ಲಾರಿ ಹರಿದು ವಿದ್ಯಾರ್ಥಿ ಸಾವು : ಶವವಿಟ್ಟು ಪ್ರತಿಭಟನೆ
ನಂಜನಗೂಡು, ನವೆಂಬರ್ 03 : ಅವೈಜ್ಞಾನಿಕ ರಸ್ತೆಯಿಂದಾಗಿ ಲಾರಿ ಹರಿದು ವಿದ್ಯಾರ್ಥಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಪಟ್ಟಣದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ಚಿಂತಾಮಣಿ ಗಣಪತಿ ದೇವಸ್ಥಾನ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸೋಮವಾರ ಸಂಜೆ ವೇಳೆಯಲ್ಲಿ ಸೈಕಲ್‌ನಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿ ರವಿಕುಮಾರ್ (15) ಎಂಬಾತನ ಮೇಲೆ ಲಾರಿ ಹರಿದು ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದನು.
ತಾಲೂಕಿನ ದೇವರಸನಹಳ್ಳಿ ಗ್ರಾಮದ ಕೆಂಚಪ್ಪನವರ ಪುತ್ರ ರವಿಕುಮಾರ್ ಪಟ್ಟಣದ ವಿದ್ಯಾವರ್ಧಕ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದನು. ಶಾಲೆ ಬಿಟ್ಟಿದ್ದರಿಂದ ಮನೆಯತ್ತ ಸೈಕಲ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಹೆಜ್ಜಿಗೆ ಲಿಂಗಣ್ಣ ವೃತ್ತದಲ್ಲಿ ನಂಜನಗೂಡಿನಿಂದ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದು, ಹಿಂಬದಿ ಚಕ್ರ ಆತನ ಮೇಲೆ ಹರಿದಿತ್ತು.

ಆತನ ಎರಡು ಕಾಲು ಸೇರಿದಂತೆ ದೇಹದ ಭಾಗಕ್ಕೆ ಗಂಭೀರ ಗಾಯವಾಗಿತ್ತು. ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ಅಪಘಾತಕ್ಕೆ ಮೈಸೂರು-ನಂಜನಗೂಡು ನಡುವೆ ಇರುವ ಚತುಷ್ಪಥ ರಸ್ತೆಯನ್ನು ನ್ಯಾಯಾಲಯದಿಂದ ತಾಲೂಕು ಪಂಚಾಯಿತಿ ಕಚೇರಿಯವರೆಗೆ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದ್ದು, ರಸ್ತೆಯ ಒಂದು ಬದಿಯಲ್ಲಿ ಅಗಲೀಕರಿಸಿದ್ದು ಮತ್ತೊಂದು ಬದಿಯಲ್ಲಿ ಏನು ಮಾಡದೇ ಹಾಗೆಯೇ ಬಿಟ್ಟ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಪಘಾತ ನಡೆದ ಸ್ಥಳದಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ವಿದ್ಯಾರ್ಥಿಯ ಶವವಿಟ್ಟು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತಲ್ಲದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಸ್ಥಳಕ್ಕೆ ತಹಸೀಲ್ದಾರ್ ಎಚ್.ರಾಮಪ್ಪ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ಪೀಕರಿಸಿ ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.












Click it and Unblock the Notifications