Mysuru: ಫಲಿಸದ ಪ್ರಾರ್ಥನೆ, ಮೈಸೂರಿನ ಮಿನ್ನಿ ಇನ್ನಿಲ್ಲ
ಮೈಸೂರು, ಏಪ್ರಿಲ್ 04: ಮೈಸೂರು ಮೃಗಾಲಯದಲ್ಲಿ ಶ್ವಾಸಕೋಸದ ತೊಂದರೆಯಿಂದ ಬಳಲುತ್ತಿದ್ದ ಹೆಣ್ಣು ಒರಾಂಗೂಟಾನ್ ಮಿನ್ನಿಯು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಮೃಗಾಲಯದ ಪಶುತಜ್ಞರು ಸರ್ವ ರೀತಿಯಲ್ಲಿಯೂ ಚಿಕಿತ್ಸೆ ನೀಡುವ ಮೂಲಕ ಬದುಕುಳಿಸಲು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರಾಣಿಪ್ರಿಯರ ಪ್ರಾರ್ಥನೆಯೂ ಫಲಿಸದೆ ಮಿನ್ನಿ ಏಪ್ರಿಲ್ 2ರ ರಾತ್ರಿ ಸಾವನ್ನಪ್ಪಿರುವ ಬಗ್ಗೆ ಮೃಗಾಲಯದ ಆಡಳಿತ ಮಂಡಳಿ ತಿಳಿಸಿದೆ.
ಮಿನ್ನಿಯ ಮರಣೋತ್ತರ ಪರೀಕ್ಷೆಯನ್ನು ಮೈಸೂರು ಮೃಗಾಲಯದ ತಜ್ಞ ಪಶು ವೈದ್ಯರು ಪರೀಕ್ಷಾ ಕೊಠಡಿಯಲ್ಲಿ ಏ.3ರಂದು ಗುರುವಾರ ಬೆಳಿಗ್ಗೆ 10ಗಂಟೆಗೆ ನಡೆಸಿದ್ದು, ಮಿನ್ನಿಯು ವ್ಯಾಪಕ ಹರಡಿದ ನ್ಯುಮೋನಿಯಾ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿರುವುದು ದೃಢವಾಗಿದೆ. ಮೈಸೂರು ಮೃಗಾಲಯಕ್ಕೆ ಮಿನ್ನಿಯ ಸಾವು ಅಪಾರ ನಷ್ಟವನ್ನುಂಟು ಮಾಡಿದೆ.

ಮೃಗಾಲಯದ ಆಡಳಿತ ವರ್ಗ, ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲನಾ ತಂಡ ಮಿನ್ನಿಯ ಸಾವಿಗೆ ತೀವ್ರ ಸಂತಾಪ ಸೂಚಿಸಿದೆ ಅಲ್ಲದೇ, ಮಿನ್ನಿಯ ಚಿಕಿತ್ಸೆಯ ಸಂದರ್ಭದಲ್ಲಿ ಜಾಗತೀಕ ಪಶುವೈದ್ಯಕೀಯ ಸಮೂದಾಯ ಮತ್ತು ವನ್ಯಜೀವಿ ಸಂರಕ್ಷರುಗಳು ನೀಡಿದ ಬೆಂಬಲವನ್ನು ಇದೇ ವೇಳೆ ಶ್ಲಾಘಿಸಿದೆ.
ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಂತಾಪ ವ್ಯಕ್ತಪಡಿಸಿದೆ. ಮಿನ್ನಿಯ ಸಾವಿನ ನಂತರ ಎಚ್ಚೆತ್ತುಕೊಂಡಿರುವ ಮೃಗಾಲಯದ ಅಧಿಕಾರಿಗಳು ರೋಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಗಳನ್ನು ಅರಿಯುವ ಸಲುವಾಗಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ಅಲ್ಲಿಂದ ವರದಿಗಳು ಬಂದ ನಂತರ ಇತರೆ ಒರಾಂಗೂಟಾನ್‌ಗಳ ಆರೋಗ್ಯದ ಬಗ್ಗೆ ನಿಗಾವಹಿಸಲು ಅನುಕೂಲವಾಗಲಿದೆ.

ಯುನೈಟೆಡ್ ಕಿಂಗ್ ಡಮ್ ಮತ್ತು ಮಲೇಷಿಯಾ ದೇಶಗಳ ಪಶುವೈದ್ಯ ತಜ್ಞರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಮೈಸೂರು ಮೃಗಾಲಯದ ಪಶುವೈದ್ಯರ ತಂಡದ ನಿರಂತರ ಪ್ರಯತ್ನಗಳ ನಡುವೆಯೂ ಮಿನ್ನಿಯ ಆರೋಗ್ಯ ಸ್ಥಿತಿಯು ಗಂಭೀರವಾಗಿತ್ತು. ಮೃಗಾಲಯವು ಮಿನ್ನಿಯ ಆರೋಗ್ಯ ಸುಧಾರಣೆಗೆ ಸಾಧ್ಯವಿರುವ ಎಲ್ಲಾ ಬಗೆಯ ಚಿಕಿತ್ಸಾ ಶಿಷ್ಠಾಚಾರಗಳನ್ನು ಅನುಸರಿಸಿರುವುದು ಮಾತ್ರವಲ್ಲದೇ ಮಿನ್ನಿಯ ಚೇತರಿಕೆಗೆ ತೀವ್ರ ನಿಗಾ ವಹಿಸಲಾಗಿತ್ತು.
ಇದೀಗ ಮಿನ್ನಿಯ ಅನಾರೋಗ್ಯದ ಮೂಲ ಕಾರಣಗಳನ್ನು ಅರಿಯುವ ಉದ್ದೇಶದಿಂದ ಹೆಚ್ಚಿನ ತನಿಖೆಗಾಗಿ ಅದರ ಜೈವಿಕ ಮಾದರಿಗಳನ್ನು ಸುಧಾರಿತ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಹಾಗೂ ದೃಢೀಕೃತ ರೋಗ ನಿರ್ಣಯದ ವರದಿಯ ನಿರೀಕ್ಷೆಯಲ್ಲಿ ಮೃಗಾಲಯವಿದ್ದು ಪರೀಕ್ಷೆಯ ವರದಿಗಾಗಿ ಕಾಯುತ್ತಿದೆ. ದೃಢೀಕೃತ ರೋಗ ನಿರ್ಣಯ ಪರೀಕ್ಷಾ ವರದಿ ಬಂದ ನಂತರ ಸಂಶೋಧನೆಗಳು ನಡೆದು ಒರಾಂಗೂಟಾನ್ ಪ್ರಾಣಿಗಳಿಗೆ ಸಂಭವಿಸಬಹುದಾದ ಉಸಿರಾಟ ಕಾಯಿಲೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಲು ಸಹಾಯಕವಾಗಲಿದೆ ಜತೆಗೆ ಭವಿಷ್ಯದಲ್ಲಿ ವನ್ಯಜೀವಿಗಳ ಆರೋಗ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ.
ಮಲೇಷಿಯಾದಿಂದ ಮೈಸೂರಿಗೆ ಬಂದಿದ್ದ ಮಿನ್ನಿ
ಹೆಣ್ಣು ಒರಾಂಗೂಟಾನೇ ಮಿನ್ನಿಗೆ ಸುಮಾರು ಹತ್ತು ವರ್ಷ ಎಂಟು ತಿಂಗಳ ಪ್ರಾಯವಾಗಿತ್ತು. ಇದು ಒರಾಂಗೂಟಾನ್ ಬೋರ್ನಿಯನ್ ಪ್ರಭೇದದ ಒರಾಂಗೂಟಾನ್ ಆಗಿದ್ದು, ವೃಕ್ಷವಾಸಿ ಪ್ರಾಣಿಯಾಗಿದೆ. ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ 2021ನೇ ಸಾಲಿನಲ್ಲಿ ಮಲೇಷಿಯಾದ ಸಫಾರಿ ವಂಡರ್‌ಲ್ಯಾಂಡ್ ಮೃಗಾಲಯದಿಂದ ಮೈಸೂರು ಮೃಗಾಲಯಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಮೈಸೂರು ಮೃಗಾಲಯದ ಪ್ರವಾಸಿಗರನ್ನು ಆಕರ್ಷಿಸುತ್ತಾ ಬಂದಿತ್ತು. ಮೃಗಾಲಯಕ್ಕೆ ಭೇಟಿ ನೀಡಿದವರಿಗೆ ಪ್ರಮುಖ ಆಕರ್ಷಣೆಯಾಗಿತ್ತು.












Click it and Unblock the Notifications