ಚನ್ನಪಟ್ಟಣದ ಗೊಂಬೆಗೆ ಜಾಗತಿಕ ಮಾನ್ಯತೆಗೆ ಮೈಸೂರು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಸಂಶೋಧನೆ
ಮೈಸೂರು, ಅಕ್ಟೋಬರ್ 20: ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆಯುವಂತೆ ಮಾಡುವುದು ನನ್ನ ಕನಸು. ಅದಕ್ಕಾಗಿ ಸಂಶೋಧನೆ ನಡೆಸುತ್ತಿದ್ದೇನೆ ಎಂದು ಮೈಸೂರು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ಹೇಳಿದ್ದಾರೆ.
ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ ವತಿಯಿಂದ ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಗ್ ಟೆಕ್ ಶೋನ 2ನೇ ಆವೃತ್ತಿ ಅಂಗವಾಗಿ 'ಉದ್ಯೋಗ ಸ್ಥಳದಲ್ಲಿ ಮಹಿಳೆ' ಕುರಿತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ತ್ರಿಷಿಕಾ ಕುಮಾರಿ, "ನಾನು ಒಮ್ಮೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಪ್ರಯಾಣಿಸುವಾಗ ಚನ್ನಪಟ್ಟಣದ ಗೊಂಬೆ ನೋಡಿದೆ. ನನ್ನ ಮಗನಿಗೂ ಇದು ಇಷ್ಟ. ಬಣ್ಣ ತಯಾರಿಸಲು ಸ್ಥಳೀಯರ ಕೌಶಲ್ಯ ಹಾಗೂ ಇಷ್ಟು ವೌಲ್ಯಯುತ ಗೊಂಬೆಗಳು ವಿದೇಶಗಳಲ್ಲಿಯೂ ದೊರಕುವುದಿಲ್ಲ ಎಂಬುದು ತಿಳಿಯಿತು. ಈ ರೀತಿಯ ಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಎನಿಸಿತು. ಹೀಗಾಗಿ ಈ ಕೌಶಲ್ಯ ಉಳಿಸುವ ನಿಟ್ಟಿನಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಸಂಶೋಧನೆ ಮಾಡುತ್ತಿದ್ದೇನೆ," ಎಂದರು.
"ಸಾಂಸ್ಕೃತಿಕ ನಗರಿ ಮೈಸೂರು ಐಟಿ ಹಬ್ ಆಗಿರುವ ಬೆಂಗಳೂರಿನ ಸನಿಹದಲ್ಲಿದೆ. ಹೀಗಾಗಿ ನಗರನ್ನು ಐಟಿ ಸೆಕ್ಯೂರಿಟಿ ಹಬ್ ಆಗಿ ಬೆಳೆಸಬೇಕೆಂಬುದು ನಮ್ಮ ಬಯಕೆಯಾಗಿದೆ. ಜೊತೆಗೆ ಮೈಸೂರಿನಲ್ಲಿ ಉದ್ಯಮಶೀಲತೆ ಬೆಳೆಸಬೇಕೆಂಬುದು ನಮ್ಮ ಗುರಿಯಾಗಿತ್ತು. ಇದಕ್ಕಾಗಿ ನಾನು ಹಾಗೂ ಯದುವೀರ್ ಸೇರಿ ಒಂದು ಫೌಂಡೇಶನ್ ಆರಂಭಿಸಿದೆವು. ನಾನು ಟೆಕ್ನಾಲಜಿ ಹಿನ್ನೆಲೆಯಿಂದ ಬಂದವಳಲ್ಲ. ಇಲ್ಲಿ ಸಾಕಷ್ಟು ಸವಾಲುಗಳಿದ್ದು, ಇದನ್ನು ನಿರ್ವಹಿಸಲು ಸಜ್ಜಾಗಿದ್ದೇವೆ. ಮೈಸೂರಿನಿಂದ ಈ ಕಾರ್ಯ ಮಾಡುತ್ತಿರುವ ಬಗ್ಗೆ ಹೆಮ್ಮೆ ಇದೆ,'' ಎಂದು ಸಂತಸ ವ್ಯಕ್ತಪಡಿಸಿದರು.

ಮಹಾರಾಣಿಯರ ಕೊಡುಗೆ ಬಗ್ಗೆ ಮಾತನಾಡಿದ ತ್ರಿಷಿಕಾ ಕುಮಾರಿ,"ಟಿಪ್ಪು ಸುಲ್ತಾನ್ ತನ್ನ ಕುಟುಂಬವನ್ನೇ ಸೆರೆಯಲ್ಲಿರಿಸಿದ್ದಾಗ, ರಾಣಿ ಲಕ್ಷ್ಮಮ್ಮಣ್ಣಿ ಅವರು 3ನೇ ಕೃಷ್ಣರಾಜ ಒಡೆಯರ್ ಅವರಿಗೆ ಸಂಸ್ಥಾನವನ್ನು ವಾಪಸ್ ತಂದುಕೊಡುವ ಕಾರ್ಯದಲ್ಲಿ ಮುಖ್ಯಪಾತ್ರ ವಹಿಸಿದರು. ಮಾತ್ರವಲ್ಲದೇ ಇಡೀ ರಾಜ್ಯವು ಎಂಡಮಿಕ್ ಪರಿಸ್ಥಿತಿ ಎದುರಿಸಬೇಕಾದಾಗ ಇವರು ಜನರಿಗೆ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಿದರು. ಲಿಂಗರಾಜಮ್ಮಣ್ಣಿ, ದೇವರಾಜಮ್ಮಣ್ಣಿ ಅವರು ಲಿಂಗಾಂಬುಧಿ ಕೆರೆಯಂತಹ ದೊಡ್ಡ ಕೆರೆಗಳನ್ನು ನಿರ್ಮಿಸಿದ್ದಲ್ಲದೇ ಕರೆಗಳ ಜೀರ್ಣೋದ್ಧಾರಕ್ಕೆ ಒತ್ತು ನೀಡಿದರು. ಹೀಗೆ ಮೈಸೂರು ಸಂಸ್ಥಾನದಲ್ಲಿ ಮಹಿಳಾ ನಾಯಕತ್ವವನ್ನು ಗುರುತಿಸಬಹುದಾಗಿದೆ,'' ಎಂದು ಸ್ಮರಿಸಿದರು.
ಬಿಗ್ ಟೆಕ್ ಶೋನ 2ನೇ ಆವೃತ್ತಿ ಅಂಗವಾಗಿ 'ಉದ್ಯೋಗ ಸ್ಥಳದಲ್ಲಿ ಮಹಿಳೆ' ಕುರಿತ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ (ಕೆಡಿಇಎಂ) ಸಿಇಒ ಸಂಜೀವ್ ಗುಪ್ತಾ ಉಪಸ್ಥಿತರಿದ್ದರು.












Click it and Unblock the Notifications