Mysore Palace: ಮೈಸೂರು ಅರಮನೆ ಪ್ರವೇಶ ಶುಲ್ಕ ಪರಿಷ್ಕರಣೆ: ಹೆಚ್ಚಿದ ದರ ವಿವರ ಇಲ್ಲಿದೆ!
ಮೈಸೂರು, ಅಕ್ಟೋಬರ್ 25: ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದ ಬೆನ್ನಲೇ ಮೈಸೂರು ಅರಮನೆ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಮೈಸೂರು ಅರಮನೆ ಕಾಣಲು ರಾಜ್ಯದ ಮೂಲೆ ಮೂಲೆಯಿಂದ ಅಷ್ಟೇ ಅಲ್ಲದೇ ಪ್ರತಿ ದಿನ ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಅರಮನೆ ಒಳಾಂಗಣ ಪ್ರವೇಶಿಸಿ ಅರಮನೆ ಒಳಗೆ ನೋಡಲು ಬರುವ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೆಲವು ವ್ಯವಸ್ಥೆಗಳನ್ನು ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ.

ಮೈಸೂರು ಅರಮನೆ ಪ್ರವಾಸಿಗರ ಅನುಕೂಲಕ್ಕಾಗಿ ಅರಮನೆಯ ಒಳಾವರಣದಲ್ಲಿ ಬರುವ ಚಪ್ಪಲಿ ಸ್ಟಾಂಡ್, ಲಗೇಜ್ ಕೊಠಡಿ ಮತ್ತು ಶೌಚಾಲಯಗಳನ್ನು ಪ್ರವಾಸಿಗರಿಗೆ ಉಚಿತಗೊಳಿಸಿ, ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಈ ಬಗ್ಗೆ ಮೈಸೂರು ಅರಮನೆ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅರಮನೆ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಅರಮನೆ ಮಂಡಳಿ ಸಭೆಯ ತೀರ್ಮಾನದಂತೆ ದಿನಾಂಕ 25-10-2024 ರಿಂದ ಜಾರಿಗೆ ಬರುವಂತೆ, ಅರಮನೆಯ ಒಳಾವರಣದಲ್ಲಿ ಬರುವ ಚಪ್ಪಲಿ ಸ್ಟಾಂಡ್, ಲಗೇಜ್ ಕೊಠಡಿ ಮತ್ತು ಶೌಚಾಲಯಗಳನ್ನು ಪ್ರವಾಸಿಗರಿಗೆ ಉಚಿತಗೊಳಿಸಿ, ಅರಮನೆಯ ಪ್ರವೇಶ ಶುಲ್ಕವನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಅರಮನೆ ಪ್ರವೇಶಕ್ಕೆ ಮೊದಲಿದ್ದ ಶುಲ್ಕ್
ಮೈಸೂರು ಅರಮನೆ ಪ್ರವೇಶಕ್ಕೆ ಜಿಎಸ್‌ಟಿ ಒಳಗೊಂಡಂತೆ ಈ ಮೊದಲು ವಯಸ್ಕರಿಗೆ 100 ರೂಪಾಯಿ, 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 50 ರೂಪಾಯಿ, ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ 30 ರೂಪಾಯಿ ಹಾಗೂ ವಿದೇಶಿ ಪ್ರವಾಸಿಗರಿಗೆ 100 ರೂಪಾಯಿ ಇತ್ತು. ಆದರೆ ಇಂದಿನಿಂದ (ಅಕ್ಟೋಬರ್ 25) ಶುಕ್ರವಾರ ಅರಮನೆಯ ಪ್ರವೇಶದ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ.
ಅರಮನೆ ಪ್ರವೇಶಕ್ಕೆ ಈಗಿನ ಶುಲ್ಕ್
ಮೈಸೂರು ಅರಮನೆ ಪ್ರವೇಶಕ್ಕೆ ಜಿಎಸ್‌ಟಿ ಒಳಗೊಂಡಂತೆ ಪರಿಷ್ಕರಿಸಲಾಗಿದ ಶುಲ್ಕವೆಂದರೆ ವಯಸ್ಕರಿಗೆ 120 ರೂಪಾಯಿ, 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂಪಾಯಿ (10 ವರ್ಷದೊಳಗಿನ ಮಕ್ಕಳಿಗೆ ಉಚಿತ), ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರ 50 ರೂಪಾಯಿ ಹಾಗೂ ವಿದೇಶಿ ಪ್ರವಾಸಿಗರಿಗೆ 1,000 ರೂಪಾಯಿ ನಿಗದಿ ಮಾಡಲಾಗಿದೆ ಎಂದು ಅರಮನೆ ಮಂಡಳಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications