ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ಗಣಿತ: ಮೈಸೂರಿನಲ್ಲಿ ಯಾವ ಪಕ್ಷಕ್ಕೆ, ಯಾವ ಜಾತಿ ಹಿತ?

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಏಪ್ರಿಲ್ 11 : ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದೆ. ಇಲ್ಲಿ ಪಕ್ಷಕ್ಕಿಂತ, ಪ್ರತಿನಿಧಿಸುತ್ತಿರುವ ವ್ಯಕ್ತಿಗಿಂತ ಜಾತಿಯ ಲೆಕ್ಕಾಚಾರವೇ ಹೆಚ್ಚಾದಂತೆ ಕಾಣುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಎಚ್.ಡಿ.ಕೋಟೆ, ನಂಜನಗೂಡು, ತಿ. ನರಸೀಪುರದ 3 ಮೀಸಲು ಕ್ಷೇತ್ರ ಸೇರಿದಂತೆ ಒಟ್ಟು 11 ವಿಧಾನ ಸಭಾ ಕ್ಷೇತ್ರಗಳಿವೆ.

ಪ್ರಮುಖ ಮೂರು ಪಕ್ಷಗಳು ಒಂದೊಂದು ಜಾತಿ ಹಿಂದೆ ಬಿದ್ದಿವೆ. ಪ್ರಬಲವಾದ ಒಕ್ಕಲಿಗ ಮತ್ತು ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್ ನೀಡಲು ಮುಂದಾಗಿವೆ. ಜಿಲ್ಲೆಯ ಮಟ್ಟಿಗೆ ಬಿಜೆಪಿ ಕೆಲ ಕ್ಷೇತ್ರಗಳಲ್ಲಿ ಮಾತ್ರ ಪ್ರಬಲವಾಗಿದೆ. ಆದರೂ ಬಿಜೆಪಿ ಒಕ್ಕಲಿಗ ಮತ್ತು ಕುರುಬ ಸಮುದಾಯದ ಹಿಂದೆ ಬಿದ್ದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಒಕ್ಕಲಿಗ ಕೋಟಾದಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಹೇಮಂತ್ ಕುಮಾರ್‌ ಗೌಡ, ಹುಣಸೂರಿನಿಂದ ಯೋಗಿನಂದ, ಸಂಸದ ಪ್ರತಾಪ್‌ಸಿಂಹ, ಕೆ.ಆರ್.ನಗರ ಕ್ಷೇತ್ರದಿಂದ ವೆಂಕಟೇಶ್, ಚಾಮರಾಜ ಕ್ಷೇತ್ರದಿಂದ ಮುಡಾ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ, ಪಾಲಿಕೆ ಸದಸ್ಯ ನಂದೀಶ್ ಪ್ರೀತಂ, ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ಎನ್.ಆರ್.ಕ್ಷೇತ್ರದಿಂದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ.

ಇನ್ನು ಕುರುಬ ಸಮುದಾಯದ ಲೆಕ್ಕದಲ್ಲಿ ಪಿರಿಯಾಪಟ್ಟಣದಿಂದ ಗಣೇಶ್ ಮಂಜುನಾಥ್ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಬ್ರಾಹ್ಮಣರ ಲೆಕ್ಕದಲ್ಲಿ ಕೆ.ಆರ್.ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ಮಾಳವಿಕಾ ಅವಿನಾಶ್, ಮುಖಂಡರಾದ ಫಣೀಶ್, ಶ್ರೀವತ್ಸರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ.

ಬಿಜೆಪಿಗೆ ಅಭ್ಯರ್ಥಿಗಳ ಕೊರತೆ

ಬಿಜೆಪಿಗೆ ಅಭ್ಯರ್ಥಿಗಳ ಕೊರತೆ

ಇನ್ನು ವರುಣಾ ಕ್ಷೇತ್ರದಿಂದ ಲಿಂಗಾಯತ ಕೋಟಾದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಗ ಬಿ.ವೈ.ವಿಜಯೇಂದ್ರ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ಸ್ಥಳೀಯ ನಾಯಕರು ಬೇರೆ ಜಿಲ್ಲೆಯ ಲಿಂಗಾಯತ ಸಮುದಾಯದ ಪ್ರಬಲ ನಾಯಕರನ್ನು ಕ್ಷೇತ್ರಕ್ಕೆ ಕರೆತರಲು ಮುಂದಾಗಿದ್ದಾರೆ. ಉಳಿದಂತೆ ತಿ.ನರಸೀಪುರ ಮತ್ತು ನಂಜನಗೂಡು ಪರಿಶಿಷ್ಟ ಸಮುದಾಯಕ್ಕೆ ಹಾಗೂ ಎಚ್.ಡಿ.ಕೋಟೆ ಕ್ಷೇತ್ರ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾಗಿದೆ. ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ ಬಿಜೆಪಿ, ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ. ಅದರ ಹೊರತಾಗಿಯೂ 5 ಒಕ್ಕಲಿಗ, 1 ಕುರುಬ, 1 ಲಿಂಗಾಯತ, 1 ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಲು ಚಿಂತಿಸಿದೆ.

