Maha Kumbh Mela 2025: ಮೈಸೂರಿನಿಂದ ಲಕ್ನೋಗೆ ಏಕಮಾರ್ಗ ವಿಶೇಷ ರೈಲು!
ಮೈಸೂರಿನಿಂದ ಮಹಾ ಕುಂಭಮೇಳಕ್ಕೆ ಹೋಗುವವರಿಗೆ ದೊಡ್ಡ ಗುಡ್‌ನ್ಯೂಸ್‌ವೊಂದನ್ನು ಕೊಡಲಾಗಿದೆ. ಕುಂಭಮೇಳದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರಿನಿಂದ ಲಕ್ನೋಗೆ ಏಕಮಾರ್ಗ ವಿಶೇಷ ಎಕ್ಸ್ ಪ್ರೆಸ್ ರೈಲು (06221) ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಮೈಸೂರು-ಲಕ್ನೋ ಏಕಮಾರ್ಗ ವಿಶೇಷ ರೈಲು (06221) ಶುಕ್ರವಾರ (ಫೆ.14, 2025) ಬೆಳಿಗ್ಗೆ 7:30 ಗಂಟೆಗೆ ಮೈಸೂರಿನಿಂದ ಹೊರಟು, ಭಾನುವಾರದಂದು ( ಫೆ.16, 2025) ಸಂಜೆ 4:00 ಗಂಟೆಗೆ ಲಕ್ನೋ ನಿಲ್ದಾಣವನ್ನು ತಲುಪಲಿದೆ.

ಇನ್ನು ಈ ರೈಲಿನಲ್ಲಿ ಒಂದು ಎಸಿ ಮೂರು ಟೈರ್, 8 ಸ್ಲೀಪರ್ ಕ್ಲಾಸ್, 10 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಎಸ್ಎಲ್ಆರ್/ಡಿ ಬೋಗಿಗಳು ಇರಲಿವೆ. ಈ ರೈಲು ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ, ಕರಾಡ್, ಪುಣೆ, ದೌಂಡ್ ಕಾರ್ಡ್ ಲೈನ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ಕಟ್ನಿ, ಸತ್ನಾ, ಮಾಣಿಕ್ಪುರ್, ಪ್ರಯಾಗರಾಜ್ ಚಿಯೋಕಿ ಹಾಗೂ ವಾರಾಣಸಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಹೇಳಲಾಗಿದೆ.
ಈ ರೈಲಿನ ಪ್ರತಿ ನಿಲ್ದಾಣದ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ಭಾರತೀಯ ರೈಲ್ವೆ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.

ಕುಂಭಮೇಳ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಅದ್ಧೂರಿಯಾಗಿ ನಡೆದಿದೆ. ಮಹಾಕುಂಭ ಮೇಳದಲ್ಲಿ ಮಾಘಿ ಪೂರ್ಣಿಮೆಯ ಭಾಗವಾಗಿ ಬುಧವಾರ ಪುಣ್ಯ ಸ್ನಾನ ನಡೆದಿದೆ. ಇದರಲ್ಲಿ ಬರೋಬ್ಬರಿ ತ್ರಿವೇಣಿ ಸಂಗಮದಲ್ಲಿ 73 ಲಕ್ಷಕ್ಕೂ ಹೆಚ್ಚು ಜನ ಪುಣ್ಯ ಸ್ನಾನ ಮಾಡಿರುವುದು ವರದಿಯಾಗಿದೆ.
ಮಹಾಕುಂಭಮೇಳ ಮುಂದುವರಿದಿದ್ದು, ಲಕ್ಷಾಂತರ ಜನ ಇನ್ನೂ ಆಗಮಿಸುತ್ತಿದ್ದಾರೆ. ಫೆಬ್ರವರಿ 12ರಂದು ಮುಂಜಾನೆಯಿಂದಲೇ ಪುಣ್ಯ ಸ್ನಾನ ಆರಂಭವಾಗಿದೆ. ಇಂದು ತ್ರಿವೇಣಿ ಸಂಗಮದಲ್ಲಿ ಲಕ್ಷಾಂತರ ಜನ ಸೇರಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ದುರಂತದ ನಂತರ ಭಾರೀ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ಟ್ರಾಫಿಕ್ ಜಾಮ್ ಸಮಸ್ಯೆ: ಇನ್ನು ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಜನ ಪ್ರತಿ ದಿನವೂ ಸೇರುತ್ತಿದ್ದು, ಉತ್ತರ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗೂ ಟ್ರಾಫಿಕ್ ಜಾಮ್ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ. ಕಿ.ಮೀ ಗಟ್ಟಲೆ ಟ್ರಾಫಿಕ್ ಜಮ್ ಮುಂದುವರಿದಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಕಿ.ಮೀ ಗಟ್ಟಲೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿರುವುದು ವೈರಲ್ ಆಗಿದೆ. ಉತ್ತರ ಪ್ರದೇಶ ಸರ್ಕಾರವು ಮಹಾ ಕುಂಭಮೇಳದ ನಿರ್ವಹಣೆಗೆ ವಾರ್ ರೂಮ್‌ಗಳನ್ನು ನಿರ್ಮಾಣ ಮಾಡಿದ್ದು. ಇದರ ಮೂಲಕ ಕಣ್ಗಾವಲನ್ನು ಇರಿಸಲಾಗಿದೆ.












Click it and Unblock the Notifications