DK Shivakumar: ರಕ್ತದಲ್ಲಿ ಬೇಕಾದ್ರೆ ಬರೆದುಕೊಡ್ತೀನಿ! 15 ದಿನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತೆ ಎಂದ ಡಿಕೆಶಿ
ಇನ್ನು ಹದಿನೈದು ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬಿಎಸ್ ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಡಿಕೆಶಿ ರಕ್ತದಲ್ಲಿ ಬೇಕಾದ್ರೆ ಬರೆದುಕೊಡ್ತೇನೆ ಕಾಂಗ್ರೆಸ್ ಈ ಬಾರಿ ಸರ್ಕಾರ ರಚಿಸುತ್ತೆ ಎಂದು ಹೇಳಿದರು.
ಮೈಸೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ರಾಜ್ಯ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳಿಗೆ ಕುಸಿಯಲಿದೆ, ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿ ಮತದಾರ ಈ ಬಾರಿ ತಕ್ಕ ಪಾಠ ಕಲಿಸುತ್ತಾನೆ ಎಂದು ಅವರು ಹೇಳಿದರು.

ಯಾರನ್ನೋ ಸೋಲಿಸುವುದಷ್ಟೇ ನಿಮ್ಮ ಗುರಿಯೇ ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿರುವ ಡಿಕೆ ಶಿವಕುಮಾರ್, ಬಿಜೆಪಿಯಿಂದ ಯಾರಿಗೂ ಅನುಕೂಲವಾಗಿಲ್ಲ. ರೈತರು, ವರ್ತಕರು, ಯುವಕರಿಗೆ ಬಿಜೆಪಿ ಮೋಸ ಮಾಡಿದೆ. ಇನ್ನು ಬಿಜೆಪಿ ಆಟ ನಡೆಯಲ್ಲ, 15 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ನಿಶ್ಚಿತ, ನನ್ನ ರಕ್ತದಲ್ಲಿ ಬೇಕಾದ್ರೂ ಬರೆದುಕೊಡಲು ಸಿದ್ಧ ಎಂದು ಡಿಕೆ ಶಿವಕುಮಾರ್ ಹೇಳಿದರು.
ರಕ್ತದಲ್ಲಿ ಬರೆದುಕೊಡ್ತೇನೆ ಎಂದಿದ್ದ ಬಿಎಸ್‌ಐ
ಲಿಂಗಾಯತ ನಾಯಕರ ಜೊತೆಗಿನ ಸಭೆ ಬಳಿಕ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ವಿರುದ್ಧ ಕಿಡಿ ಕಾರಿದರು. ಜಗದೀಶ್ ಶೆಟ್ಟರ್ ಗೆ ನಾವು ಏನು ಅನ್ಯಾಯ ಮಾಡಿದ್ದೇನೆ, ಹಲವು ಕಾರಣಗಳಿಂದ ಅವರಿಗೆ ಟಿಕೆಟ್ ನೀಡಲು ಸಾಧ್ಯವಾಗಲಿಲ್ಲ. ಕೇಂದ್ರದಲ್ಲಿ ಸಚಿವ ಸ್ಥಾನ, ಪತ್ನಿಗೆ ಟಿಕೆಟ್ ಕೊಡ್ತೇವೆ ಎಂದು ಭರವಸೆ ನೀಡಿದರೂ, ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಬಿಎಸ್‌ವೈ ಹೇಳಿದ್ದರು.
ಬಿಜೆಪಿಯಿಂದ ಎಲ್ಲಾ ಅಧಿಕಾರವನ್ನು ಅನುಭವಿಸಿ ಈಗ ಕಾಂಗ್ರೆಸ್ ಕದ ತಟ್ಟಿರುವ ಜಗದೀಶ್ ಶೆಟ್ಟರ್ ಅವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕಿದೆ, ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಈ ಬಾರಿ ಏನೇ ಮಾಡಿದರೂ ಶೆಟ್ಟರ್ ಗೆಲ್ಲಲು ಸಾಧ್ಯವಿಲ್ಲ ನಾನು ಇದನ್ನು ರಕ್ತದಲ್ಲಿ ಬೇಕಾದರೂ ಬರೆದುಕೊಡಲು ಸಿದ್ಧ ಎಂದು ಬಿಎಸ್‌ವೈ ಹೇಳಿದ್ದರು. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಇನ್ನೂ ಹಲವು ಬಾರಿ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದರು.
ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಸದ್ಯ ಚುನಾವಣೆಯಲ್ಲಿ ಸರಳ ಬಹುಮತ ಪಡೆಯುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷೆಗಳಲ್ಲಿ ಬಹಿರಂಗವಾಗಿರುವುದು, ಪಕ್ಷದ ಉತ್ಸಾಹವನ್ನು ಹೆಚ್ಚಿಸಿದೆ.












Click it and Unblock the Notifications