ಕಲಬುರಗಿ, ಬೀದರ್-ಬೆಂಗಳೂರು ವಿಮಾನ ಸೇವೆ ಪುನರಾರಂಭ: ಶಿವಮೊಗ್ಗಕ್ಕೆ ಯಾವಾಗ?
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಕಲಬುರಗಿ, ಬೀದರ್ ಹಾಗೂ ರಾಜಧಾನಿ ಬೆಂಗಳೂರು ನಡುವಿನ ವಿಮಾನ ಸಂಚಾರ ಅಧಿಕೃತವಾಗಿ ಮತ್ತೆ ಆರಂಭವಾಗಿದ್ದು, ಈ ಭಾಗದ ಉದ್ಯಮಿಗಳು ಹಾಗೂ ಸಾರ್ವಜನಿಕರಲ್ಲಿ ಭಾರಿ ಸಂತಸ ಮೂಡಿಸಿದೆ. ಆದರೆ ಇದೇ ವೇಳೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ವಿಮಾನ ನಿಲ್ದಾಣದ ಕಥೆ ಏನಾಯ್ತು? ಎಂಬ ಪ್ರಶ್ನೆ ಕೂಡ ಈಗ ಜೋರಾಗಿ ಕೇಳಿಬರುತ್ತಿದೆ.
ಕಲಬುರಗಿ, ಬೀದರ್ ಮತ್ತು ಬೆಂಗಳೂರು ನಡುವಿನ ವಿಮಾನ ಪ್ರಯಾಣ ಸೇವೆಗಳು ಅಧಿಕೃತವಾಗಿ ಪುನರಾರಂಭಗೊಂಡಿವೆ. ಕೈಗಾರಿಕೋದ್ಯಮಿಗಳು ಮತ್ತು ಸಾರ್ವಜನಿಕರ ನಿರಂತರ ಒತ್ತಾಯದ ಮೇರೆಗೆ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಶಾಸಕ ಡಾ.ಅಜಯ್ ಸಿಂಗ್ ತಿಳಿಸಿದ್ದಾರೆ. ಈ ಹಿಂದೆ 2022ರ ನವೆಂಬರ್‌ನಲ್ಲಿಯೇ ಈ ಸೇವೆ ಆರಂಭವಾಗಿದ್ದರೂ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮಧ್ಯದಲ್ಲೇ ಸ್ಥಗಿತಗೊಂಡಿತ್ತು. ಇದೀಗ ರಾಜ್ಯದ ಪ್ರಮುಖ ಸಚಿವರುಗಳಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ರಹೀಮ್ ಖಾನ್ ಮತ್ತು ಡಾ. ಶರಣಪ್ರಕಾಶ್ ಪಾಟೀಲ್ ಅವರ ವಿಶೇಷ ಕಾಳಜಿಯಿಂದಾಗಿ 'ಸ್ಟಾರ್ ಏರ್' ಸಂಸ್ಥೆಯ ಸಹಯೋಗದೊಂದಿಗೆ ಈ ವಿಮಾನ ಸೇವೆಗೆ ಮರುಜೀವ ಬಂದಿದೆ.

ಕೋಟಿ ಕೋಟಿ ಹಣ ಹರಿಸಿದ ಮಂಡಳಿ ಮತ್ತು ಸರ್ಕಾರ
ಖಾಸಗಿ ವಿಮಾನ ಯಾನ ಸಂಸ್ಥೆಗಳು ಪ್ರತಿದಿನ ಕಾರ್ಯಾಚರಣೆ ನಡೆಸಲು ವಾರ್ಷಿಕವಾಗಿ ಅಂದಾಜು 14.22 ಕೋಟಿ ರೂಪಾಯಿ ಆರ್ಥಿಕ ಬೆಂಬಲದ ಅಗತ್ಯವಿತ್ತು. ಈ ಸವಾಲನ್ನು ಮೆಟ್ಟಿ ನಿಲ್ಲಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಸಿಂಹಪಾಲು, ಅಂದರೆ ಶೇಕಡಾ 80 ರಷ್ಟು (11.38 ಕೋಟಿ ರೂ.) ಅನುದಾನವನ್ನು ಭರಿಸಲು ಒಪ್ಪಿಕೊಂಡಿದೆ. ಇನ್ನುಳಿದ ಶೇಕಡಾ 20ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಪ್ರೊಫೆಸರ್ ಗೋವಿಂದರಾವ್ ಕಮಿಟಿ ಶಿಫಾರಸ್ಸಿನಂತೆ ಈ ಭಾಗದ ತಲಾದಾಯ ಹೆಚ್ಚಿಸಲು ಹಾಗೂ ಆರ್ಥಿಕ ಪ್ರಗತಿಗಾಗಿ 'PPDAW' (Plan Policy Data Analysis Wing) ಆರಂಭಿಸಲಾಗಿದ್ದು, ಈ ವಿಮಾನ ಸೇವೆ ಐಟಿ ಹಬ್ ಬೆಂಗಳೂರಿಗೆ ಕಲ್ಯಾಣ ಕರ್ನಾಟಕವನ್ನು ನೇರವಾಗಿ ಕನೆಕ್ಟ್ ಮಾಡುವುದರಿಂದ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಭಾರಿ ಲಾಭವಾಗಲಿದೆ.
