ಮುಸ್ಲಿಮರು ಹಂದಿ ಮಾಂಸ ತಿನ್ನದಿರುವುದು ತಪ್ಪು ಎನ್ನುತ್ತಾರಾ ಹಂಸಲೇಖ?: ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರು, ನವೆಂಬರ್ 15: "ಉಡುಪಿಯ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖರವರು ಪರಿಜ್ಞಾನದಿಂದ ಮಾತನಾಡಬೇಕಿತ್ತು. ಜನಾಭಿಪ್ರಾಯದ ವಿರುದ್ಧ ಮಾತನಾಡಿ ನಂತರ ಕ್ಷಮೆಯಾಚಿಸುವ ಚಾಳಿ ಹೆಚ್ಚಾಗಿದೆ," ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಕಿಡಿಕಾರಿದ್ದಾರೆ.
ಹಂಸಲೇಖರವರ ವಿವಾದಾತ್ಮಕ ಹೇಳಿಕೆ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, "ಪೇಜಾವರ ಶ್ರೀಗಳು ಕೇವಲ ಒಂದು ಜಾತಿಯ ಸಂತರು ಅಲ್ಲ. ಅವರು ರಾಮ ಜನ್ಮಭೂಮಿಯ ಉಳಿವಿಗಾಗಿ ಹೋರಾಟ ಮಾಡಿದವರು. ದಲಿತ ಕೇರಿಗಳಿಗೆ ತೆರಳಿ ಒಗ್ಗಟ್ಟಿನ ಮನೋಭಾವದಲ್ಲಿ ಸಂಘಟನೆ ಮಾಡುತ್ತಿದ್ದವರು," ಎಂದರು.
"ಪೇಜಾವರ ಶ್ರೀಗಳು ಬೇರೆ ರೀತಿಯ ಜಾತಿ ಸ್ವಾಮೀಜಿ ರೀತಿ ಅಲ್ಲ. ಕರ್ಮಠ ವ್ಯವಸ್ಥೆಯನ್ನು ಮೀರಿ ಸಮಾನತೆ ಸಾರಿದವರು ಪೇಜಾವರ ಶ್ರೀಗಳು. ಸಾಧು-ಸಂತರ ಆಹಾರ ಪದ್ಧತಿ ಸಸ್ಯಾಹಾರ. ಮನಸ್ಸಿನ ತಾರತಮ್ಯ ತೆಗೆದು ಹಾಕಲು ಶ್ರೀಗಳು ಹೋಗಿದ್ದರೆ ಹೊರತು ಆಹಾರ ಪದ್ಧತಿಯ ಸಮಾನತೆಗೆ ಅಲ್ಲ. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖರವರು ಪರಿಜ್ಞಾನದಿಂದ ಮಾತನಾಡಬೇಕಿತ್ತು. ಜನಾಭಿಪ್ರಾಯದ ವಿರುದ್ಧ ಮಾತನಾಡಿ ನಂತರ ಕ್ಷಮೆಯಾಚಿಸುವ ಚಾಳಿ ಹೆಚ್ಚಾಗಿದೆ," ಎಂದು ಕಿಡಿಕಾರಿದರು.
"ನಿಮ್ಮ ಮನೆಗೆ ಮುಸ್ಲಿಂ ಸ್ನೇಹಿತರನ್ನು ಕರೆಯಿರಿ. ಅವರಿಗೆ ಹಂದಿ ಮಾಂಸದ ಊಟ ಹಾಕಿ. ಅವರು ತಿನ್ನುತ್ತಾರಾ ನೋಡಿ? ಮುಸ್ಲಿಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದು ನಿಷೇಧ. ಅದಕ್ಕೆ ಅವರು ತಿನ್ನುವುದಿಲ್ಲ. ಆಗ ಅದನ್ನು ತಪ್ಪು ಎನ್ನುತ್ತೀರಾ? ಪ್ರಗತಿಪರ ಎನ್ನಿಸಿಕೊಳ್ಳುವ ಗೀಳಿಗೆ ಬಿದ್ದು, ಪ್ರಚಾರಕ್ಕಾಗಿ ಹೀಗೆ ಮಾತಾಡುತ್ತಿದ್ದಾರೆ," ಎಂದು ಆರೋಪಿಸಿದರು.
"ಹಂಸಲೇಖ ಅವರು ಬಾಯಿ ತಪ್ಪಿನಿಂದ ಈ ರೀತಿ ಹೇಳಿದ್ದಾರೆ ಎಂದು ಅನ್ನಿಸುವುದಿಲ್ಲ. ಪ್ರಚಾರದ ಗೀಳಿಗೆ ಬಿದ್ದಾಗ ಅಸಂಬದ್ಧ ಮಾತು ಬರುತ್ತದೆ. ಸಾಧು ಸಂತರ ಬಗ್ಗೆ ಮಾತನಾಡುವಾಗಿ ಪರಿಜ್ಞಾನ ಇಟ್ಟುಕೊಂಡು ಎಚ್ಚರಿಕೆಯಿಂದ ಮಾತನಾಡಬೇಕು," ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ರಾಜ್ಯದಲ್ಲಿ ಬಿಟ್ ಕಾಯಿನ್ ಆರೋಪ ವಿಚಾರ ಇಡಿ ಮಾಜಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಲಿ. ಬಿಟ್ ಕಾಯಿನ್ ಬಗ್ಗೆ ಮೊದಲು ಟ್ವೀಟ್ ಮಾಡಿದವರು ಸಿದ್ದರಾಮಯ್ಯ, ನಂತರ ಪ್ರಿಯಾಂಕಾ ಖರ್ಗೆ, ಸುರ್ಜೆವಾಲ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ಹಲವರು ಮಾತಾನಾಡಿದ್ದಾರೆ. ಇವರ ಬಳಿ ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ.

ಸಾಮಾನ್ಯ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುವಂತೆ ಇಲ್ಲಿಯೂ ನಡೆಸಲಿ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಿ. ಕುಮಾರಸ್ವಾಮಿ ಸಹ ಜನಧನ್ ಹಣ ಕದ್ದ ಬಗ್ಗೆ ಮಾತನಾಡಿದ್ದಾರೆ ಅವರಿಗೂ ಇಡಿ ನೋಟಿಸ್ ನೀಡಲಿ. ಈ ಎಲ್ಲಾ ನಾಯಕರು ತನಿಖೆಗೆ ಸಹಕರಿಸಲಿ. ಈ ನಾಯಕರ ಬಳಿ ಇರುವ ಸಾಕ್ಷಿ, ಮಾಹಿತಿಗಳಿಂದ ತನಿಖೆ ಮುಂದುವರಿಯಲಿ ಎಂದು ಪ್ರತಾಪ್ ಸಿಂಹ ಹೇಳಿದರು.
ಹಂಸಲೇಖ ಹೇಳಿದ್ದೇನು?
ಮೈಸೂರಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಂಸಲೇಖರವರ ಹೇಳಿಕೆ ಭಾರೀ ವೈರಲ್ ಆಗಿತ್ತು. ಹಂಸಲೇಖ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧದ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ಹಂಸಲೇಖ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.
ಪೇಜಾವರ ಶ್ರೀಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತುಕೊಳ್ಳಬಹುದಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ತಿಂತಾರಾ, ಆಗುತ್ತಾ? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದ್ರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದಾರೆ ಎಂದು ಹಂಸಲೇಖ ಹೇಳಿದ್ದರು.