡಾಟ ನಡೆಸುತ್ತಿದ್ದ ಸಂದರ್ಭ ಮಾನವ ವನ್ಯಪ್ರಾಣಿ ಸಂಘರ್ಷ ಕಾರ್ಯಾಚರಣೆ ಮೂಲಕ ಹಿಡಿಯಲಾಗಿದ್ದು, ಸದ್ಯ ಮತ್ತಿಗೋಡು ಆನೆಶಿಬಿರದಲ್ಲಿ ಈತನ ವಾಸ್ತವ್ಯವಾಗಿದೆ.

61 ವರ್ಷದ ವರಲಕ್ಷ್ಮೀ
ಜಂಬೂಸವಾರಿಯಲ್ಲಿ 8ನೇ ಬಾರಿಗೆ ಪಾಲ್ಗೊಳ್ಳುತ್ತಿರುವ ಮತ್ತಿಗೋಡು ಆನೆ ಶಿಬಿರದ ವರಲಕ್ಷ್ಮಿಗೆ 61 ವರ್ಷ. 2.46 ಮೀ ಎತ್ತರ ಮತ್ತು 3.34 ಉದ್ದವಿದ್ದು, 4970 ಕೆಜಿ ತೂಕ ಹೊಂದಿದ್ದಾಳೆ. ಈಕೆಗೆ ಇದು ಮೂರನೇ ವರ್ಷದ ಜಂಬೂಸವಾರಿಯಾಗಿದೆ. 1977ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಸೆರೆಹಿಡಿಯಲಾಗಿದೆ.

ಭವಿಷ್ಯದ ಅಂಬಾರಿ ಆನೆ ಭೀಮ
ಮುಂದಿನ ವರ್ಷಗಳಲ್ಲಿ ಅಂಬಾರಿ ಹೊರಲು ಎಲ್ಲ ರೀತಿಯಲ್ಲೂ ಸೂಕ್ತ ದೇಹದಾಢ್ರ್ಯ ಹೊಂದಿರುವ ಭೀಮನಿಗೀಗ 17ವರ್ಷ. 3410 ಕೆಜಿ ತೂಕವಿರುವ ಈತ 2.54 ಮೀ. ಎತ್ತರ, 3.30ಮೀ. ಉದ್ದವಿದ್ದಾನೆ. 2002ರಲ್ಲಿ ತಾಯಿಯಿಂದ ಬೇರ್ಪಟ್ಟು ಹಸುಗಳೊಂದಿಗೆ ಊರಿಗೆ ಬಂದಿದ್ದ 2ವರ್ಷದ ಈತನನ್ನು ಮತ್ತಿಗೋಡು ಆನೆ ಶಿಬಿರಲ್ಲಿ ಹಾಲುಣಿಸಿ ಸಾಕಲಾಗಿದೆ.












Click it and Unblock the Notifications