ಜಿಎಸ್ ಟಿ ಕಟ್ಟದೆ 7.5 ಕೋಟಿ ವಂಚಿಸಿದ ಉದ್ಯಮಿ ಬಂಧನ
ಮೈಸೂರು, ಜುಲೈ 4: ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಜಿಎಸ್ ಟಿ ಕಟ್ಟದೇ ಸರ್ಕಾರಕ್ಕೆ ವಂಚಿಸಿದ ಉದ್ಯಮಿಯನ್ನು ಜಿಎಸ್ ಟಿ ವಿಚಕ್ಷಣ ದಳ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪಂಜಾಬ್ ಮೂಲದ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಮಾಲೀಕ ಅನಿಲ್ ಮೆಹ್ರಾ ಎಂಬಾತ ಬಂಧಿತ ವ್ಯಕ್ತಿ. ಕಳೆದ ಒಂದೂವರೆ ವರ್ಷದಿಂದ ಕಚ್ಚಾ ವಸ್ತುಗಳನ್ನು ತೆಗೆದುಕೊಳ್ಳದೆ 7.5 ಕೋಟಿ ರೂ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಜಿಎಸ್ ಟಿ ಕಟ್ಟದೆ ವಂಚಿಸುತ್ತಿದ್ದು, ಈತನ ವಂಚನೆ ಬಗ್ಗೆ ಸಿಕ್ಕಿದ್ದ ಸುಳಿವಿನ ಮೇರೆಗೆ ಜಿಎಸ್ ಟಿ ವಿಚಕ್ಷಣ ದಳ ವಿಚಾರಣೆಗೆ ಕರೆಸಿ ಕಚೇರಿಯಲ್ಲೇ ಬಂಧಿಸಿದೆ.
ತೆರಿಗೆ ಪಾವತಿಸಿದರೆ ದೊರೆತ ಕ್ರೆಡಿಟ್ ಅನ್ನು, ತಮ್ಮ ಸಂಸ್ಥೆಯಲ್ಲಿ ಉತ್ಪಾದನೆಯಾಗುವ ವಸ್ತುಗಳ ಮಾರಾಟ ಮಾಡುವಾಗ ವಿನಾಯಿತಿ ಪಡೆಯಬಹುದಾಗಿದೆ. ಆದರೆ ಕಚ್ಛಾ ವಸ್ತುಗಳನ್ನು ನಕಲಿ ಇನ್ ವಾಯ್ಸ್ ಕಳಿಸಿ 7.5 ಕೋಟಿ ರೂ. ಜಿಎಸ್ ಟಿ ವಂಚಿಸಿದ್ದರು. ಹೂಟಗಳ್ಳಿಯಲ್ಲಿರುವ ಸ್ಪೆಕ್ಟ್ರಾ ಪೈಪ್ ಕಂಪನಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ದಾಖಲೆ ನೀಡಿ 7.5 ಕೋಟಿ ರೂ. ಜಿಎಸ್ ಟಿ ವಂಚಿಸಿರುವುದು ಕಂಡು ಬಂದಿದೆ. ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ವಂಚನೆ ನಡೆಸಿರುವುದು ದೃಢಪಟ್ಟಿದೆ.

ಇದಾದ ಕೂಡಲೇ ಉದ್ಯಮಿ ಅನಿಲ್ ಮೆಹ್ರಾ ಅವರನ್ನು ತಮ್ಮ ವಶಕ್ಕೆ ಪಡೆದ ಅಧಿಕಾರಿಗಳು, ಕಂಪನಿಯಲ್ಲಿದ್ದ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡರು. ವಂಚನೆ ಪ್ರಕರಣದಲ್ಲಿ ಬಂಧಿಸಲಾದ ಮೆಹ್ರಾ ಅವರನ್ನು ಇಂದು ಬೆಳಿಗ್ಗೆ ಕೆ.ಆರ್.ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಸುಮಾರು ಒಂದೂವರೆ ಗಂಟೆ ತಪಾಸಣೆ ನಡೆಸಿದ ನಂತರ ಆರೋಗ್ಯ ಉತ್ತಮವಾಗಿರುವುದಾಗಿ ವೈದ್ಯರು ದೃಢಪಡಿಸಿದರು. ಬಳಿಕ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆತಂದು ಹೃದಯ ಸಂಬಂಧಿ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.












Click it and Unblock the Notifications