ಕೆಆರ್ ಕ್ಷೇತ್ರದಿಂದ ರೂಪಾ ಅಯ್ಯರ್ ಸ್ಪರ್ಧೆ? ಕೆಪಿಜೆಪಿ ಮಾಹಿತಿ ಏನು?
ಮೈಸೂರು, ಜನವರಿ 31 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣೆ ಪ್ರಚಾರಕ್ಕೆ ನಟ- ನಟಿಯರನ್ನು ಕರೆಸುವುದು ಸಾಮಾನ್ಯ. ಆದರೆ ಈ ಕ್ಷೇತ್ರದಲ್ಲಿ ನಿರ್ದೇಶಕಿ-ನಟಿಯೊಬ್ಬರು ಚುನಾವಣೆಗೆ ಸ್ಫರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂದ ಹಾಗೆ ಹಾಗೆ ಸುದ್ದಿಯಾಗಿರುವ ಕ್ಷೇತ್ರ ಮೈಸೂರಿನ ಕೆ.ಆರ್ ನಗರ.
ನಟಿ-ನಿರ್ದೇಶಕಿ, ಅಧ್ಯಾತ್ಮ ಚಿಂತಕಿ ರೂಪಾ ಅಯ್ಯರ್ ಹೆಸರು ಇದೀಗ ಹೊಸ ಸೇರ್ಪಡೆ. ನಟ-ನಿರ್ದೇಶಕ ಉಪೇಂದ್ರ ಸ್ಥಾಪಿಸಿದ ಕೆಪಿಜೆಪಿಯಿಂದ ರೂಪಾ ಅಯ್ಯರ್ ಕಣಕ್ಕಿಳಿಯುತ್ತಾರೆ ಎಂಬುದು ಸದ್ಯದ ಮಾಹಿತಿ. ರೂಪಾ ಅಯ್ಯರ್ ಯಾವ ಕ್ಷೇತ್ರದಲ್ಲಿ ಕಣಕ್ಕಿಳಿದರೇ ಗೆಲುವು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಕೆಲವು ದಿನಗಳಿಂದ ಮೈಸೂರಿನಲ್ಲೇ ಬೀಡು ಬಿಟ್ಟಿದ್ದ ರೂಪಾ ಮೈಸೂರಿನ ವಿಧಾನಸಭಾ ಕ್ಷೇತ್ರಗಳ ಅಧ್ಯಯನದಲ್ಲಿ ತೊಡಗಿದ್ದಾರೆ. ಈ ಅಧ್ಯಯನ ಪೂರ್ಣಗೊಂಡ ಬಳಿಕ ಪಕ್ಷದ ಅಧ್ಯಕ್ಷ ಉಪೇಂದ್ರರಿಂದ ಯಾವ ಕ್ಷೇತ್ರಕ್ಕೆ ರೂಪಾ ಸ್ಪರ್ಧಿಸಲಿದ್ದಾರೆ ಹಾಗೂ ಇತರ ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಎಂಬುದರ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.

ಹಲವು ಪ್ರಶಸ್ತಿ
ರಾಜ್ಯ- ರಾಷ್ಟ್ರೀಯ- ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಚಿತ್ರ ನಿರ್ದೇಶಕಿ ರೂಪಾ ಅಯ್ಯರ್ ಸಾಮಾಜಿಕ ಜಾಗೃತಿ ಮೂಡಿಸುವ ಚಿತ್ರಗಳನ್ನು ನಿರ್ಮಿಸಿದ್ದಾರೆ. ಲಂಡನ್ ನ ಮಹಾತ್ಮ ಗಾಂಧಿ ಪ್ರಶಸ್ತಿ ಪಡೆದಿರುವ ರೂಪಾ ಅಯ್ಯರ್, ಗಾಂಧಿ ತತ್ವಗಳನ್ನು ವ್ಯವಸ್ಥೆಯಲ್ಲಿ ಜಾರಿಗೆ ತರುವುದಕ್ಕೆ ಉಪೇಂದ್ರರ ಕೆಪಿಜೆಪಿ ಮೂಲಕ ಯತ್ನಿಸುತ್ತಿರುವುದು ವಿಶೇಷ.

ಮೈಕ್ರೋ ಮ್ಯಾನಿಫೆಸ್ಟೋ ಸಲ್ಲಿಕೆ
ರೂಪಾ ಅಯ್ಯರ್ ಸದ್ಯಕ್ಕೆ ಉಪೇಂದ್ರರ ಕೆಪಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಮೈಸೂರಿನ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಕೃಷ್ಣರಾಜ ಕ್ಷೇತ್ರದಿಂದ ಸ್ಪರ್ಧಿಸಲು ಮೈಕ್ರೋ ಮ್ಯಾನಿಫೆಸ್ಟೋ ಕೂಡ ಸಲ್ಲಿಸಿದ್ದಾರೆ.

ಮೈಸೂರಿನ ನಂಟು
ರೂಪಾ ಅಯ್ಯರ್ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂಬ ಮಾಹಿತಿಯಿದೆ. ತತ್ವ ಶಾಸ್ತ್ರದಲ್ಲಿ ಎಂಎ ಮಾಡಿ, ಭಗವದ್ಗೀತೆಯ ಭಕ್ತಿ- ಕರ್ಮ- ಜ್ಞಾನ ಮಾರ್ಗಗಳನ್ನು ಅನುಸರಿಸುವ ರೂಪಾ ಅಯ್ಯರ್ ಚಾಮುಂಡೇಶ್ವರಿಯ ಭಕ್ತೆ. "ಮೈಸೂರು ನಮ್ಮ ಅಜ್ಜಿ ಊರು. ಮೈಸೂರಿನಲ್ಲಿಯೂ ಬೆಳೆದಿದ್ದೇನೆ. ನಾನು ಮೈಸೂರಿನ ಸೊಸೆ. ನಮ್ಮ ಅತ್ತೆ ಮನೆ ಕೃಷ್ಣರಾಜ ಕ್ಷೇತ್ರದಲ್ಲಿಯೇ ಇದೆ" ಎನ್ನುತ್ತಾರೆ ರೂಪಾ ಅಯ್ಯರ್.

ರೂಪಾ ಅಯ್ಯರ್ ಆಕಾಂಕ್ಷಿ ಹೌದು
ರೂಪಾ ಅಯ್ಯರ್ ಅವರು ಸ್ಪರ್ಧಾ ಆಕಾಂಕ್ಷಿ ಹೌದು. ತಮ್ಮ ಕನಸುಗಳ ಬಗ್ಗೆ ಮೈಕ್ರೋ ಮ್ಯಾನಿಫೆಸ್ಟೋ ಸಲ್ಲಿಸಿದ್ದಾರೆ. ಆದರೆ ಕೆಪಿಜೆಪಿಯಿಂದ ಯಾವುದೇ ಅಭ್ಯರ್ಥಿಗಳನ್ನು ಅಂತಿಮ ಮಾಡಿಲ್ಲ. ಆ ಬಗ್ಗೆ ಘೋಷಣೆ ಮಾಡುವುದಿದ್ದರೆ ಅದು ಉಪೇಂದ್ರ ಅವರು ಮಾತ್ರ ಎಂದು ಕೆಪಿಜೆಪಿ ಮೂಲಗಳು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿವೆ.












Click it and Unblock the Notifications