ಹೈಟೆಕ್ ವೇಶ್ಯಾವಾಟಿಕೆ ಜಾಲ; ಟಿಕ್‌ಟಾಕ್ ಸ್ಟಾರ್ ಬಂಧನ
ಮೈಸೂರು, ಮಾರ್ಚ್ 13: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಮೇಟಗಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಗೆ ದೊರೆತ ಖಚಿತ ಸುಳಿವಿನ ಮೇರೆಗೆ ಪೊಲೀಸರು ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಮಾಲೀಕಳಾದ ಮಹಿಳೆ ಸುಮಾ ಹಾಗೂ ಪಿಂಪ್ ಸಿದ್ಧರಾಜು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಆದರೆ, ಈ ವೇಳೆ ವಶಕ್ಕೆ ಪಡೆಯಲಾದ ಸುಮಾ ಎಂಬಾಕೆ ೬ ತಿಂಗಳ ಹಿಂದೆಯೂ ಸಹ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ ಸಿಕ್ಕಿ ಬಿದ್ದಿದ್ದಳು. ಆಗ ತನ್ನನ್ನು ಬಲವಂತವಾಗಿ ಇಲ್ಲಿಗೆ ಕರೆದು ತಂದು ದಂಧೆಯಲ್ಲಿ ತೊಡಗಿಸಿದ್ದಾರೆ ಎಂದು ಅಮಾಯಕತೆಯನ್ನು ಪ್ರದರ್ಶಿಸಿದ್ದಳು ಎಂದು ತಿಳಿದುಬಂದಿದೆ.

ಆಗ ಕಾನೂನಿನ ಕುಣಿಕೆಯಿಂದ ಪಾರಾಗಿದ್ದಳು. ಆಕೆಯನ್ನು ರಕ್ಷಿತ ಮಹಿಳೆ ಎಂದು ತೀರ್ಮಾನಿಸಿ ಪೊಲೀಸರೇ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಿಕೊಟ್ಟಿದ್ದರು.
ಆದರೆ, ಈಗ ವೇಶ್ಯಾವಾಟಿಕೆಯ ಜಾಲಕ್ಕೆ ಆಕೆಯೇ ಕಿಂಗ್‌ಪಿನ್ ಎಂಬುದು ಆಕೆಯ ಮೊಬೈಲ್ ವಶ ಪಡಿಸಿಕೊಂಡ ನಂತರ ಟಿಕ್‌ಟಾಕ್ ವಿಡಿಯೋಗಳಿಂದ ಬೆಳಕಿಗೆ ಬಂದಿದೆ.
ಈ ಮಹಿಳೆಯು ಟಿಕ್‌ಟಾಕ್ ಮೂಲಕ ಮೈಸೂರು ಭಾಗದ ಯುವಕರನ್ನು ತನ್ನತ್ತ ಸೆಳೆದು, ಬಳಿಕ ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದಳು ಎಂದು ತಿಳಿದು ಬಂದಿದೆ. ಆಕೆ ಸಾಮಾಜಿಕ ಜಾಲತಾಣಗಳಾದ ಟಿಕ್‌ಟಾಕ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಮೂಲಕವೇ ತನ್ನ ಬಳಿಗೆ ಯುವಕರನ್ನು ಸೆಳೆಯುತ್ತಿದ್ದಳು. ಈರ್ವರನ್ನೂ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications