ನಮ್ಮೊಡನಿದ್ದರೂ ನಮ್ಮಂತೆ ಬದುಕದ ಡುಂಗ್ರಿ ಗರಾಸಿ ಜನಾಂಗ: ಇವರದು ಸಂಕಷ್ಟದ ಬದುಕು!
ಮೈಸೂರು, ಆಗಸ್ಟ್ 10: ಕೋಟ್ಯಂತರ ರೂ ಮೌಲ್ಯದ ಆಸ್ತಿ ಹೊಂದಿದ್ದರೂ ನಮ್ಮ ರಾಜಕಾರಣಿಗಳು ಭ್ರಷ್ಟಾಚಾರದ ಮೂಲಕ ಅದನ್ನು ದುಪ್ಪಟ್ಟುಗೊಳಿಸುವ ಕಾಯಕದಲ್ಲಿ ನಿರತರಾಗಿದ್ದರೆ, ಶ್ರೀಮಂತ ವರ್ಗ ವರ್ಷದಿಂದ ವರ್ಷಕ್ಕೆ ಶ್ರೀಮಂತರಾಗುತ್ತಲೇ ಸಾಗುತ್ತಾರೆ. ಇನ್ನು ಅಧಿಕಾರಿ ವರ್ಗಗಳು ಲಂಚ, ಭ್ರಷ್ಟಾಚಾರದ ಮೂಲಕ ಆಸ್ತಿ ಮಾಡುತ್ತಲೇ ಹೋಗುತ್ತಾರೆ.
ಇನ್ನು ಮಧ್ಯಮ ವರ್ಗದವರು ಹಗಲು ರಾತ್ರಿ ಎನ್ನದೆ ದುಡಿದರೂ ಆರಕ್ಕೇರದೆ ಮೂರಕ್ಕಿಳಿಯದೆ ತ್ರಿಶಂಕು ಸ್ಥಿತಿಯಲ್ಲಿ ಜೀವನ ಸಾಗಿಸುತ್ತಾ ಹೋಗುತ್ತಾರೆ. ಇಲ್ಲಿ ಒಬ್ಬೊಬ್ಬರ ಬದುಕು ಒಂದೊಂದು ರೀತಿಯಲ್ಲಿ ಸಾಗುತ್ತಿರುವಾಗಲೇ ಅತಿ ಸಣ್ಣ ಜನಾಂಗವಾಗಿರುವ ಡುಂಗ್ರಿ ಗರಾಸಿ ಸಮುದಾಯ ಇವತ್ತಿಗೂ ಚಿಂದಿ ಆಯುತ್ತಾ.. ಬಕೆಟ್ ರಿಪೇರಿ, ಆಟಿಕೆ ಮಾರಾಟ, ಜತೆಗೆ ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿರುವುದು ವಿಷಾದದ ಸಂಗತಿಯಾಗಿದೆ.

ಇವತ್ತಿಗೂ ಈ ಜನಾಂಗ ಭಿಕ್ಷಾಟನೆಯ ವೃತ್ತಿಗೆ ಆದ್ಯತೆ ನೀಡಿ ಅವರಿವರ ಮುಂದೆ ಕೈಚಾಚಿಕೊಂಡು ಬದುಕುತ್ತಿರುವ. ಡುಂಗ್ರಿ ಗರಾಸಿ ಸಮುದಾಯದ ಅಭಿವೃದ್ಧಿಗೆ ಆಡಳಿತರೂಢರು ಮುಂದಾಗದ ಕಾರಣ ಇವರು ಹೊಟ್ಟೆಪಾಡಿಗಾಗಿ ಚಿಂದಿ ಆಯುವ, ಬಕೆಟ್ ರಿಪೇರಿ ಮಾಡುವುದು, ಆಟಿಕೆ ಮಾರುವ ವೃತ್ತಿಯನ್ನು ಮಾಡುವುದು ಅನಿವಾರ್ಯವಾಗಿದೆ. ಆದರ ಜತೆಗೆ ಕೆಲವರು ಭಿಕ್ಷಾಟನೆ ಮಾಡಿಯೂ ಜೀವನ ನಿರ್ವಹಣೆ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಹೀಗೆ ಜೀವನ ಸಾಗಿಸುವುದು ಸಾಧ್ಯನಾ?
ಇವರನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸಿ ಬದುಕಿಗೆ ಬೇರೆ ದಾರಿ ಮಾಡಿಕೊಡಲು ಸಾಧ್ಯವಿಲ್ವಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತವೆ. ಆದರೆ ಅವರು ಮುಖ್ಯವಾಹಿನಿಗೆ ಬರಲು ಹಿಂದೇಟು ಹಾಕುತ್ತಿರುವುದು, ಶಿಕ್ಷಣಕ್ಕೆ ಆದ್ಯತೆ ನೀಡದಿರುವುದು ಕಾರಣ ಎಂದರೆ ತಪ್ಪಾಗಲಾರದು. ಡುಂಗ್ರಿ ಗರಾಸಿ ಜನಾಂಗದವರು ಅಲ್ಲಲ್ಲಿ ಕಂಡು ಬರುತ್ತಾರೆ. ಚಿಂದಿ ಆಯುತ್ತಾ, ಮನೆಮನೆಗೆ ತೆರಳಿ ಹಳೆ ಬಕೆಟ್ ರಿಪೇರಿ ಮಾಡಿಕೊಡುವುದಾಗಿ ಹೇಳುತ್ತಾ ಭಿಕ್ಷೆ ಕೇಳುತ್ತಾರೆ. ಇವರಿಗೆ ನಾಳಿನ ಚಿಂತೆಯಿಲ್ಲ. ಇವತ್ತಿನ ಹೊಟ್ಟೆ ಪಾಡು ಕಳೆದರೆ ಸಾಕು.
ಹರಕು ಮುರುಕು ಗುಡಿಸಲೇ ಇವರಿಗೆ ಅರಮನೆ
ಇನ್ನು ಇವರು ವಾಸಿಸುವ ಮನೆಗಳು ಹೇಗಿವೆ ಎಂದರೆ ಅದು ಹರಕು ಮುರುಕು ಗುಡಿಸಲು... ಅದರಲ್ಲಿ ಹತ್ತಾರು ಮಂದಿ ಜೀವನ ಸಾಗಿಸುತ್ತಾರೆ. ಕೆಲವರಂತು ಅಲೆಮಾರಿಗಳಾಗಿದ್ದಾರೆ. ಊರೂರು ಸುತ್ತುತ್ತಾ ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಕೆಲವರು ಖಾಲಿ ಇರುವ ಶೆಡ್, ರಸ್ತೆ ಬದಿಯ ಬಸ್ ತಂಗುದಾಣ ಹೀಗೆ ಎಲ್ಲೆಂದರಲ್ಲಿ ಜೀವನ ಮಾಡುತ್ತಾರೆ. ಬುಡಕಟ್ಟು ಜನಾಂಗವಾಗಿರುವ ಇವರ ಬದುಕು ಇವತ್ತಿಗೂ ಹಸನಾಗಿಲ್ಲ. ಕಡುಬಡತನದಲ್ಲಿಯೇ ಜೀವನ ಇವರಿಗೆ ಶಾಪವಾಗಿದೆ.

ಒಂದೇ ಮನೆಯಲ್ಲಿ ಮೂರರಿಂದ ನಾಲ್ಕು ಕುಟುಂಬಗಳು ಮತ್ತು ಹದಿನೈದರಿಂದ ಇಪ್ಪತ್ತು ಜನ ವಾಸಿಸುತ್ತಿದ್ದು, ಹೆಚ್ಚಿನವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರು ಪಂಚರಂಗಿ ಭಾಷೆಯನ್ನು ಮಾತನಾಡುತ್ತಿದ್ದು, ಸಮುದಾಯ ಅವಸಾನದಂಚಿಗೆ ತಲುಪುತ್ತಿದೆ ಎಂದರೂ ತಪ್ಪಾಗಲಾರದು. ಉತ್ತರ ಭಾರತದ ಗುಜರಾತ್, ರಾಜಸ್ತಾನದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಇವರು ಕರ್ನಾಟಕದಲ್ಲಿ ಅಲ್ಪಪ್ರಮಾಣದಲ್ಲಿ ಅದರಲ್ಲೂ ಮಂಡ್ಯದ ಕೆ.ಆರ್.ಪೇಟೆ ಅನುವಿನಕಟ್ಟೆ ಗ್ರಾಮ ಮೈಸೂರಿನ ಹುಣಸೂರು, ಪಿರಿಯಾಪಟ್ಟಣ, ಕೊಡಗಿನ ಕುಶಾಲನಗರ ಹೀಗೆ ಹಲವು ಕಡೆಗಳಲ್ಲಿ ವಾಸವಿದ್ದಾರೆ.
ಸಾಮಾಜಿಕ ನ್ಯಾಯ ಕಲ್ಪಿಸುತ್ತಾರಾ ಜನನಾಯಕರು?
ರಾಜ್ಯದಲ್ಲಿ ಡುಂಗ್ರಿ ಸಮುದಾಯ ಕೇವಲ ಆರು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಪರಿಶಿಷ್ಟ ಜಾತಿಗೆ ಸೇರುವ ಇವರಲ್ಲಿ ಹೆಚ್ಚಿನವರು ಜಾತಿ ಪ್ರಮಾಣಪತ್ರಗಳನ್ನೇ ಹೊಂದಿಲ್ಲ. ಬಹಳಷ್ಟು ಜನಕ್ಕೆ ಸರ್ಕಾರದಿಂದ ಸೌಲಭ್ಯ ಪಡೆಯಲು ಬೇಕಾದ ದಾಖಲೆಗಳೇ ಇಲ್ಲವಾಗಿವೆ. ಹೀಗಾಗಿ ಸರ್ಕಾರದ ಸೌಲಭ್ಯಗಳು ಇವರಿಗೆ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಇವರ ಸಮುದಾಯದಲ್ಲಿ ಯಾ ವಿದ್ಯಾಭ್ಯಾಸ ಮಾಡಿದವರು ಕಡಿಮೆಯೇ ಶಿಕ್ಷಣದಿಂದ ವಂಚಿತರಾಗಿರುವ ಇವರು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ.

ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗೂ ಇವರು ಜೋತು ಬಿದ್ದಿದ್ದು ಬದುಕು ಸಂಕಷ್ಟದಲ್ಲಿ ಸಾಗುತ್ತಿದೆ. ನಮ್ಮೊಡನೆ ಇದ್ದರೂ ನಮ್ಮಂತೆ ಇರದೆ ಅತ್ಯಂತ ನಿಕೃಷ್ಟವಾಗಿ ಬದುಕುತ್ತಿರುವ ಈ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುವುದು ಅಗತ್ಯವಾಗಿದೆ. ಸ್ವಾತಂತ್ರ್ಯ ಪಡೆದು ಎಂಟು ದಶಕಗಳಾದರೂ ಇನ್ನೂ ಕೂಡ ಚಿಂದಿ ಆಯುತ್ತಾ, ಭಿಕ್ಷಾಟನೆ ನಡೆಸುತ್ತಿರುವ ಡುಂಗ್ರಿ ಗರಾಸಿ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವುದು ಜನನಾಯಕರ ಕರ್ತವ್ಯವಾಗಿದೆ. ಅದು ಮಾಡುತ್ತಾರಾ? ಕಾದುನೋಡೋಣ












Click it and Unblock the Notifications