ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಗೆ ಮೈಸೂರಿನಲ್ಲಿ 'ಕನ್ನಡಿ' ತಂತ್ರ: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಅಥವಾ ಗೋಡೆಗಳ ಮೂಲೆಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ನಮ್ಮ ದೇಶದ ನಗರಗಳಲ್ಲಿ ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಈ ಸಮಸ್ಯೆಯನ್ನು ತಡೆಗಟ್ಟಲು ದಂಡ ವಿಧಿಸುವುದು, ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು ಸಾಮಾನ್ಯ. ಆದರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಅಧಿಕಾರಿಗಳು ಕಂಡುಕೊಂಡಿರುವ ವಿನೂತನ ಹಾಗೂ ವಿಶಿಷ್ಟ ಉಪಾಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಮೈಸೂರು ಮಹಾನಗರ ಪಾಲಿಕೆ ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ವಿನೂತನ ಹೆಜ್ಜೆ ಇಟ್ಟಿದೆ. ನಗರದ ಉಪನಗರ ಬಸ್ ನಿಲ್ದಾಣದ ಸಮೀಪವಿರುವ ಗೋಡೆಯೊಂದು ದೀರ್ಘಕಾಲದಿಂದ ಸಾರ್ವಜನಿಕ ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿತ್ತು. ಎಷ್ಟೇ ಎಚ್ಚರಿಕೆ ನೀಡಿದರೂ ಜನ ಕ್ಯಾರೇ ಎನ್ನುತ್ತಿರಲಿಲ್ಲ. ಈ ಸಮಸ್ಯೆಗೆ ಶಾಶ್ವತ ಮುಕ್ತಿ ಹಾಡಲು ನಿರ್ಧರಿಸಿದ ಪಾಲಿಕೆ, ದಂಡ ವಿಧಿಸುವ ಅಥವಾ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವ ಬದಲು ವಿಭಿನ್ನವಾದ ಅಸ್ತ್ರವನ್ನು ಪ್ರಯೋಗಿಸಿದೆ.

Mysuru

ಅದೇ 'ಕನ್ನಡಿ ಐಡಿಯಾ'. ಆ ನಿರ್ದಿಷ್ಟ ಗೋಡೆಯ ಉದ್ದಕ್ಕೂ ಹೊಳೆಯುವ ಕನ್ನಡಿಗಳನ್ನು ಅಳವಡಿಸಲಾಗಿದೆ. ಇದರ ಉದ್ದೇಶ ಬಹಳ ಸರಳ- ಯಾರಾದರೂ ಅಲ್ಲಿ ಮೂತ್ರ ವಿಸರ್ಜನೆಗೆ ಮುಂದಾದರೆ, ಅವರು ತಮ್ಮದೇ ಮುಖವನ್ನು ಆ ಕನ್ನಡಿಯಲ್ಲಿ ನೋಡಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಕೃತ್ಯವೆಸಗುವಾಗ ತಮ್ಮನ್ನು ತಾವೇ ಕನ್ನಡಿಯಲ್ಲಿ ನೋಡಿಕೊಳ್ಳುವುದು ತೀವ್ರ ಮುಜುಗರ ತರಿಸುತ್ತದೆ, ಇದರಿಂದ ಅವರು ಆ ಕೆಲಸದಿಂದ ತಾವಾಗಿಯೇ ಹಿಂದೆ ಸರಿಯುತ್ತಾರೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಈ ವಿನೂತನ ಉಪಕ್ರಮದ ವಿಡಿಯೋವೊಂದು ಇದೀಗ ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕನ್ನಡಿ ಅಳವಡಿಸಿರುವ ಗೋಡೆಯ ಉದ್ದಕ್ಕೂ ನಡೆದುಕೊಂಡು ಹೋಗುತ್ತಾ, ಇದು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. "ಇಲ್ಲಿ ಮೂತ್ರ ವಿಸರ್ಜನೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಕೇವಲ ಬೋರ್ಡ್ ಹಾಕಿದ್ದರೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಜನರನ್ನು ತಡೆಯಲು ಇದೊಂದೇ ಸರಿಯಾದ ಮಾರ್ಗ" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಪಾಲಿಕೆಯ ಈ ಸೈಕಲಾಜಿಕಲ್ ಉಪಾಯಕ್ಕೆ ನೆಟ್ಟಿಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕರು ಇದನ್ನು "ಅತ್ಯುತ್ತಮ ಆಲೋಚನೆ" ಎಂದು ಶ್ಲಾಘಿಸಿದ್ದು, ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶದ ಇತರ ನಗರಗಳಲ್ಲೂ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮಾನಸಿಕವಾಗಿ ಮುಜುಗರ ತರಿಸುವ ಈ ತಂತ್ರ ನಿಜಕ್ಕೂ ಶೇಕಡಾ 100ರಷ್ಟು ಕೆಲಸ ಮಾಡುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ, ಸಾರ್ವಜನಿಕವಾಗಿ ಆ ಸ್ಥಿತಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲು ಯಾರೂ ಬಯಸುವುದಿಲ್ಲ ಎಂದು ಕೆಲವರು ತಮಾಷೆ ಮಾಡಿದ್ದಾರೆ.

ಆದರೆ, ಇನ್ನೂ ಕೆಲವರು ಈ ಕನ್ನಡಿಗಳ ನಿರ್ವಹಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇವುಗಳನ್ನು ಕಳ್ಳತನ ಮಾಡದೆ ಅಥವಾ ಹಾನಿಗೊಳಿಸದೆ ಹಾಗೆಯೇ ಉಳಿಯುತ್ತವೆಯೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಏನೇ ಆಗಲಿ, ಮೈಸೂರು ಮಹಾನಗರ ಪಾಲಿಕೆಯ ಈ ಐಡಿಯಾ ಮಾತ್ರ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+