ಮೈಸೂರಿನಲ್ಲೊಬ್ಬ ಹುಳು ಭಕ್ಷಕ 'ರಾಘವೇಂದ್ರ'
ಮೈಸೂರು, ಜ. 5: ಚೀನಾದಲ್ಲಿ ಯಾವುದೋ ಪುಣ್ಯಾತ್ಮ ಹುಳಗಳನ್ನು ಕಚಕಚನೆ ಜಗಿಯುವ ವಿಡಿಯೋ ವಾಟ್ಸಾಪ್ ನಲ್ಲಿ ನೋಡಿ ವಾಕರಿಗೆ ಬರುವುದಿದೆ. ವಿದೇಶಗಳಲ್ಲಿ ಇದೆಲ್ಲಾ ಕಾಮನ್ ಅಂದುಕೊಂಡು ಸುಮ್ಮನಾಗಬೇಕು ಅಷ್ಟೆ.
ಆದರೆ ನಮ್ಮ ರಾಜ್ಯದ ಸಾಂಸ್ಕೃತಿಕ ರಾಜಧಾನಿಯಲ್ಲೇ ಹುಳುಗಳನ್ನೇ ಆಹಾರವಾಗಿರಿಸಿಕೊಂಡಿರುವ ವ್ಯಕ್ತಿಯೊಬ್ಬರಿದ್ದಾರೆ. ಮೈಸೂರಿನ ರಾಮಕೃಷ್ಣನಗರದ ರಾಘವೇಂದ್ರ ಕಳೆದ ಹತ್ತು ವರ್ಷಗಳಿಂದ ವಿವಿಧ ಜಾತಿಯ ಹುಳುಗಳನ್ನು ತಿನ್ನುತ್ತ ಬಂದಿದ್ದಾರೆ. ಹುಳುಗಳು ಇವರ ಹೊಟ್ಟೆಗೆ ಇಳಿದ ಮೇಲೆ ಯಾವುದೇ ತೊಂದರೆ ಕೊಡುವುದಿಲ್ಲವಂತೆ.

ಎರಡು ಪದವಿಗಳನ್ನು ಗಳಿಸಿರುವ ರಾಘವೇಂದ್ರಗೆ ಈ ಹುಳು ಭಕ್ಷಿಸೋ ಚಟ ಆರಂಭವಾಗಿದ್ದೇ ಒಂದು ವಿಶೇಷ. ಹಿಂದೊಮ್ಮೆ ಟ್ರೆಕಿಂಗ್ ಗೆ ಹೋದಾಗ ಊಟ ಸಿಗದೇ ಪರದಾಡಿದ ರಾಘವೇಂದ್ರ ಹುಳು ತಿನ್ನಲು ಶುರುವಿಟ್ಟುಕೊಂಡರಂತೆ. ಅಂದಿನಿಂದ ಇವರ ಕಾಯಕ ಮುಂದುವರಿದುಕೊಂಡು ಬಂದಿದೆ.
ಜಿರಳೆ, ಎರೆಹುಳ ಸೇರಿದಂತೆ 8ಕ್ಕೂ ಹೆಚ್ಚು ಹುಳುಗಳನ್ನು ಧಾರಾಳವಾಗಿ ಹೊಟ್ಟೆಗೆ ಇಳಿಸುತ್ತಾರೆ. ಪೂರಿ, ಚಪಾತಿ, ಇಡ್ಲಿ ಜೊತೆ ಇವುಗಳನ್ನು ಸೈಡ್ ಡಿಶಸ್ ಥರ ಇಟ್ಟುಕೊಂಡು ತಿನ್ನುತ್ತಾರೆ. ರಾಘವೇಂದ್ರದ ಹುಚ್ಚಾಟ ನೋಡಿದ ಸ್ನೇಹಿತರು ಮೊದಲು ಗಾಬರಿಗೊಂಡು ತಿನ್ನಬೇಡ ಎಂದು ಸಲಹೆ ನೀಡಿದ್ದರು. ಆದರೆ ಹುಳುಗಳ ರುಚಿಗೆ ಮನಸೋತ ರಾಘವೇಂದ್ರರ ನಾಲಿಗೆ ಚಪ್ಪರಿಸುವುದನ್ನು ಬಿಟ್ಟು ಹಿಂದೆ ಸರಿದಿಲ್ಲ!











Click it and Unblock the Notifications