ದಸರಾ ಗಜಪಡೆಗಳ ತೊಡುಗೆ ತಯಾರಿ ಹೇಗಿರುತ್ತದೆ?
ಮೈಸೂರು, ಅಕ್ಟೋಬರ್, 16 : ಮೈಸೂರು ದಸರಾ ಅಂದರೆ ಬರೀ ಆನೆಗಳ ಮೆರವಣಿಗೆಯಲ್ಲ. ಇಲ್ಲಿ ಪ್ರತಿಯೊಂದು ಕೂಡಾ ವಿಶಿಷ್ಟ, ವಿಶೇಷವಾದುದ್ದಾಗಿದೆ. ಸರ್ವ ಅಲಂಕಾರ ಶೋಭಿತವಾಗಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುವ ಗಜಪಡೆಗಳ ಜಂಬೂ ಸವಾರಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಆದರೆ ಗಜಪಡೆಯ ಅಲಂಕಾರದ ಹಿಂದಿನ ಶ್ರಮ ಗೊತ್ತಾಗುವುದಿಲ್ಲ.
ದಸರಾ ಜಂಬೂ ಸವಾರಿಯಲ್ಲಿ ಅರ್ಜುನನ ಮೇಲೆ ವಿರಾಜಮಾನವಾಗಿ ಸಾಗುವ ಚಿನ್ನದ ಅಂಬಾರಿ ನಮ್ಮ ಕಣ್ಮನಸೆಳೆಯುತ್ತದೆ. ಆದರೆ ಅದನ್ನು ಹೊರಲು ಅನುಕೂಲವಾಗುವಂತೆ ಆನೆಯ ಬೆನ್ನ ಮೇಲಿನ ಹೊದಿಕೆಯಾದ ಗಾದಿ, ನಮ್ದಾ, ಛಾಪು ಯಾವುದೂ ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ. ಇವುಗಳೆಲ್ಲವನ್ನೂ ಹೊಲಿಯುವುದು ಸುಲಭದ ಕೆಲಸವಲ್ಲ. ಇದಕ್ಕೆ ಭಾರಿ ಶ್ರಮ ಕುಶಲತೆ ಬೇಕಾಗುತ್ತದೆ. ನಾಜೂಕುತನವಂತೂ ಅತೀ ಮುಖ್ಯ. ಎಲ್ಲರಿಂದ ತಯಾರು ಮಾಡಲು ಸಾಧ್ಯವಿಲ್ಲ.[ಮೈಸೂರು ದಸರಾ ಆನೆಗಳಿಗೆ 35 ಲಕ್ಷದ ವಿಮೆ]

ಆನೆಗಳಿಗೆ ಯಾವುದೇ ನೋವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಾದಿ, ನಮ್ದಾ, ಛಾಪನ್ನು ಬಳಸಲಾಗುತ್ತದೆ. ಇದನ್ನು ಕಳೆದ ಹಲವು ವರ್ಷಗಳಿಂದ ಪಾಷ ಎಂಬುವರೇ ತಯಾರು ಮಾಡುತ್ತಾರೆ. ಇವರನ್ನು ಒಂದು ರೀತಿಯಲ್ಲಿ ಆನೆ ಟೈಲರ್ ಎಂದು ಕರೆದರೂ ತಪ್ಪಾಗಲಾರದು.
ಆನೆ ಬೆನ್ನಿನ ಮೇಲೆ ಹಾಕುವ ಗಾದಿ, ನಮ್ದಾ, ಛಾಪು ಎನ್ನುವ ವಿಶೇಷ ತೊಡುಗೆಯನ್ನು ದಬ್ಬಳ ಸೂಜಿಯಿಂದ ಹೊಲಿದು ತಯಾರು ಮಾಡಲಾಗುತ್ತದೆ. ಆನೆಗೆ ಮೆತ್ತನೆ ಹೊದಿಕೆಯನ್ನು ಅದರ ಬೆನ್ನಿನ ಅಳತೆಗೆ ತಕ್ಕಂತೆ ಅಳೆದು ತಯಾರು ಮಾಡುವುದು ಒಂದು ಜಾಣ್ಮೆಯ ಕೆಲಸ.[ಮೈಸೂರು ದಸರಾಗೆ ಬರುವ 12 ಆನೆಗಳ ಪಟ್ಟಿ]
ಪಾಷಾರವರು 1971 ರಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದು, 2006 ರಲ್ಲಿ ನಿವೃತ್ತಿಯಾದರೂ ಅರಣ್ಯ ಇಲಾಖೆಗೆ ಈ ಕುಶಲ ಕೆಲಸ ಮಾಡಲು ಪಾಷಾ ಬಿಟ್ಟರೆ ಇನ್ಯಾರನ್ನೂ ಆಯ್ದುಕೊಳ್ಳುವುದಿಲ್ಲ. ಹಾಗಾಗಿ ದಸರಾ ಆನೆಗಳು ಸೇರಿದಂತೆ ಎಲ್ಲಾ ಆನೆಗಳಿಗೂ ಪಾಷರವರೇ ಹೊದಿಕೆ ತಯಾರು ಮಾಡುತ್ತಾರೆ.
ಪಾಷಾ ವೃತ್ತಿಯನ್ನು ಮಾವುತರೇ ನಿರ್ವಹಿಸುತ್ತಾರೆ. ಇವರು ಸರಳ ಆನೆಯ ಮಾವುತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಆನೆಗಳ ಹೊದಿಕೆ ತಯಾರು ಮಾಡುವುದನ್ನು ಸಣ್ಣ ವಯಸ್ಸಿನಲ್ಲಿಯೇ ಈ ಹಿಂದೆ ಅಂಬಾರಿ ಹೊರುತ್ತಿದ್ದ ಬಿಳಿಗಿರಿರಂಗ ಎಂಬ ಆನೆಯ ಮಾವುತರಾಗಿ ಕೆಲಸ ಮಾಡುತ್ತಿದ್ದ ಸುಲ್ತಾನ್ ಸಾಬ್ ಅವರಿಂದ ಕಲಿತಿದ್ದರು.[ರಾಜ ಗಾಂಭೀರ್ಯದ ದಸರಾ ಗಜಪಡೆ ಎಲ್ಲಿಂದ ಬಂದದ್ದು?]

ಪಾಷಾ ವೃತ್ತಿಯವರೇ ರಾಜೇಂದ್ರ, ದ್ರೋಣ, ಬಲರಾಮ, ಗಜೇಂದ್ರ ಹೀಗೆ ಎಲ್ಲಾ ಆನೆಗಳಿಗೆ ಗಾದಿ ಹೊಲಿಯುತ್ತಾ ಬಂದಿದ್ದಾರೆ. ಇನ್ನು ಮುಂದೆ ಈ ಕಾಯಕವನ್ನು ಬೇರೆಯವರು ಮುಂದುವರೆಸಿಕೊಂಡು ಹೋಗುವುದು ಅನಿವಾರ್ಯವಾಗಿರುವುದರಿಂದ ಇತರ ಮಾವುತರಿಗೂ ಕಾಯಕ ಕಲಿಸಿದ್ದಾರೆ.
ದಸರಾದ ಜಂಬೂಸವಾರಿಗೆ ಗಜಪಡೆಗಳನ್ನು ತಯಾರಿ ಮಾಡುವ ಕೆಲಸ ಸುಲಭದಲ್ಲ. ಅದರ ಹಿಂದೆ ಶ್ರಮ ಮತ್ತು ಜಾಣ್ಮೆಯ ಕೆಲಸಗಳಿವೆ. ಅವುಗಳನ್ನು ಕಲಿತವರು ಮುಂದಿನ ತಲೆಮಾರಿಗೆ ಕಳುಹಿಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಪ್ರತಿವರ್ಷವೂ ಜಂಬೂಸವಾರಿ ಯಾವುದೇ ತೊಂದರೆಯಿಲ್ಲದೆ ಸಾಂಗವಾಗಿ ಸಾಗಲು ಸಾಧ್ಯವಾಗಿದೆ.











Click it and Unblock the Notifications