ಸಿದ್ದು 'ಭಾಗ್ಯ'ಗಳ ಹಣ ಸಿದ್ದರಾಮನಹುಂಡಿಯದಲ್ಲ, ಜನರದ್ದು: ಎಚ್ಡಿಕೆ
ಮೈಸೂರು, ಏಪ್ರಿಲ್ 28 : "ಹಲವು ಭಾಗ್ಯಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದಕ್ಕೆ ಬೇಕಾದ ಹಣವನ್ನು ಸಿದ್ದರಾಮಯ್ಯನ ಹುಂಡಿಯಿಂದ ತಂದಿದ್ದಲ್ಲ, ಅದು ಸಾರ್ವಜನಿಕರ ಹಣ, ಜನರ ತೆರಿಗೆ ಹಣವನ್ನು ಲೂಟಿ ಮಾಡಿ, ಈಗ ಭಾಗ್ಯಗಳ ಬಗ್ಗೆ ಜಾಹೀರಾತು ನೀಡುತ್ತಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಚಾಮರಾಜ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ರೋಡ್ ಶೋ ಏರ್ಪಡಿಸಲಾಗಿತ್ತು. ಇದೇ ವೇಳೆ ಕೆಜಿ ಕೊಪ್ಪಲಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಬಳಿಕ ವಿಕಾಸವಾಹಿನಿ ವಾಹನದ ಮೂಲಕ ಪ್ರಚಾರ ಆರಂಭಿಸಿ ಸಾರ್ವಜನಿಕರನ್ನುಕುರಿತು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ಪೋಷಕರನ್ನು ಸಂಧ್ಯಾಕಾಲದಲ್ಲಿ ಅನಾಥರನ್ನಾಗಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ 70 ವರ್ಷ ದಾಟಿದ ಎಲ್ಲ ವಯೋವೃದ್ಧರಿಗೆ ಮಾಸಿಕ 5 ಸಾವಿರ ರೂ. ಸಹಾಯ ಧನ ನೀಡಲು ನಿರ್ಧರಿಸಿದ್ದೇನೆ. ಬಾಣಂತಿಯರಿಗೆ 6 ತಿಂಗಳ ಕಾಲ ಮಾಸಿಕ 6 ಸಾವಿರ ರೂ. ನೀಡಲು ಕೂಡ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಅವರು ಅಭ್ಯರ್ಥಿ ರಂಗಪ್ಪ ಅವರೊಂದಿಗೆ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು. ಅವರೊಂದಿಗೆ ಕೆಆರ್ ಕ್ಷೇತ್ರದ ಅಭ್ಯರ್ಥಿ ಕೆ.ವಿ.ಮಲ್ಲೇಶ್, ಶಾಸಕರಾದ ಸಾ.ರಾ.ಮಹೇಶ್, ಮರಿತಿಬ್ಬೇಗೌಡ ಹಾಜರಿದ್ದರು.
ಬೃಹತ್ ಮೋಸಂಬಿ ಹಾರ : ಇದೇ ವೇಳೆ ಮಾಜಿ ಮಹಾಪೌರ ಎಂ.ಜೆ.ರವಿಕುಮಾರ್ ಅವರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ವಿಕಾಸ ವಾಹಿನಿ ಆಗಮಿಸಿದ ವೇಳೆ ಕುಮಾರಸ್ವಾಮಿ ಅವರಿಗೆ ಬೃಹತ್ ಮೋಸಂಬಿ ಹಾರ ಹಾಕಿದರು. 6 ಸಾವಿರ ಮೋಸಂಬಿ, 600 ಅನಾನಸ್ ಹಾಗೂ 2 ಸಾವಿರ ಬಾಳೆಹಣ್ಣನ್ನು ಬಳಸಿ ಹಾರ ಸಿದ್ಧಪಡಿಸಲಾಗಿತ್ತು.












Click it and Unblock the Notifications