ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣವೇ ಗೊತ್ತಿಲ್ಲ; ಜಿಟಿ ದೇವೇಗೌಡ ವ್ಯಂಗ್ಯ
ಮೈಸೂರು. ಮೇ 11: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ (ಮೇ 10)ರಂದು ಮತದಾನ ನಡೆದಿದ್ದು, ಬಹು ನಿರೀಕ್ಷೆಯ ಮತ ಎಣಿಕೆ ಮತ್ತು ಫಲಿತಾಂಶ ಶನಿವಾರ (ಮೇ 13) ಪ್ರಕಟಗೊಳ್ಳಲಿದೆ. ಫಲಿತಾಂಶಕ್ಕೂ ಎರಡು ದಿನಗಳ ಮುನ್ನ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರೆ, ಕೆಲವರು ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜಿಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಅವರು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು ಮತ್ತು ಸಿದ್ದರಾಮಯ್ಯ ರೀತಿ ಅಧಿಕಾರಕ್ಕಾಗಿ ಯಾರ್ ಯಾರ ಮನೆ ಬಾಗಿಲಿಗೂ ಹೋದವನಲ್ಲ ಎಂದು ವ್ಯಂಗ್ಯವಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಅವರ ಊರಲ್ಲೇ ಎಷ್ಟು ಮತ ತೆಗೆದುಕೊಳ್ಳುತ್ತಾನೆ ನೋಡೊಣ ಬನ್ನಿ. ಈ ಸಿದ್ದೇಗೌಡನನ್ನು ನಾನು ಯಾಕೆ ಬುಕ್ ಮಾಡಲಿ. ನಾನು ಸಿದ್ದೇಗೌಡನ ಜೊತೆ ಸೇರೋದು ಬಿಡಿ, ಅವನನ್ನು ನನ್ನ ಮನೆ ಬಾಗಿಲಿಗೆ ಸೇರಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
"ನಾನು ಗೆಲ್ಲಲಿ ಅಥವಾ ಸೋಲಲಿ, ನನ್ನ ಜೀವನದಲ್ಲಿ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಲ್ಲ. ಈ ಸಿದ್ದೇಗೌಡನ ಬಗ್ಗೆ ಸಿದ್ದರಾಮಯ್ಯಗೆ ನಾನು ಹೇಳಿದ್ದೆ. ನಾನು ಹೇಳಿದ್ದೆಲ್ಲ ಅವರು ಮರೆತಿದ್ದಾರೆ. ನನಗೆ ಕಳೆದ ಚುನಾವಣೆಯೇ ಕಷ್ಟ ಆಗಲಿಲ್ಲ. ಇನ್ನು ಈಗ ಕಷ್ಟ ಆಗುತ್ತಾ?, ಮಾವಿನಹಳ್ಳಿ ಸಿದ್ದೇಗೌಡನ ಜೊತೆ ಹೊಂದಾಣಿಕೆ ಅಲ್ಲ, ಜೀವಮಾನದಲ್ಲಿ ಮಾತನಾಡಿಸಲ್ಲ. ನನ್ನ ಬಿಟ್ಟು ಹೋದ ಐದು ಜನರನ್ನೂ ನಾನು ಹತ್ತಿರ ಸೇರಿಸಲ್ಲ," ಎಂದು ಕಿಡಿಕಾರಿದರು.
"ತಾಲ್ಲೂಕು ಬೋರ್ಡ್, ಎಪಿಎಂಸಿ, ಡೈರಿ ಚುನಾವಣೆಯಲ್ಲಿ ಅಪ್ಪ-ಮಕ್ಕಳು ಸೋತಿದ್ದಾರೆ. ಅಂತವರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ನಿಲ್ಲಿಸಿದ್ದಾರೆ. ಸಿದ್ದರಾಮಯ್ಯ ಬರೀ ದ್ವೇಷಕ್ಕೆ ರಾಜಕಾರಣ ಮಾಡಿದರು. ಅಷ್ಟೂ ಇದ್ದರೆ ಅವರಿಗಾಗಿ ಸರ್ವಸ್ವ ತ್ಯಾಗ ಮಾಡಿದ ಮರೀಗೌಡನಿಗೆ ಟಿಕೆಟ್ ಕೊಡಬೇಕಿತ್ತು. ಒಕ್ಕಲಿಗರಲ್ಲೇ ಕೊಡುವುದಾದರೆ ಸತ್ಯಪ್ಪ ಮಗ ಅರುಣ್, ನರಸೇಗೌಡ, ಕೃಷ್ಣಸಾಗರ್ ಇದ್ದರು. ಇವರಿಗೆ ಕೊಟ್ಟಿದ್ದರೆ ಗೌರವಯುತವಾಗಿ ಸೋಲುತ್ತಿದ್ದರು," ಎಂದು ಜಿ.ಟಿ. ದೇವೇಗೌಡ ತಿಳಿಸಿದರು.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಅವರು ಜಿಟಿ ದೇವೇಗೌಡ ಜೊತೆ ಹೊಂದಾಣಿಕೆ ಮಾಡಿದ್ದಾರೆಂಬ ಕಾಂಗ್ರೆಸ್ ಕಾರ್ಯಕರ್ತರ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದ ಜಿಟಿ ದೇವೇಗೌಡ, ಪ್ರಚಾರದ ವೇಳೆ ಎಲ್ಲಾ ಕಾರ್ಯಕರ್ತರು ನನಗೆ ಅದ್ಧೂರಿ ಸ್ವಾಗತ ಕೊಟ್ಟಿದ್ದಾರೆ. ಜನರು ಭಾರೀ ಉತ್ಸಾಹದಿಂದ, ಪ್ರೀತಿಯಿಂದ ನನ್ನನ್ನು ಗೆಲ್ಲಿಸುವ ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ಗೆ ಜನರೇ ಹಣ ಕೊಟ್ಟಿದ್ದಾರೆ
ಇನ್ನು ಕೆಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಬಗ್ಗೆ ಭವಿಷ್ಯ ನುಡಿಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಜಿಟಿ ದೇವೇಗೌಡ, ಇನ್ನು ಒಂದೇ ದಿನ ಬಾಕಿ ಇದೆ, ಜನರ ತೀರ್ಪು ಬರಲಿ ನೋಡೋಣವೆಂದರು.
ಬಿಜೆಪಿಗೆ ಕೇಂದ್ರದಿಂದ ಹಣ ಬರುತ್ತದೆ ಖರ್ಚು ಮಾಡಿದ್ದಾರೆ. ಕಾಂಗ್ರೆಸ್‌ನವರು ಅವರವರೇ ಸೇರಿ ದುಡ್ಡು ಹಾಕಿ ಚುನಾವಣೆ ಎದುರಿಸಿದ್ದಾರೆ. ಆದರೆ ಜೆಡಿಎಸ್‌ಗೆ ಜನರೇ ತಂದು ಕೊಟ್ಟು ಚುನಾವಣೆ ಮಾಡಿಸಿದ್ದಾರೆ. ಎಚ್‌ಡಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿ ಪಕ್ಷ ಉಳಿಬೇಕು ಅಂತ ಜನರ ಚುನಾವಣೆ ಮಾಡಿಸಿದ್ದಾರೆ ಎಂದು ಜಿಟಿ ದೇವೇಗೌಡ ತಿಳಿಸಿದರು.












Click it and Unblock the Notifications