ನವೆಂಬರ್ ಅಂತ್ಯಕ್ಕೆ ಮದ್ದೂರು ಬೈಪಾಸ್ ಹಾಗೂ ಫ್ಲೈ ಓವರ್ ಸಂಚಾರಕ್ಕೆ ಮುಕ್ತ: ಪ್ರತಾಪ್ ಸಿಂಹ
ಮೈಸೂರು, ನವೆಂಬರ್3: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ರಸ್ತೆ ಕಾಮಗಾರಿ ಅಂತಿಮ ಘಟ್ಟಕ್ಕೆ ತಲುಪಿದ್ದು, ನವೆಂಬರ್ ಅಂತ್ಯದ ವೇಳೆಗೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಮೈಸೂರು ಬೆಂಗಳೂರು ಎರಡು ನಗರಗಳ ನಡುವಿನ ಪ್ರಯಾಣಿಸುವ ಸಮಯವನ್ನು 3 ಗಂಟೆಗಳಿಂದ ಕೇವಲ 90 ನಿಮಿಷಗಳವರೆಗೆ ಕಡಿತಗೊಳಿಸುವ ನಿರೀಕ್ಷೆಯಿಂದ ಆರಂಭವಾದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಂಸದ ಪ್ರತಾಪ್ ಸಿಂಹ ಅವರ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ.
ಹೆದ್ದಾರಿ ಕಾಮಾಗಾರಿ ಸಂಪೂರ್ಣಗೊಳಿಸಲು ಈ ಹಿಂದೆ ನೀಡಿದ್ದ ಗಡುವುಗಳು ಈಗಾಗಲೇ ಮುಗಿದಿದ್ದು, ಈ ಬಾರಿ ಸುರಿದ ಭಾರಿ ಮಳೆಯಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಹೀಗಾಗಿ ಕಾಮಗಾರಿ ಅಂತ್ಯದ ಬಗ್ಗೆ ಸಂಸದ ಪ್ರತಾಪ್ ಸಿಂಹ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ.
ಮದ್ದೂರು ಫ್ಲೈ ಓವರ್ ಮತ್ತು ಬೈಪಾಸ್ ಅನ್ನು ಈ ತಿಂಗಳ ಅಂತ್ಯದೊಳಗೆ ವಾಹನ ಸಂಚಾರಕ್ಕೆ ತೆರವು ಮಾಡಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ ಎಂದು ಪ್ರತಾಪ್ ಸಿಂಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಹುತೇಕ ಕೆಲಸಗಳು ಈಗ ಮುಗಿದಿದೆ
ಈ ಬಗ್ಗೆ ಫೇಸ್‌ಬುಕ್ ಲೈವ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರತಾಪ್ ಸಿಂಹ, "ಮದ್ದೂರು ಪಟ್ಟಣದಿಂದ ಟ್ರಾಫಿಕ್ ಸಮಸ್ಯೆ ಆರಂಭವಾಗುತ್ತದೆ. ಹೀಗಾಗಿ ಮೈಸೂರು ಬೆಂಗಳೂರು ಹೆದ್ದಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಕೇಳುತ್ತಿದ್ದೀರಿ. ಇದರ ಬಗ್ಗೆ ಹೊಸ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ. ಮದ್ದೂರು ಫ್ಲೈ ಓವರ್ 3.8 ಕಿಲೋಮೀಟರ್‌ಗಳಷ್ಟಿದೆ. ಈವೊಂದು ಫ್ಲೈ ಓವರ್ ಸಂಚಾರಕ್ಕೆ ಮುಕ್ತ ಆದರೆ ವಾಹನ ಸವಾರರ 15-20 ನಿಮಿಷ ಉಳಿಯುತ್ತದೆ. ಈಗಿರುವ ಸಮಸ್ಯೆಗಳನ್ನು ಸರಿಪಡಿಸುತ್ತಿದ್ದೇವೆ. ಬಹುತೇಕ ಕೆಲಸಗಳು ಈಗ ಮುಗಿದಿದೆ. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರಸ್ತೆಯ ಕೆಲಸಗಳು ಮುಗಿಯುವ ಹಂತಕ್ಕೆ ಬಂದಿದೆ. ಚಿಕ್ಕ ಚಿಕ್ಕ ಕೆಲಸಗಳು ಬಾಕಿಯಿದೆ" ಎಂದು ತಿಳಿಸಿದ್ದಾರೆ.

