ಮೈಸೂರು ನಗರದ ರಿಂಗ್ ರಸ್ತೆಯ ಮಾರ್ಗದಲ್ಲಿ ಸಾರಿಗೆ ಸೌಲಭ್ಯದ ಕೊರತೆ, ಪರದಾಡುತ್ತಿರುವ ಕಾರ್ಮಿಕರು
ಸಾರಿಗೆ ಸೌಲಭ್ಯವಿಲ್ಲದೇ ಮೈಸೂರು ನಗರದ ರಿಂಗ್ ರಸ್ತೆ ಪಕ್ಕದಲ್ಲಿರುವ ನಿವಾಸಿಗಳು ಪ್ರತಿನಿತ್ಯ ಪರದಾಡುವಂತಾಗಿದೆ. ಆದ್ದರಿಂದ ಅಲ್ಲಿನ ನಿವಾಸಿಗಳು ಸರ್ಕಾರಕ್ಕೆ ಇಟ್ಟ ಬೇಡಿಕೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮೈಸೂರು, ಮಾರ್ಚ್, 09: ಮೈಸೂರು ನಗರದ ಹೊರವಲಯದ ರಿಂಗ್ ರಸ್ತೆ ನಿರ್ಮಾಣವಾಗಿ ಎರಡು ದಶಕ ಕಳೆದಿದೆ. ಆದರೂ ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭವಾಗಿಲ್ಲ. ಈ ಬಡಾವಣೆಯಲ್ಲಿರುವ ನಿವಾಸಿಗಳು ಬಸ್ ನಿಲ್ದಾಣಕ್ಕೆ ತಲುಪಬೇಕೆಂದರೆ ತಾವಿರುವ ಜಾಗದಿಂದ ಐದಾರು ಕಿ.ಮೀ. ದೂರದವರೆಗೂ ನಡೆಯಬೇಕಾಗುತ್ತದೆ.
ನಗರ ಕೇಂದ್ರದಲ್ಲಿರುವ ಬಸ್ ನಿಲ್ದಾಣಕ್ಕೆ ಹೋಗಿ ಮತ್ತೊಂದು ಬಸ್ ಹಿಡಿದು ಆ ಬಡಾವಣೆಗೆ ತಲುಪಬೇಕಾಗಿದೆ. ಹೀಗಾಗಿ ಇಲ್ಲಿನ ಜನರು ಖಾಸಗಿ ಸಾರಿಗೆ ಮೇಲೆ ಹೆಚ್ಚಾಗಿ ಅವಲಂಬನೆ ಆಗಿದ್ದಾರೆ. ಈ ಮಾದರಿಯ ಸೇವೆಗೆ ಹೆಚ್ಚು ಹಣ ತೆರಬೇಕಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಹಾಗೂ ಮಧ್ಯಮ ವರ್ಗಕ್ಕೆ ಇದು ತುಂಬಾ ಕಷ್ಟವಾಗಿದೆ.

ಸಾರಿಗೆ ವ್ಯವಸ್ಥೆ ಇಲ್ಲದೆ ಕಾರ್ಮಿಕರ ಪರದಟ
ರಿಂಗ್ ರಸ್ತೆಯ ಆಸು ಪಾಸಿನಲ್ಲಿರುವ ಜೆ.ಪಿ. ನಗರ, ರಾಮಕೃಷ್ಣ ನಗರ ಹಾಗೂ ದೂರದ ಬಡಾವಣೆಗಳ ಜನರು ಇನ್ಫೋಸಿಸ್, ಕೈಗಾರಿಕಾ ಬಡಾವಣೆಗಳಾದ ಕೂರ್ಗಳ್ಳಿ, ಬೆಳಗೊಳ, ಇಲವಾಲ, ಮೇಟಗಳ್ಳಿ ಸೇರಿದಂತೆ ಇನ್ನಿತರ ಕೈಗಾರಿಕಾ ಪ್ರದೇಶಗಳಿಗೆ ತೆರಳಲು ನೇರ ಬಸ್ ವ್ಯವಸ್ಥೆಯೇ ಇಲ್ಲದಂತಾಗಿದೆ. ಹೀಗಾಗಿ ಕಾರ್ಮಿಕರು ಪ್ರತಿನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವು ದಿನಗಳ ಬಳಿಕ ಬಸ್ ಸೇವೆ ಸ್ಥಗಿತ
2018ರಲ್ಲಿ ಸಾರ್ವಜನಿಕರ ಒತ್ತಾಯದಿಂದಾಗಿ ರಿಂಗ್ ರಸ್ತೆಯಲ್ಲಿ ವಾಹನಗಳು ಸಂಚಾರ ಆರಂಭವಾಗಿತ್ತು. ಆದರೂ ಕೂಡ ಸೂಕ್ತ ಪ್ರಚಾರದ ಕೊರತೆಯಿಂದಾಗಿ ಕೆಲವೇ ದಿನಗಳಲ್ಲಿ ಈ ಸೇವೆ ಸ್ಥಗಿತವಾಯಿತು. ಇದೀಗ ನಗರ ಮತ್ತಷ್ಟು ಬೆಳೆದಿದ್ದು, ರಿಂಗ್ ರಸ್ತೆಯ ಆಸುಪಾಸಿನಲ್ಲಿಯೂ ಹತ್ತಾರು ಬಡಾವಣೆಗಳು ರೂಪುಗೊಂಡಿವೆ. ಹೀಗಾಗಿ ರಿಂಗ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಸೇವೆ ಆರಂಭಿಸಬೇಕೆಂಬ ಒತ್ತಾಯ ಕೇಳಿಬರುತ್ತಿವೆ. ಅದಕ್ಕಾಗಿಯೇ ಕೆಎಸ್‌ಆರ್‌ಟಿಸಿ ಶೀಘ್ರವೇ ಸಾರ್ವಜನಿಕರ ಸಭೆ ಕರೆದು ಅವರ ಸಲಹೆಯಂತೆಯೇ ಸೇವೆ ಆರಂಭಿಸಲು ತೀರ್ಮಾನಿಸಿದೆ.

ಯಾವ ಮಾರ್ಗಗಳಲ್ಲಿ ಸಾರಿಗೆ ಸೌಲಭ್ಯ ಇಲ್ಲ?
ಜೆ.ಪಿ.ನಗರ, ಕುವೆಂಪು ನಗರ, ವಿಜಯನಗರ, ರಾಮಕೃಷ್ಣನಗರ ಭಾಗದ ಜನರು ಹಾಗೂ ಹೆಬ್ಬಾಳ್, ಎನ್.ಆರ್.ಮೊಹಲ್ಲಾದಂತಹ ಅಭಿಮುಖ ಬಡಾವಣೆಗಳ ನಡುವೆ ನೇರ ಸಾರಿಗೆ ಸೌಲಭ್ಯವೇ ಇಲ್ಲದಂತಾಗಿದೆ. ಭಾರತ್ ಕ್ಯಾನ್ಸರ್ ಆಸ್ಪತ್ರೆ, ನಾರಾಯಣ ಹೃದಯಾಲಯ, ಜಯದೇವ ಹೃದ್ರೋಗ ಆಸ್ಪತ್ರೆ, ಪಿಕೆಟಿಬಿ ಸ್ಯಾನಿಟೊರಿಯಂ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ, ಇಎಸ್‌ಐ ಮುಖ್ಯ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳು ರಿಂಗ್ ರಸ್ತೆಯ ಆಸುಪಾಸಿನಲ್ಲಿವೆ. ಇಲ್ಲಿಗೆ ರಾಮಕೃಷ್ಣ ನಗರ, ಜೆ.ಪಿ.ನಗರ, ಕುವೆಂಪುನಗರದ ಜನ ತೆರಳಲು ನೇರ ಬಸ್ ವ್ಯವಸ್ಥೆ ಇಲ್ಲದಂತಾಗಿದೆ.












Click it and Unblock the Notifications