ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
ಚಾಮರಾಜನಗರ, ಮಾರ್ಚ್, 29: ಲೋಕಸಭಾ ಚುನಾವಣೆಗೆ ಈಗಾಗಲೇ ಟಿಕೆಟ್ ಘೋಷಣೆ ಆಗಿದ್ದು, ಎಲ್ಲಾ ಪಕ್ಷಗಳ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಹಾಗೆಯೇ ಆರೋಪ, ಪ್ರತ್ಯಾರೋಪಗಳು ಕೂಡ ಜೋರಾಗಿ ಕೇಳಿಬರುತ್ತಿವೆ. ನಿನ್ನೆಯಷ್ಟೇ ಚಾಮರಾಜನಗರದಲ್ಲಿ ಅಮಿತ್ ಶಾ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದ ಯತೀಂದ್ರ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 29) ಬಿಜೆಪಿಯ ವಿರುದ್ಧ ಮತ್ತೆ ಕೆಂಡಕಾರಿದ್ದಾರೆ.
ಈಗಾಗಲೇ ಎಲ್ಲಾ ಸರ್ವೆಗಳಲ್ಲಿ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿರುವುದು ಸಾಭೀತಾಗಿದೆ. ಸಮಾನತೆ ಆರ್‌ಎಸ್‌ಎಸ್‌ಗೆ ಇಷ್ಟ ಇಲ್ಲ. ಹೀಗಾಗಿ ಈ ಬಾರಿ ಬಿಜೆಪಿಯವರು 400 ಸ್ಥಾನ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆದಸಿದರು.

ಚಾಮರಾಜನಗರದಲ್ಲಿ ನಡೆದ ಬ್ಲಾಕ್ ಹಾಗೂ ಗ್ರಾಮಾಂತರ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಸಂವಿಧಾನ ಹಾಗೂ ದಲಿತ ವಿರೋಧಿ ಬಿಜೆಪಿ ಪಕ್ಷವನ್ನು ಜನರು ತಿರಸ್ಕರಿಸಬೇಕು. ಬಿಜೆಪಿಯವರಂತೆ ಕಾಂಗ್ರೆಸ್ ಸುಳ್ಳು ಭರವಸೆ ನೀಡಿಲ್ಲ. ಯುಪಿಎ ಕಾಲದಲ್ಲಿ 24 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತರಲಾಯಿತು. ರಾಜ್ಯದಲ್ಲಿ ಗ್ಯಾರಂಟಿಗಳ ಭರವಸೆ ಈಡೇರಿಸಿದ ಸರ್ಕಾರ ಇದ್ರೆ ಅದು ಕಾಂಗ್ರೆಸ್ ಪಕ್ಷ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆಯೇ ಐದು ಗ್ಯಾರಂಟಿಗಳ ಭರವಸೆ ನೀಡಿದ್ದು, ಕೊನೆಗೂ ಈ ಭರವಸೆಗಳನ್ನು ಈಡೇರಿಸಿದೆ. ದೇಶದ ಇತಿಹಾಸದಲ್ಲಿ ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ಭರವಸೆ ಈಡೇರಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಆದರೆ ಬಿಜೆಪಿ ಮಾತ್ರ ಕೊಟ್ಟ ಭರವಸೆಯನ್ನು 10 ವರ್ಷ ಆದ್ರೂ ಈಡೇರಿಸಿಲ್ಲ. ಕಪ್ಪು ಹಣ ವಾಪಸ್ಸು ತರೋದಿರಲಿ, ಕಪ್ಪು ಕುಳಗಳ ಪಟ್ಟಿ ಕೊಡಲಿಲ್ಲ. ಮತ್ತೊಂದೆಡೆ ಈಗಾಗಲೇ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ರೈತರು ಗೊಬ್ಬರ ಹಾಗೂ ಕೀಟ ನಾಶಕಗಳ ಬೆಲೆ ಹೆಚ್ಚಳಗಾಗಿ ಅಕ್ಷರಶಃ ತತ್ತರಿಸಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ್ದು ಗ್ಯಾರಂಟಿ ಭರವಸೆ, ಬಿಜೆಪಿಯವರದ್ದು ಬರೀ ಸುಳ್ಳು ಭರವಸೆ. ಮೋದಿಯವರದ್ದು ಬೋಗಸ್ ಗ್ಯಾರಂಟಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ. ಮೋದಿ ಸರ್ಕಾರ ಬರೀ ಶ್ರೀಮಂತರಿಗೆ ಮಾತ್ರ ಇರುವ ಸರ್ಕಾರ. ಇದು ಬಡವರಿಂದ ಕಿತ್ತು ಶ್ರೀಮಂತರಿಗೆ ಹಣ ಕೊಡುತ್ತಿರುವ ಭ್ರಷ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡಿ, ಸಿಬಿಐ ಮಾದ್ಯಮ ಕೋರ್ಟ್‌ಗಳು ಬಿಜೆಪಿ ಕಪಿ ಮುಷ್ಟಿಯಲ್ಲಿಟ್ಟಿದೆ. ಸರ್ವೆ ಪ್ರಕಾರ ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ. ಮೋದಿ ಸರ್ಕಾರ ದೇಶಕ್ಕೆ ಅಪಾಯಕಾರಿಯಾಗಿದ್ದು, ಇದರಿಂದ ಪ್ರಜಾಪ್ರಭುತ್ವ ಹಾಳಾಗುತ್ತದೆ. ಆದ್ದರಿಂದ ಪ್ರಧಾನಿ ಮೋದಿ ಅವರ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಲು ಕಾಂಗ್ರೆಸ್ ಗೆಲ್ಲಿಸಿ ಎಂದರು.
ಸಂವಿಧಾನ ಬದಲಾವಣೆಗಾಗಿ 400ಕ್ಕೂ ಹೆಚ್ಚು ಸೀಟು ಬರಬೇಕು ಎಂಬುವುದು ಬಿಜೆಪಿ ಅಜೆಂಡಾ ಆಗಿದೆ. ಮೂರನೇ ಭಾರಿ ಬಿಜೆಪಿ ಕೇಂದ್ರದಲ್ಲಿ ತಂದರೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ.
ದೇಶ ಹಾಗೂ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಗೆಲ್ಲಿಸಿ ಎಂದು ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.












Click it and Unblock the Notifications