ಮೈಸೂರಿನಲ್ಲಿ ಮತ್ತೆ ಒಂದಾದ ಸಿದ್ದರಾಮಯ್ಯ ಮತ್ತು ದೇವೇಗೌಡ
ಮೈಸೂರು, ಮಾರ್ಚ್ 27: ಚುನಾವಣಾ ವರ್ಷದಲ್ಲಿ ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆಯುವ ಕೆಲಸಗಳು ವೇಗವನ್ನು ಪಡೆದುಕೊಳ್ಳುತ್ತಿದೆ. ಮುಂದಿನ ಚುನಾವಣೆಯ ಹೊತ್ತಿಗೆ ಹಾಲೀ ಹಲವು ಜೆಡಿಎಸ್ ಶಾಸಕರು ಪಕ್ಷವನ್ನು ತೊರೆಯುವುದು ಬಹುತೇಕ ಖಚಿತಗೊಳ್ಳುತ್ತಿದೆ.
ಪಕ್ಷದ ಅದರಲ್ಲೂ ಪ್ರಮುಖವಾಗಿ ಜೆಡಿಎಸ್ ಬೇರು ಬಲವಾಗಿರುವ ಜಿಲ್ಲೆಗಳ ನಾಯಕರುಗಳು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಬಹಿರಂಗವಾಗಿಯೇ ಮೂವರು ಹಾಲೀ ಶಾಸಕರು ಪಕ್ಷ ತೊರೆಯುವ ಬಗ್ಗೆ ಮಾತನ್ನಾಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೆಗೌಡ, ಗುಬ್ಬಿ ಶಾಸಕ ಶ್ರೀನಿವಾಸ್ ಮತ್ತು ಕೋಲಾರ ಶಾಸಕ ಶ್ರೀನಿವಾಸ ಗೌಡ, ಈ ಮೂವರೂ ಈಗಾಗಲೇ ಬಹಿರಂಗವಾಗಿಯೇ ತಮ್ಮ ನಿಲುವನ್ನು ಸಾರ್ವಜನಿಕವಾಗಿ ತಿಳಿಸಿದ್ದಾರೆ.
ಈ ಪೈಕಿ, ದೇವೇಗೌಡ್ರ ಕುಟುಂಬಕ್ಕೆ ಒಂದು ಕಾಲದಲ್ಲಿ ಆಪ್ತರಾಗಿದ್ದ ಜಿ.ಟಿ.ದೇವೇಗೌಡ ಕೂಡಾ ಮಗನೊಂದಿಗೆ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ. ಜಿಟಿಡಿಯವರು ಕಳೆದ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಿದ್ದ ಸಿದ್ದರಾಮಯ್ಯನವರ ಜೊತೆಗೆ ಆಪ್ತರಾಗುತ್ತಿದ್ದಾರೆ.

ನನ್ನ ಮಗನಿಗೆ ಟಿಕೆಟ್ ಕೊಟ್ಟರೆ ಮಾತ್ರ ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಸೇರುವ ವಿಚಾರದಲ್ಲಿ ಮಾತನಾಡಿದ್ದ ಜಿ.ಟಿ.ದೇವೇಗೌಡ, "ನನ್ನ ಮಗನಿಗೆ ಟಿಕೆಟ್ ಕೊಟ್ಟರೆ ಮಾತ್ರ ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ. ಮೊದಲು ನನ್ನ ಮಗ ಹರೀಶ್ ಗೌಡ ವಿಚಾರದಲ್ಲಿ ಕಾಂಗ್ರೆಸ್ ತನ್ನ ತೀರ್ಮಾನ ಹೇಳಿದ ಮೇಲೆ ಉಳಿದ ಮಾತುಕತೆ ನಡೆಸುತ್ತೇನೆ" ಎಂದು ಹೇಳಿದ್ದರು. ಈಗ, ಕ್ಷೇತ್ರದ ಕಾರ್ಯಕ್ರಮವೊಂದಕ್ಕೆ ಸಿದ್ದರಾಮಯ್ಯನವರನ್ನು ಕರೆಸಿದ್ದಾರೆ. ಆ ಮೂಲಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಸಡ್ಡು ಹೊಡೆದಿದ್ದಾರೆ.
|
ಖುದ್ದು ಸಿದ್ದರಾಮಯ್ಯನವರೇ ಟ್ವೀಟ್ ಮಾಡಿದ್ದಾರೆ
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಶನಿವಾರ (ಮಾರ್ಚ್ 26) ನಡೆದ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದಾರೆ. ಈ ಬಗ್ಗೆ ಖುದ್ದು ಸಿದ್ದರಾಮಯ್ಯನವರೇ ಟ್ವೀಟ್ ಮಾಡಿದ್ದಾರೆ. "ಮೈಸೂರಿನ ಇಲವಾಲದಲ್ಲಿ ಹೊಸದಾಗಿ ಆಳವಡಿಸಿರುವ ಬೀದಿ ದೀಪಗಳ ಉದ್ಘಾಟನೆಯನ್ನು ನೆರವೇರಿಸಿದೆ. ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಈ ವೇಳೆ ಹಾಜರಿದ್ದರು"ಎಂದು ಟ್ವೀಟ್ ಮಾಡಿದ್ದಾರೆ.

ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಕುಮಾರಸ್ವಾಮಿ ಜೊತೆಗೆ ಮನಸ್ತಾಪ
ಸಿದ್ದರಾಮಯ್ಯನವರನ್ನು ಕಳೆದ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಭಾರೀ ಅಂತರದಿಂದ ಸೋಲಿಸಿದ್ದರು. ಕುಮಾರಸ್ವಾಮಿಯವರನ್ನು ಪ್ರಚಾರಕ್ಕೆ ಅತಿಯಾಗಿ ಕರೆಸಿಕೊಳ್ಳದೇ ತಮ್ಮ ವರ್ಚಸ್ಸಿನಿಂದಲೇ ಜಿಟಿಡಿ ಗೆಲುವು ಸಾಧಿಸಿದ್ದರು. ಇದಾದ ಸ್ವಲ್ಪದಿನಗಳಲ್ಲಿ ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಕುಮಾರಸ್ವಾಮಿ ಜೊತೆಗೆ ಮನಸ್ತಾಪ ಉಂಟಾಗಿತ್ತು. ಸಮ್ಮಿಶ್ರ ಸರಕಾರದ ಪತನದ ನಂತರ ಜೆಡಿಎಸ್ ಚಟುವಟಿಕೆಯಿಂದ ಜಿಟಿಡಿ ಸಂಪೂರ್ಣ ದೂರವಾಗಿದ್ದರು. ಕ್ಷೇತ್ರದ ಕಾರ್ಯಕ್ರಮಕ್ಕೆ ಜಿಟಿಡಿಯವರು ಎಚ್ಡಿಕೆಯವರನ್ನು ಕರೆಯುತ್ತಿಲ್ಲ. ಹಾಗೆಯೇ, ಕುಮಾರಸ್ವಾಮಿಯವರು ಅವರನ್ನು ಆಹ್ವಾನಿಸುತ್ತಿಲ್ಲ.

ಜಿಟಿಡಿ ಮಗ ಹರೀಶ್ ಮತ್ತು ನಿಖಿಲ್ ದೇವಸ್ಥಾನವೊಂದರಲ್ಲಿ ಭೇಟಿ
ಜಿಟಿಡಿಯವರ ಮನವೊಲಿಸುವ ಕೆಲಸವನ್ನು ದೇವೇಗೌಡ್ರು ಹಲವು ಬಾರಿ ಮಾಡಿದ್ದರು. ಇದರ ಜೊತೆಗೆ, ಜಿಟಿಡಿ ಮಗ ಹರೀಶ್ ಮತ್ತು ನಿಖಿಲ್ ಕುಮಾರಸ್ವಾಮಿಯವರು ದೇವಸ್ಥಾನವೊಂದರಲ್ಲಿ ಭೇಟಿಯಾಗಿದ್ದರು. "ನನ್ನ ಮಗ ಮತ್ತು ಜಿಟಿಡಿಯವರ ಮಗ ಹಳೆಯ ಸ್ನೇಹಿತರು. ಜಿಟಿಡಿ ಪಕ್ಷದಲ್ಲೇ ಉಳಿಯಲಿದ್ದಾರಾ ಎನ್ನುವ ಪ್ರಶ್ನೆಗೆ ಸದ್ಯ ಉತ್ತರಿಸಲಾರೆ. ಕೆಲವೊಮ್ಮೆ ಮಕ್ಕಳ ಮಾತನ್ನೂ ಕೇಳಬೇಕಾಗುತ್ತದೆ"ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದರು. ಆದ್ರೆ, ಜಿಟಿಡಿ ದಿನದಿಂದ ದಿನಕ್ಕೆ ಕಾಂಗ್ರೆಸ್ಸಿಗೆ ಹತ್ತಿರವಾಗುತ್ತಿದ್ದಾರೆ.












Click it and Unblock the Notifications