ಅನ್ಯ ಪಕ್ಷಗಳಿಗೆ ಗುಳೆ ಹೊರಟ ಮೈಸೂರು ಕೈ ನಾಯಕರು
ಮೈಸೂರು, ಅಕ್ಟೋಬರ್ 07 : ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಕಾಂಗ್ರೆಸ್ ನಲ್ಲಿ ಪಕ್ಷಾಂತರ ಚಟುವಟಿಕೆಗಳು ಆರಂಭವಾಗಿವೆ.
ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದರೂ ಯಾವುದೇ ಸ್ಥಾನಮಾನಗಳನ್ನು ನೀಡದೆ ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಆರೋಪ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರದ್ದಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ಸದ್ದಿಲ್ಲದೆ ಪಕ್ಷಾಂತರ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.

ಇದಕ್ಕೆ ಮುನ್ನುಡಿ ಎಂಬಂತೆ ಬನ್ನೂರು ವ್ಯಾಪ್ತಿಯ ಕಾಂಗ್ರೆಸ್ ಮುಖಂಡ ಎಸ್. ಶಂಕರ್ ಅವರು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರುವ ತೀರ್ಮಾನ ಕೈಗೊಂಡಿದ್ದಾರೆ.
ಹಲವು ದಶಕಗಳಿಂದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಎಸ್. ಶಂಕರ್ ಇದೀಗ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ತಮಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡಿಲ್ಲ ಎಂಬ ಕಾರಣಕ್ಕೆ ಅಕ್ಟೋಬರ್ 8ರಂದು ಬನ್ನೂರಿನ ಪುಟ್ಬಾಲ್ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ.
ಇದಕ್ಕಾಗಿ ಬೃಹತ್ ವೇದಿಕೆಯ ನಿರ್ಮಾಣ ಮಾಡಲಾಗಿದೆ. ಇದು ತನ್ನ ಶಕ್ತಿ ಪರೀಕ್ಷೆ ಎಂಬಂತೆ ಬಿಂಬಿಸಿಕೊಳ್ಳುವ ಕಾರ್ಯವೂ ಹೌದು ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.

ಇಷ್ಟಕ್ಕೂ ಕಾಂಗ್ರೆಸ್ ತೊರೆಯಲು ಅವರಿಗೆ ತಿ.ನರಸೀಪುರ ಕ್ಷೇತ್ರದಿಂದ ಟಿಕೆಟ್ ನೀಡಲು ಹಿಂದೇಟು ಹಾಕಿರುವುದಲ್ಲದೆ, ವಿಧಾನಪರಿಷತ್ ಟಿಕೆಟ್ ನೀಡದೆ ವಂಚಿಸಿದ್ದು, ನಿಗಮ ಮಂಡಳಿಯಲ್ಲಿ ಸ್ಥಾನ ಕೈತಪ್ಪಿದ್ದು ಹೀಗೆ ಹತ್ತು ಹಲವು ಕಾರಣಗಳನ್ನು ನೀಡುವ ಶಂಕರ್ ತಮ್ಮೊಂದಿಗೆ ಒಂದಷ್ಟು ಕಾರ್ಯಕರ್ತರನ್ನು ಕೂಡ ಕರೆದೊಯ್ಯುತ್ತಿದ್ದಾರೆ.
ಇಲ್ಲಿನ ಮುಖಂಡರು ಹಾಗೂ ಕಾರ್ಯಕರ್ತರನ್ನು ಹಿಡಿದಿಟ್ಟು ಕೊಳ್ಳುವ ಜಾಣ್ಮೆಯೂ ಮೈಸೂರು ಜಿಲ್ಲಾ ಕಾಂಗ್ರೆಸ್ ಗೆ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹಲವು ಬೆಳವಣಿಗೆಗಳು ಕಾಂಗ್ರೆಸ್ ನಲ್ಲಿ ನಡೆದರೆ ಅಚ್ಚರಿಪಡಬೇಕಿಲ್ಲ.












Click it and Unblock the Notifications