ಎಲ್ಲಾ ಪರೀಕ್ಷೆಗಳು ಮುಗಿದ ಬಳಿಕ ಸಂಚಾರಕ್ಕೆ ಮುಕ್ತ
"ಇನ್ನು ಕೇವಲ 10 ದಿನದೊಳಗೆ ಎಲ್ಲಾ ಕೆಲಸಗಳು ಮುಗಿಯುತ್ತದೆ. ಜೊತೆಗೆ ರೋಡ್ ಟೆಸ್ಟಿಂಗ್ ಕೂಡ ನಡೆಯುತ್ತಿದೆ. ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುವ ಮೊದಲು ಕ್ವಾಲಿಟಿ ಪರೀಕ್ಷೆ ಕೂಡ ಮುಖ್ಯವಾಗಿರುತ್ತದೆ. ಆನಂತರ ಲೋಡ್ ಟೆಸ್ಟ್ ಕೂಡ ನಡೆಸಬೇಕು ಹೀಗೆ ಎಲ್ಲಾ ಪರೀಕ್ಷೆಗಳು ಮುಗಿದ ಬಳಿಕ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗುತ್ತದೆ. ಇನ್ನು ಹತ್ತು ಹದಿನೈದು ದಿನಗಳಲ್ಲಿ ಮದ್ದೂರು ಫ್ಲೈ ಓವರ್‌ನ ಎಲ್ಲಾ ಕೆಲಸಗಳು ಮುಗಿಸುತ್ತೇವೆ. ಆದರೆ ಮಳೆಯಿಂದ ಕಾಮಗಾರಿಗೆ ತುಂಬಾ ತೊಂದರೆ ಆಗುತ್ತಿದೆ. ಮಳೆಯ ಕಾರಣದಿಂದ ರಸ್ತೆಯ ಕಾಮಾಗಾರಿ ಕೆಲಸಗಳು ವಿಳಂಬವಾಗುತ್ತಿದೆ," ಎಂದು ಮಾಹಿತಿ ನೀಡಿದರು.

ಡಿಸೆಂಬರ್ ಅಂತ್ಯದೊಳಗೆ ಮೂರು ಬೈಪಾಸ್ ಕೆಲಸಗಳು ಸಂಪೂರ್ಣ
"ಆದಷ್ಟು ಬೇಗ ಮದ್ದೂರು ಫ್ಲೈ ಓವರ್‌ನ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತೇವೆ. ಈ ಬಗ್ಗೆ ನಾವೆಲ್ಲರೂ ಪ್ರಯತ್ನ ಮಾಡುತ್ತಿದ್ದೇವೆ. ಕಾಮಗಾರಿ ಮುಗಿಸಲು ನಾವು ಒಂದು ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ಈ ವರ್ಷದ ಡಿಸೆಂಬರ್ 31 ಒಳಗಡೆ ಸಂಪೂರ್ಣ ಕಾಮಗಾರಿಯಾಗಲಿದೆ. ಮಂಡ್ಯ ಬೈಪಾಸ್ ಕಾಮಗಾರಿ ಕೂಡ ಡಿಸೆಂಬರ್ 31ರ ಒಳಗೆ ಮುಗಿಸಲು ವ್ಯವಸ್ಥೆ ಮಾಡುತ್ತಿದ್ದೇವೆ. ಒಟ್ಟಾರೆ ಡಿಸೆಂಬರ್ ಅಂತ್ಯದೊಳಗೆ ಮೂರು ಬೈಪಾಸ್ ಕೆಲಸಗಳು ಸಂಪೂರ್ಣಗೊಳ್ಳಿದ್ದು, ಕಾಮಗಾರಿ ಮುಕ್ತಾಯಗೊಂಡರೆ ವಾಹನ ಸವಾರರು 75 ರಿಂದ 80 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ತಲುಪಬಹುದು," ಎಂದರು.

ಕಾಮಗಾರಿ ಪೂರ್ಣಗೊಳಿಸಲು ಎಲ್ಲಾ ರೀತಿಯ ಪ್ರಯತ್ನ
"ಇನ್ನು ಬೂದನೂರು ಹತ್ತಿರ, ಹನಕೆರೆ ಹತ್ತಿರ, ಗೌಡಳ್ಳಿ ಸೇರಿದಂತೆ ಕೆಲವು ಪ್ರದೇಶದಲ್ಲಿ ಸಣ್ಣಪುಟ್ಟ ಕೆಲಸಗಳು ಬಾಕಿಯಿದೆ. ಕೆಲವೆಡೆ ಕೆನಾಲ್, ಅಂಡರ್ ಪಾಸ್‌ನ ಸಣ್ಣ ಪುಟ್ಟ ಕೆಲಸ ಬಾಕಿಯಿದೆ. ಆ ಭಾಗಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತೇವೆ. ಈ ಸ್ಥಳಗಳನ್ನು ಬಿಟ್ಟರೆ ಉಳಿದ ಎಲ್ಲಾ ಭಾಗಗಳಲ್ಲೂ ಫ್ಲೈ ಓವರ್‌ಗಳನ್ನು ನಾವು ಸಂಚಾರಕ್ಕೆ ಮುಕ್ತ ಮಾಡುತ್ತೇವೆ. ಡಿಸೆಂಬರ್ 31ರ ಬಳಿಕ ನೀವು ಯಾವುದೇ ಸಮಸ್ಯೆ ಇಲ್ಲದೆ, ಈ ರಸ್ತೆಯಲ್ಲಿ ನೀವು ಮೈಸೂರಿಗೆ ಪ್ರಯಾಣ ಮಾಡಬಹುದು. ಕಾಮಗಾರಿ ಪೂರ್ಣಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ," ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್‌ಬುಕ್ ಲೈವ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications