Karnataka bandh: ಕರ್ನಾಟಕ ಬಂದ್ ಮುಂದೂಡುವ ಬಗ್ಗೆ ವಾಟಾಳ್ ನಾಗರಾಜ್ ಏನಂದ್ರು?
ಬೆಳಗಾವಿಯಲ್ಲಿ ಕನ್ನಡಿಗ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮಾರ್ಚ್ 22ರಂದು ಕರ್ನಾಟಕ ಬಂದ್ ಘೋಷಿಸಿದ್ದಾರೆ. ಈ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರೆ, ವಿದ್ಯಾರ್ಥಿಗಳ ಪರೀಕ್ಷೆ ಇರುವುದರಿಂದ ಆ ದಿನ ಬಂದ್ ಮಾಡುವುದು ಬೇಡ ಎನ್ನುತ್ತಿದ್ದಾರೆ. ಬಂದ್ ಮಂದೂಡಿಕೆಯಾಗುತ್ತಾ? ಇಲ್ಲವಾ? ಎಂಬ ಬಗ್ಗೆ ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಅವರೇ ಮಾತನಾಡಿದ್ದಾರೆ.
ಕರ್ನಾಟಕ ಬಂದ್ ಎನ್ನುವುದು ಒಂದು ಸಮುದ್ರವಿದ್ದಂತೆ. ಈ ಸಮುದ್ರದಲ್ಲಿ ಅಲೆಗಳು ಬೀಸುತ್ತಲೇ ಇರುತ್ತವೆ. ಹಾಗಾಗಿ ಬಂದ್‌ಗೆ ಬೆಂಬಲ ಕೊಡದವರ ಬಗ್ಗೆ ನಮಗೆ ಯಾವುದೇ ಚಿಂತೆ ಇಲ್ಲ. ಬದಲಾಗಿ ಅವರ ಮೇಲೆ ನಮಗೆ ಗೌರವ ಇದೆ. ನನ್ನ ಪ್ರಕಾರ ಅವರೆಲ್ಲರೂ ಕೊನೇ ಕ್ಷಣದಲ್ಲಿ ನಮ್ಮ ಬಂದ್‌ಗೆ ಸಹಕಾರ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಇಡೀ ರಾಜ್ಯದಲ್ಲಿ ಇದು ಯಾವುದೇ ವೈಯಕ್ತಿಕ ವಿಚಾರದ ಬಂದ್ ಅಲ್ಲ. ಇದು ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ಹಾಗೂ ಕರ್ನಾಟಕದ ಏಳಿಗೆಗಾಗಿ ಮಾಡುತ್ತಿರುವ ಬಂದ್. ಹಾಗಾಗಿ ಬಂದ್ ವಿರುದ್ಧ ಮಾತನಾಡುವವರು ಯಾರಾದರೂ ಅವಿವೇಕಿಗಳೇ ಇರಬಹುದು. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷರಾದ ಟಿಎ ನಾರಾಯಣಗೌಡರ ಬಗ್ಗೆ ಅಪಾರವಾದ ಗೌರವವಿದೆ. ಪ್ರವೀಣ್ ಶೆಟ್ಟಿ ಅವರ ಬಗ್ಗೆಯೂ ಗೌರವ ಇದೆ. ಅವರೆಲ್ಲರೂ ನಮ್ಮ ಸ್ನೇಹಿತರು. ಅವರು ನಮಗೆ ಬೆಂಬಲ ಕೊಟ್ಟೇ ಕೊಡ್ತಾರೆ ಎಂದಿದ್ದಾರೆ.
ಕಾಂಗ್ರೆಸ್ ಪಾರ್ಟಿಯಲ್ಲೂ ಕಿತ್ತಾಟ ಇದೆ. ಬಿಜೆಪಿಯಲ್ಲೂ ಕಿತ್ತಾಟ ಇದೆ. ಅದೇ ರೀತಿ ಕನ್ನಡ ಸಂಘಟನೆಗಳಲ್ಲೂ ಇದೆ. ಇನ್ನೂ ನಾರಾಯಣಗೌಡರು ನಮಗೆ ಬೇಕಾದವರು. ಅವರ ಬಗ್ಗೆ ಯಾವುದೇ ಬೇಸರವಿಲ್ಲ. ಆದರೆ ಬಂದ್ ಮಾಡುವವರ ಬಗ್ಗೆ ಏನೇನೋ ಮನಬಂದಂತೆ ಮಾತನಾಡುತ್ತಿದ್ದಾರೆ. ಇಡೀ ರಾಜ್ಯವೇ ಬಂದ್‌ಗೆ ಪರವಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕ ಬಂದ್ ಅಂದ್ರೆ ಪ್ರಧಾನಿಗೂ ಗೊತ್ತಾಗುತ್ತೆ, ದೆಹಲಿಗೂ ತಿಳಿಯುತ್ತೆ. ಯಾರು ಏನೇ ಹೇಳಲಿ ಮಾರ್ಚ್ 22ರಂದು ಎಂದೂ ಕಂಡರಿಯದಂತಹ ಕರ್ನಾಟಕ ಬಂದ್ ಇರಲಿದೆ. ಅಂದು ಕರ್ನಾಟಕದ ಪ್ರತಿ ಜಿಲ್ಲೆಗಳೂ ಬಂದ್ ಆಗೇ ಆಗುತ್ತೆ ಎಂದು ವಾಟಾಳ್ ಸ್ಪಷ್ಟಪಡಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದ್ದರೇನು?
ಕರ್ನಾಟಕ ಬಂದ್ ಘೋಷಣೆಯಾಗಿರುವ ಸಮಯದಲ್ಲೇ ಎಸ್‌ಎಸ್‌ಎಲ್‌ಸಿ ಹಾಗೂ ಹೈಸ್ಕೂಲ್ ಪರೀಕ್ಷೆಗಳು ನಿಗದಿಯಾಗಿವೆ. ಹಾಗಾಗಿ ಬಂದ್ ದಿನಾಂಕ ಮುಂದೂಡುವಂತೆ ಪೋಷಕರಿಂದಲೂ ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಯಾವ ಕಾರಣಕ್ಕೂ ಪರೀಕ್ಷೆಗಳು ಮುಂದೂಡಲ್ಲ. ನಿಗದಿಯಂತೆ ಪರೀಕ್ಷೆ ನಡೆಯುತ್ತವೆ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ವಾಟಾಳ್ ನಾಗರಾಜ್ ಅವರು ಕನ್ನಡಕ್ಕಾಗಿ ಒಂದು ದಿನ ತ್ಯಾಗಕ್ಕೆ ತಯಾರಿರಬೇಕು. ಕನ್ನಡಕ್ಕಾಗಿ ಜೀವ ಕೊಡಲೂ ತಯಾರಿರಬೇಕು. ಯಾರು ಹೇಳಿದರೂ, ಆಕಾಶ-ಭೂಮಿ ಒಂದಾದರೂ ಬಂದ್ ದಿನಾಂಕ ಚೇಂಜ್ ಮಾಡಲ್ಲ ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications