MUDA Scam: ತೀವ್ರಗೊಂಡ ಮುಡಾ ಹಗರಣ ತನಿಖೆ; ಲಕ್ಷಕ್ಕೂ ಅಧಿಕ ದಾಖಲೆ ಪರಿಶೀಲನೆ
ಮುಡಾ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಒಂದು ಕಡೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ವಿಚಾರಣೆ ತೀವ್ರಗೊಂಡಿದೆ. ಸಿಎಂ ಸಿದ್ದರಾಮಯ್ಯ ಮೇಲೆ ಆರೋಪ ಬಂದಿರುವ ಕಾರಣ, ಮುಡಾ ಹಗರಣ ಮಹತ್ವ ಪಡೆದುಕೊಂಡಿದ್ದು, ಬಗೆದಷ್ಟೂ ಹಲವು ಸ್ಫೋಟಕ ಅಂಶಗಳು ಬಯಲಾಗುತ್ತಿವೆ.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗ ತನಿಖೆ ನಡೆಸುತ್ತಿದ್ದು, ಲಕ್ಷಕ್ಕೂ ಹೆಚ್ಚು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಆಗಿರುವ ಎಲ್ಲಾ ನಿವೇಶನಗಳ ಹಂಚಿಕೆ, ಅಕ್ರಮದ ಕುರಿತು ಪಿ.ಎನ್.ದೇಸಾಯಿ ಏಕ ಸದಸ್ಯ ವಿಚಾರಣಾ ಆಯೋಗ ತನಿಖೆ ನಡೆಸುತ್ತಿದೆ. ಎಲ್ಲಿ ತಪ್ಪಾಗಿದೆ, ಯಾವ ಹಂತದಲ್ಲಿ ನಿಯಮಗಳು, ಕಾನೂನು ಉಲ್ಲಂಘಿಸಿ ತೀರ್ಮಾನ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ವರದಿ ಕೈಸೇರಲಿದೆ ಎಂದು ಹೇಳಿದರು.
ಯಾರನ್ನೂ ರಕ್ಷಣೆ ಮಾಡಲ್ಲ
ಮಾಜಿ ಮುಡಾ ಆಯುಕ್ತ ಡಿ.ಬಿ.ನಟೇಶ್ ಅವರನ್ನು ಅಮಾನತು ಮಾಡದೇ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ತನಿಖೆ ನಡೆಯುತ್ತಿದ್ದು, ವರದಿ ಬರುವವರೆಗೂ ಕಾಯಿರಿ. ಮುಡಾದಲ್ಲಿ ಅಕ್ರಮ ನಡೆಸಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುತ್ತದೆ. ಮೇಲ್ನೋಟಕ್ಕೆ ಈ ಹಿಂದಿನ ಆಯುಕ್ತರು ತಪ್ಪು ಮಾಡಿರುವ ಬಗ್ಗೆ ಇಲಾಖೆ ವರದಿ ನೀಡಿರುವ ಕಾರಣ ದಿನೇಶ್ ಕುಮಾರ್ ಅವರನ್ನು ಅಮಾನತುಪಡಿಸಲಾಗಿದೆ ಎಂದು ಹೇಳಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ತಮ್ಮ ಅಧ್ಯಕ್ಷತೆಯಲ್ಲಿರುವ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 848 ನಿವೇಶನಗಳನ್ನು ಪಡೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಎಚ್.ವಿ.ರಾಜೀವ್ ನಿವೇಶನ ತೆಗೆದುಕೊಂಡಿದ್ದಾರಾ? ಅದು ಗೊತ್ತಿಲ್ಲ. ನೀವು ಹೇಳಿದ ಮೇಲೆ ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಮೈಸೂರಿಗೆ ಆಗಮಿಸಿದ್ದ ಸಚಿವ ಬೈರತಿ ಸುರೇಶ್, ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಮಾಡಿಸಿ ವಾಪಸಾದರು.












Click it and Unblock the Notifications