ಗಟ್ಟಿ ಗುಂಡಿಗೆಯ ಸಂಸದ ಪ್ರತಾಪ್ ಗೆ ಬಹುಪರಾಕ್
ಮೈಸೂರು, ಸೆ.29: ಪ್ರಖರವಾದ ಭಾಷೆ ಬಳಸಿ ತಮ್ಮ ಲೇಖನಗಳ ಮೂಲಕ ಮನೆ ಮಾತಾಗಿರುವ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಹೊಸ ವಿಕ್ರಮ ಸಾಧಿಸಿದ್ದಾರೆ. ಪ್ರವಾಸೋದ್ಯಮ ಬೆಳವಣಿಗೆ, ಪ್ರಚಾರಕ್ಕಾಗಿ ಪ್ರತಾಪ್ ಅವರು ಭೂಮಿಯಿಂದ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಮಾಡಿದ್ದಾರೆ.
ಪ್ರತಾಪ್ ಸಿಂಹ ಅವರ ಗಟ್ಟಿ ಗುಂಡಿಗೆಯ ಸಾಹಸಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದೆ. ಸೋಮವಾರ ಬೆಳಗ್ಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂಥದ್ದೊಂದು ಸಾಹಸಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಸಂಸದರಾಗಿ ಪ್ರತಾಪ್ ಅವರು ಈ ರೀತಿ ಸಾಹಸ ಮಾಡಿದ್ದನ್ನು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ.
ಭಾರತದ ಸ್ಕೈ ಡೈವರ್ ಗಳ ಕ್ಲಬ್ಬಿಗೆ ಸೇರಿದ ಸಾಹಸಿ ಸಂಸದ ಎಂದು ಪತ್ರಿಕೆಗಳು ಹೊಗಳಿವೆ. ಏಪ್ರಿಲ್ 2015ರಲ್ಲಿ ಆರಂಭವಾದ ಸ್ಕೈ ಡೈವಿಂಗ್ ದುಬಾರಿ ಸಾಹಸ ಕ್ರೀಡೆಯಾಗಿದ್ದು, ಅಗತ್ಯ ಪ್ರಚಾರದ ಕೊರತೆ ಎದುರಿಸುತ್ತಿತ್ತು. ಇದನ್ನು ಮನಗಂಡ ಪ್ರತಾಪ್ ಅವರು ತಾವೇ ಖುದ್ದು ಸ್ಕೈ ಡೈವಿಂಗ್ ಸಾಹಸ ಪ್ರದರ್ಶನಕ್ಕೆ ಮುಂದಾದರು.
ಕರ್ನಾಟಕದಲ್ಲಿ ಈ ಹಿಂದೆ ಬೆಂಗಳೂರಿನ ಈಜುಕೊಳವೊಂದನ್ನು ಉದ್ಘಾಟಿಸಲು ಬಂದಿದ್ದ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರು ತಾವೇ ಈಜುಕೊಳಕ್ಕೆ ಡೈವ್ ಹೊಡೆದು ಅಚ್ಚರಿ ಮೂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಚಿತ್ರ ಕೃಪೆ: ಪ್ರತಾಪ್ ಸಿಂಹ ಅವರ ಫೇಸ್ ಬುಕ್ ಪುಟ]

ಸ್ಕೈ ಡೈವಿಂಗ್ ಮಾಡಿದ ಕರ್ನಾಟಕದ ಸಂಸದ
13 ಸಾವಿರ ಅಡಿ ಎತ್ತರಕ್ಕೆ ಹೋಗಿ ಆಗಸದಿಂದ ಜಿಗಿದು ಸ್ಕೈ ಡೈವಿಂಗ್ ಮಾಡಿದ ಕರ್ನಾಟಕ ಹಾಗೂ ಭಾರತದ ಏಕೈಕ ಸಾಹಸಿ ಸಂಸದ ಎನಿಸಿಕೊಂಡ ಪ್ರತಾಪ್ ಸಿಂಹ

ಜಿಗಿಯುವ ಮುನ್ನ ಅಳುಕಿತ್ತು
ಮೇಲಿಂದ ಜಿಗಿಯುವ ಮುನ್ನ ಅಳುಕಿತ್ತು. ಜಿಗಿದ ಮೇಲೆ ಸುಮಾರು 10-15ಸೆಕೆಂಡುಗಳ ಕಾಲ ಪ್ಯಾರಾಚೂಟ್ ಓಪನ್ ಆಗುವುದಿಲ್ಲ. 200-220 ಕಿ.ಮೀ ವೇಗದಲ್ಲಿ ಅಧೋಮುಖವಾಗಿ ಚಲಿಸಬೇಕು. ನಂತರ ವೇಗ ತಗ್ಗಿಸಿಕೊಂಡು ಭೂಮಿಗಿಳಿಯಬೇಕಾಗಿತ್ತು. ಅದರೆ, ನನಗೆ ತರಬೇತು ನೀಡಿದವರ ಉತ್ತಮ ಸಹಕಾರದಿಂದ ಈ ಸಾಹಸ ಸಾಧ್ಯವಾಯಿತು ಎಂದಿದ್ದಾರೆ.