ಸ್ವಜಾತಿ ಪ್ರೇಮಕ್ಕೆ ಮಾರುಹೋಗಿದ್ದಾರಾ ಸಿದ್ದರಾಮಯ್ಯ

ಸ್ವಜಾತಿ ಪ್ರೇಮಕ್ಕೆ ಮಾರುಹೋಗಿದ್ದಾರಾ ಸಿದ್ದರಾಮಯ್ಯ

ಅಹಿಂದ ಸಮುದಾಯದ ಬಗ್ಗೆ ಹೆಚ್ಚು ಒಲವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಸ್ವಜಾತಿ ಪ್ರೇಮಕ್ಕೆ ಮಾರು ಹೋಗಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಾಗಿ ಕುರುಬ ಸಮುದಾಯ ಹಿಂದೆ, ಜೆಡಿಎಸ್ ಒಕ್ಕಲಿಗ ಸಮುದಾಯ ಹಿಂದೆ ಬಿದ್ದಿದೆ. ಮೀಸಲು ಕ್ಷೇತ್ರಗಳ ಹೊರತಾಗಿ 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷದಿಂದ ನಾಲ್ವರು ಕುರುಬ ಸಮುದಾಯದ ಅಭ್ಯರ್ಥಿಗಳಿಗೆ, 1 ಅಥವಾ 2 ಒಕ್ಕಲಿಗ ಸಮುದಾಯ ಅಭ್ಯರ್ಥಿಗಳಿಗೆ, ತಲಾ ಒಂದು ಮುಸ್ಲಿಂ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್ ದೊರೆಯುವ ಸಾಧ್ಯತೆಗಳಿವೆ.

ಈ ಬಾರಿ ಇಬ್ಬರು ಅಥವಾ ಒಬ್ಬರು ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್

ಈ ಬಾರಿ ಇಬ್ಬರು ಅಥವಾ ಒಬ್ಬರು ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್

ಕುರುಬ ಸಮುದಾಯದ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ರವಿಶಂಕರ್ ಅವರನ್ನು ಕೆ.ಆರ್.ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ವರುಣಾ ಕ್ಷೇತ್ರದಿಂದ ಯತೀಂದ್ರ ಸಿದ್ದರಾಮಯ್ಯ ಅವರನ್ನು, ಕೆ.ಆರ್.ಕ್ಷೇತ್ರದಿಂದ ಹಾಲಿ ಶಾಸಕ ಎಂ.ಕೆ.ಸೋಮಶೇಖರ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಇನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ತಾವೇ ಕಣಕ್ಕಿಳಿಯಲು ಚಿಂತಿಸಿದ್ದಾರೆ ಸಿದ್ದರಾಮಯ್ಯ. 2013ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಕೆ.ಆರ್.ನಗರ, ವರುಣಾ ಮತ್ತು ಕೆ.ಆರ್.ಕ್ಷೇತ್ರಗಳಲ್ಲಿ ಮಾತ್ರ ಕುರುಬ ಸಮುದಾಯದ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿತ್ತು. ಒಕ್ಕಲಿಗ ಸಮುದಾಯದ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಆದರೆ ಈ ಬಾರಿ 2 ಅಥವಾ 1 ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸುವ ಸಾಧ್ಯತೆಗಳಿವೆ.

ಮುಸ್ಲಿಂ ಕೋಟಾದಡಿ ಯಾರು ಅಖಾಡಕ್ಕೆ?

ಮುಸ್ಲಿಂ ಕೋಟಾದಡಿ ಯಾರು ಅಖಾಡಕ್ಕೆ?

ಪಿರಿಯಾಪಟ್ಟಣ ಕ್ಷೇತ್ರದಿಂದ ಹಾಲಿ ಶಾಸಕ ಕೆ. ವೆಂಕಟೇಶ್ ಅವರಿಗೆ ಮತ್ತೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಇನ್ನು ಚಾಮರಾಜ ಕ್ಷೇತ್ರದಿಂದ ಹಾಲಿ ಶಾಸಕ ವಾಸು ಅವರು ಮತ್ತೆ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಹಿಂದುಳಿದ ವರ್ಗದ ಡಿ.ಧ್ರುವಕುಮಾರ್ ಕೂಡ ಟಿಕೆಟ್ ಪಡೆಯಲು ಪ್ರಬಲ ಹೋರಾಟ ನೀಡುತ್ತಿದ್ದಾರೆ. ಒಂದು ವೇಳೆ ವಾಸು ಅವರಿಗೆ ಟಿಕೆಟ್ ತಪ್ಪಿದರೆ, ಜಿಲ್ಲೆಯ ಐದಾರು ಕ್ಷೇತ್ರಗಳಲ್ಲಿ ಒಕ್ಕಲಿಗ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದ್ದ ಕಾಂಗ್ರೆಸ್ ಈ ಬಾರಿ ಸಮುದಾಯದ ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದಂತೆ ಆಗುತ್ತದೆ. ಮುಸ್ಲಿಂ ಕೋಟಾದಲ್ಲಿ ಎನ್‌ ಆರ್ ಕ್ಷೇತ್ರದಿಂದ ಹಾಲಿ ಸಚಿವ ತನ್ವೀರ್ ಸೇಠ್, ರಿಜ್ವಾನ್ ಅಥವಾ ಮಾಜಿ ಮೇಯರ್ ಅಯೂಬ್ ಖಾನ್‌ಗೆ ಟಿಕೆಟ್ ದೊರೆಯಲಿದೆ. ಹಿಂದುಳಿದ ವರ್ಗದ ಕೋಟಾದಲ್ಲಿ ಶಾಸಕ ಮುಂಜುನಾಥ್ ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಜೆಡಿಎಸ್ ಟಿಕೆಟ್ ನ ಜಾತಿ ಲೆಕ್ಕಾಚಾರ ಏನು?

ಜೆಡಿಎಸ್ ಟಿಕೆಟ್ ನ ಜಾತಿ ಲೆಕ್ಕಾಚಾರ ಏನು?

ಇತ್ತ ಜೆಡಿಎಸ್ ಪಕ್ಷದಿಂದ 4 ಒಕ್ಕಲಿಗ, 1 ಕುರುಬ, 2 ಲಿಂಗಾಯತ, 1 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಈಗಾಗಲೇ ಟಿಕೆಟ್ ಘೋಷಣೆ ಮಾಡಲಾಗಿದೆ. ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಹಿಂದೆ ಬಿದ್ದಿದೆ. ಕಳೆದ ಚುನಾವಣೆಯಲ್ಲಿ 5 ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಜೆಡಿಎಸ್ ಈ ಬಾರಿ 4 ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ತೀರ್ಮಾನಿಸಿದೆ. ಕೆ.ಆರ್.ನಗರದಿಂದ ಶಾಸಕ ಸಾ.ರಾ.ಮಹೇಶ್, ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕ ಜಿ.ಟಿ.ದೇವೇಗೌಡ, ಪಿರಿಯಾಪಟ್ಟಣದಿಂದ ಮಹದೇವು, ಚಾಮರಾಜ ಕ್ಷೇತ್ರದಿಂದ ಪ್ರೊ.ರಂಗಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇನ್ನು ಕಳೆದ ಬಾರಿ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದ ಎನ್.ಆರ್.ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಂ ಕೋಟಾದಡಿ ಅಬ್ದುಲ್ಲಾ ಅವರಿಗೆ , ಹುಣಸೂರಿನಿಂದ ಕುರುಬ ಸಮುದಾಯದ ಎಚ್.ವಿಶ್ವನಾಥ್, ಲಿಂಗಾಯತ ಕೋಟಾದಡಿ ಕೆ.ಆರ್.ಕ್ಷೇತ್ರದಿಂದ ಕೆ.ವಿ.ಮಲ್ಲೇಶ್, ವರುಣಾ ಕ್ಷೇತ್ರದಿಂದ ಅಭಿಷೇಕ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

English summary
Karnataka assembly elections 2018: Here is the caste calculate political move by major political parties like Congress, BJP and JDS in Mysuru district. Which party is trying to woo which caste votes? Ticket distribution and other things explained in this article. This is home district of CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X