ಮೈಸೂರು: ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಸಿದ್ಧತೆ ಹೇಗಿದೆ?
ಮೈಸೂರು, ಜನವರಿ 1: ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ 2025ರ ಫೆಬ್ರವರಿ 10ರಿಂದ ಮೂರು ದಿನ ನಡೆಯಲಿದೆ. ಫೆಬ್ರವರಿ 10,11 ಮತ್ತು 12 ರಂದು ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸ್ಥಳ ಪರಿಶೀಲನೆ ನಡೆಸಿದರು.
ಕಾಶಿಗಿಂತಲೂ ಗುಲಗಂಜಿ ಗಾತ್ರದಲ್ಲಿ ಹೆಚ್ಚಿರುವ ತಿರುಮಕೂಡಲು ಕ್ಷೇತ್ರದಲ್ಲಿ ಮೂರು ವರ್ಷಕ್ಕೊಮ್ಮೆ ಕುಂಭಮೇಳದ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ವರ್ಷವೂ ಕುಂಭಮೇಳ ಮಹೋತ್ಸವವು ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತ ರೆಡ್ಡಿ ತ್ರಿವೇಣಿ ಸಂಗಮದ ಸ್ಥಳ ಪರಿಶೀಲಿಸಿ, ಸಕಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕುಂಭಮೇಳದ ಸಮಯದಲ್ಲಿ ಅವಶ್ಯಕತೆ ಇರುವ ಕಡೆ ಸ್ನಾನ ಘಟ್ಟಗಳನ್ನು ನಿರ್ಮಿಸುವಂತೆ ಸಲಹೆ ನೀಡಿದರು. ಗಣ್ಯರು, ಸ್ಥಳೀಯ ಭಕ್ತರಿಗೆ ಪುಣ್ಯ ಸ್ನಾನ ಮಾಡಲು, ಒಂದರಿಂದ ಎರಡು ಸಾವಿರ ಜನರಿಗೆ ಅನುಕೂಲವಾಗುವಂತೆ ಸ್ನಾನಘಟ್ಟಗಳನ್ನು ನಿರ್ಮಿಸಲು ಸೂಚಿಸಿದರು. ನದಿ ನೀರು ಹೆಚ್ಚುಇರುವುದರಿಂದ ಭಕ್ತಾಧಿಗಳ ಹಿತದೃಷ್ಠಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಸ್ನಾನಘಟ್ಟಗಳನ್ನು ನಿರ್ಮಿಸಬೇಕು. ಗಣ್ಯರು, ಸ್ವಾಮೀಜಿಗಳು ಸ್ನಾನ ಮಾಡಲು ತೆಪ್ಪಗಳಲ್ಲಿ ಕರೆದೊಯ್ದು ಸ್ನಾನ ಮಾಡಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಕುಂಭಮೇಳದ ಪೂರ್ವ ತಾಯಾರಿಗೆ ಅಂದಾಜು ಪಟ್ಟಿಯನ್ನು ತಯಾರಿಸಿ 2 ದಿನದೊಳಗೆ ಸಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು. ಅವಶ್ಯಕತೆ ಇದ್ದರೆ ಹೆಚ್ಚುವರಿ ಮೆಟ್ಟಿಲುಗಳನ್ನು ನಿರ್ಮಿಸಿ ಈ ಭಾಗದ ಬರುವ ಭಕ್ತರ ಪುಣ್ಯಸ್ನಾನಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚು ಇರುವುದರಿಂದ ನದಿಯ ಮಧ್ಯಭಾಗದಲ್ಲಿ ಹಿಂದಿನ ಕುಂಭಮೇಳದಂತೆ ಧಾರ್ಮಿಕ ಕಾರ್ಯ, ಯಾಗ, ಹೋಮ ಮತ್ತು ಹವನ ಕಾರ್ಯಗಳಿಗೆ ವೇದಿಕೆಗಳನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಹೋತ್ಸವ ನಡೆಯುವ ಸಮೀಪದಲ್ಲೇ ಪ್ರತ್ಯೇಕ ಸ್ಥಳವನ್ನು ಗುರುತಿಸಿ ಧಾರ್ಮಿಕ ಕಾರ್ಯಕ್ಕೆ ವೇದಿಕೆ, ಯಾಗ, ಹೋಮ ಮತ್ತು ಹವನ ಕಾರ್ಯಗಳಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪವಿಭಾಗಾಧಿಕಾರಿ ರಕ್ಷಿತ್, ಜಿಲ್ಲಾ ಮುಜರಾಯಿ ಉಪನಿರ್ದೇಶಕಿ ವಿದ್ಯುತ್ ಲತಾ, ಜಿಲ್ಲಾ ಕಾರ್ಯ ಪಾಲಕ ಅಭಿಯಂತರ ಜಿ. ರಾಜು, ತಹಸೀಲ್ದಾರ್ ಟಿ.ಎಸ್.ಸುರೇಶಾ ಚಾರ್, ಕಾವೇರಿ ನೀರಾವರಿ ನಿಗಮದ ಎಇಇ ಗಳಾದ ಎಸ್.ಮಂಜುನಾಥ್, ಶಾಂತಕುಮಾರ್, ಮಾದೇಗೌಡನ ಹುಂಡಿ ಎಇ ಮಂಜುನಾಥ್, ರವೀಂದ್ರ, ಡಿವೈಎಸ್ಪಿ ಜಿ.ಎಸ್. ರಘು, ವೃತ್ತ ನಿರೀಕ್ಷಕರಾದ ಮನೋಜಕುಮಾರ್, ಧನಂಜಯ್, ಜಿ ಪಂ ಇಂಜಿನಿಯರ್ ಚರಿತಾ,
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತ ಸತೀಶ್ ಚಂದ್ರನ್, ಪುರಸಭೆ ಮುಖ್ಯ ಅಧಿಕಾರಿ ವಸಂತಕುಮಾರಿ, ಸೆಸ್ಕ್ ಇಂಜಿನಿಯರ್ ವಿರೇಶ್, ಶಾಂತಕುಮಾರ್, ಇಒ ಅನಂತರಾಜು, ಯೋಜನಾಧಿಕಾರಿ ರಂಗಸ್ವಾಮಿ, ರಾಜಸ್ವ ನಿರೀಕ್ಷಕ ಮಹೇಂದ್ರ, ಮುಖಂಡರಾದ ಪಿ.ಸ್ವಾಮಿನಾಥ್, ಫಣೀಶ್, ಚೇತನ್, ಲಕ್ಷ್ಮಣ, ಬಸ್ ಮಂಜು, ಈಶ್ವರ್, ನಾಗಣ್ಣ, ಸೋಮಣ್ಣ, ಪಾರುಪತ್ತೆದಾರ್ ಚೇತನ್, ಪ್ರದೀಪ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications