ಮೈಸೂರಿನಲ್ಲಿ ಆಟೋ ಪ್ರಯಾಣದರ 25ರೂಗೆ ಹೆಚ್ಚಳ
ಮೈಸೂರು, ಜ.9 : ಆಟೋ ಪ್ರಯಾಣದರ ಹೆಚ್ಚಳದ ಬಿಸಿ ಮೈಸೂರಿನ ಜನರಿಗೂ ತಟ್ಟಿದೆ. ಬುಧವಾರದಿಂದ ಅನ್ವಯವಾಗುವಂತೆ ಮೈಸೂರಿನಲ್ಲಿ ಆಟೋ ಪ್ರಯಾಣ ದರವನ್ನು 25 ರೂ.ಗಳಿಗೆ ಏರಿಸಲಾಗಿದೆ. ಇದರಿಂದ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಆಟೋ ಚಾಲಕರಿಗೆ ರಿಲೀಫ್ ಸಿಕ್ಕಿದೆ.
ಬುಧವಾರ ಆಟೋ ಚಾಲಕರ ಸಂಘದೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಶಿಖಾ ಮತ್ತು ಆರ್ ಟಿಓ ಅಧಿಕಾರಿಗಳು ಕನಿಷ್ಠ ಆಟೋ ಪ್ರಯಾಣದರವನ್ನು 20 ರೂ.ಗಳಿಂದ 25 ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು. ಇದರಿಂದ ಆಟೋ ಚಾಲಕರು ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ. ಪ್ರಯಾಣದರ ಹೆಚ್ಚಳದಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ದರ ಏಕರೂಪವಾಗಿದೆ. [ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ]

ಕೇಂದ್ರ ಸರ್ಕಾರ ಆಟೋ ಗ್ಯಾಸ್ ಪ್ರಯಾಣದರವನ್ನು 11.50 ರೂ.ಗೆ ಹೆಚ್ಚಳ ಮಾಡಿದ ದಿನದಿಂದ ಮೈಸೂರಿನಲ್ಲಿ ಆಟೋ ಚಾಲಕರು, ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರು. ಮೂರುದಿನಗಳ ಆಟೋ ಚಾಲಕರ ಪ್ರತಿಭಟನೆಯಿಂದ ಜನರು ಪರದಾಡುವಂತಾಗಿತ್ತು. ಬುಧವಾರ ಆಟೋ ಚಾಲಕರ ಬೇಡಿಕೆ ಈಡೇರಿಸಲಾಗಿದ್ದು, ಪ್ರಯಾಣದರ ಪರಿಷ್ಕರಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. [ಆಟೋ ಗ್ಯಾಸ್ ದರ ಹೆಚ್ಚಳ]
ಆಟೋ ಚಾಲಕರ ಸಂಘದ ಸಭೆಯಲ್ಲಿ ಹೈಡ್ರಾಮ ನಡೆಯಿತು. ಆಟೋ ಪ್ರಯಾಣದರವನ್ನು 20ರಿಂದ 30 ರೂ.ಗಳಿಗೆ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಆಟೋ ಚಾಲಕರು ಒತ್ತಾಯಿಸಿದರು. ಆದರೆ, ಚಾಲಕರ ಮನವಿ ತಳ್ಳಿಹಾಕಿದ ಜಿಲ್ಲಾಧಿಕಾರಿಗಳು. 25ರೂ. ಹೆಚ್ಚಳ ಮಾಡಲು ಅನುಮತಿ ನೀಡಿದರು. ಇದರೊಂದಿಗೆ 15 ನಿಮಿಷದ ವೈಟಿಂಗ್ ಚಾರ್ಚ್ ಅನ್ನು 1 ರೂ.ಗಳಿಂದ 5 ರೂ.ಗೆ ಏರಿಕೆ ಮಾಡಲಾಗಿದೆ.












Click it and Unblock the Notifications