ನವದೆಹಲಿಯಲ್ಲಿ ಸ್ಕೈ ರೈಡರ್ ಕ್ಲಬ್ ಇದೆ
ನವದೆಹಲಿಯಲ್ಲಿ ಸ್ಕೈ ರೈಡರ್ ಕ್ಲಬ್ ಇದೆ. ಮಿಕ್ಕಂತೆ ಪುದುಚೇರಿ, ಗುಜರಾತ್, ಬೆಂಗಳೂರಲ್ಲಿ ಆಗಾಗ ಸ್ಕೈ ಡೈವಿಂಗ್ ಸಾಹಸ ನಡೆಸಲಾಗುತ್ತದೆ. ಮೈಸೂರಿನಲ್ಲಿ ಸ್ಕೈ ಡೈವಿಂಗ್ ಕೇಂದ್ರ ಅರಂಭಗೊಂಡರೂ ಸರಿಯಾದ ಮಾಹಿತಿ ಜನರಿಗೆ ತಲುಪಿರಲಿಲ್ಲ. ಈಗ ಲೋಕಕ್ಕೆ ತಿಳಿಯುವಂಥ ಕಾರ್ಯವನ್ನು ಪ್ರತಾಪ್ ಮಾಡಿದ್ದಾರೆ.

ಸಮರ್ಥವಾದ ತರಬೇತುದಾರರಿದ್ದಾರೆ
ಸು ಕಕಿನಿ ಎಂಟರ್ ಪ್ರೈಸಸ್ ಪ್ರೈ ಲಿ, ಸದ್ಯಕ್ಕೆ ಭಾರತದಲ್ಲಿ ಪ್ರಮಾಣೀಕೃತ ಸ್ಕೈ ಡೈವಿಂಗ್ ಆಯೋಜನೆ ಲೈಸನ್ಸ್ ಪಡೆದ ಏಕೈಕ ಸಂಸ್ಥೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಿಂದ ಬಂದಿರುವ ಮಾರ್ಗದರ್ಶಕರು ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಸ್ನಾ ಏರ್ ಕ್ರಾಫ್ಟ್ ಮೂಲಕ ಆಗಸಕ್ಕೇರಿ ನೆಲಕ್ಕೆ ಹಾರುವ ಅದ್ಭುತ ಸಾಹಸ ಕ್ರೀಡೆ ಇದಾಗಿದೆ.

ಹೀಗೊಂದು ಸಾಹಸ ಪ್ರದರ್ಶನ ಅಗತ್ಯವಿತ್ತು
ಹೀಗೊಂದು ಸಾಹಸ ಪ್ರದರ್ಶನ ಅಗತ್ಯವಿತ್ತು. ನನ್ನ ಕ್ಷೇತ್ರದಲ್ಲಿ ಸ್ಕೈ ಡೈವಿಂಗ್ ಬಗ್ಗೆ ಜಾಗೃತಿ, ಪ್ರಚಾರದ ಜೊತೆಗೆ ಜನರಲ್ಲಿ ಸಾಹಸ ಪ್ರವೃತ್ತಿ ಬೆಳೆಸುವ ನಿಟ್ಟಿನಲ್ಲಿ ಧೈರ್ಯ ಮಾಡಿ ಈ ಸಾಹಸಕ್ಕೆ ಮುಂದಾದೆ ಎಂದು ಪ್ರತಾಪ್ ಸಿಂಹ ಅವರು ಪ್ರತಿಕ್ರಿಯಿಸಿದ್ದಾರೆ.
ಆಗಸದಿಂದ ಭೂಮಿಗೆ ಜಿಗಿದ ವಿಡಿಯೋ
ಸಂಸದ ಪ್ರತಾಪ್ ಸಿಂಹ ಅವರು ಸ್ಕೈ ಡೈವಿಂಗ್ ವಿಡಿಯೋ ಹಾಗೂ ನಂತರ ಪ್ರತಿಕ್ರಿಯೆ ಇಲ್ಲಿದೆ. ಕೃಪೆ: ಟಿವಿ 9 ಕನ್ನಡ












Click it and Unblock the Notifications