ಕಲಬುರಗಿ, ಬೀದರ್ ಮತ್ತು ರಾಜ್ಯ ರಾಜಧಾನಿ ಬೆಂಗಳೂರು ನಡುವಿನ ವಿಮಾನ ಪ್ರಯಾಣ ಸೇವೆಗಳು ಅಧಿಕೃತವಾಗಿ ಪುನರಾರಂಭವಾಗಿದೆ.
— Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) June 10, 2026
ಕೈಗಾರಿಕೋದ್ಯಮಿಗಳು ಮತ್ತು ಸಾರ್ವಜನಿಕರ ನಿರಂತರ ಬೇಡಿಕೆಯ ಮೇರೆಗೆ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ 2022 ರ ನವೆಂಬರ್ನಲ್ಲಿ ಈ ಸೇವೆ ಪ್ರಾರಂಭವಾಗಿದ್ದರೂ, ಕೆಲವು ತಾಂತ್ರಿಕ ಕಾರಣಗಳಿಂದಾಗಿ… pic.twitter.com/bIIMkQ86bf
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾವಾಗ ಬರಲಿದೆ ಕಳೆ?
ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳು ಸರ್ಕಾರದ ಆರ್ಥಿಕ ಬೆಂಬಲದೊಂದಿಗೆ ಗಿಜಿಗುಟ್ಟಲು ಆರಂಭಿಸುತ್ತಿದ್ದಂತೆ, ಇತ್ತ ಮಲೆನಾಡಿನ ಭಾಗದ ಜನರಿಂದ "ನಮ್ಮ ಶಿವಮೊಗ್ಗಕ್ಕೆ ಈ ರೀತಿಯ ಸೌಲಭ್ಯ ಯಾವಾಗ ಸಿಗುತ್ತದೆ?" ಎಂಬ ಚರ್ಚೆ ಮುಂಚೂಣಿಗೆ ಬಂದಿದೆ. ಅದ್ದೂರಿಯಾಗಿ ಉದ್ಘಾಟನೆಗೊಂಡ ಶಿವಮೊಗ್ಗದ ವಿಮಾನ ನಿಲ್ದಾಣದಲ್ಲೂ ಆರಂಭದಲ್ಲಿ ಬೆಂಗಳೂರು, ಗೋವಾ, ಹೈದರಾಬಾದ್ ಮುಂತಾದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಸಮರ್ಪಕ ಪ್ರಯಾಣಿಕರ ಸಂಖ್ಯೆಯ ಕೊರತೆ, ವಿಮಾನಯಾನ ಸಂಸ್ಥೆಗಳ ತಾಂತ್ರಿಕ ಗೊಂದಲ ಹಾಗೂ ಸರ್ಕಾರದ ಕಡೆಯಿಂದ ಸಿಗಬೇಕಾದ ಆರ್ಥಿಕ ಸಬ್ಸಿಡಿಯ ಕೊರತೆಯಿಂದಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸದ್ಯ ವಿಮಾನಗಳ ಹಾರಾಟ ತೀವ್ರವಾಗಿ ಕ್ಷೀಣಿಸಿದೆ.

ಕಲಬುರಗಿ ಮಾದರಿಯಲ್ಲೇ ಶಿವಮೊಗ್ಗ ಹಾಗೂ ಮಲೆನಾಡು ಭಾಗದ ಕೈಗಾರಿಕೆ, ಐಟಿ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ಬೆಂಗಳೂರು-ಶಿವಮೊಗ್ಗ ನಡುವೆ ನಿರಂತರ ವಿಮಾನ ಸೇವೆ ಅತ್ಯಗತ್ಯವಾಗಿದೆ. ಕಲ್ಯಾಣ ಕರ್ನಾಟಕ ಮಂಡಳಿಯಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳು ಮತ್ತು ಸಚಿವರುಗಳು ಕೂಡ ಜಂಟಿಯಾಗಿ ತೀರ್ಮಾನ ಕೈಗೊಂಡು, ವಿಮಾನಯಾನ ಸಂಸ್ಥೆಗಳಿಗೆ ಅಗತ್ಯ ಆರ್ಥಿಕ ನೆರವು ನೀಡಿ ಶಿವಮೊಗ್ಗ ಏರ್‌ಪೋರ್ಟ್‌ಗೂ ಶೀಘ್ರದಲ್ಲೇ ಮರುಜೀವ ನೀಡಬೇಕಿದೆ ಎಂದು ಮಲೆನಾಡಿಗರ ಒತ್ತಾಯಿಸುತ್ತಿದ್ದಾರೆ.
ವಿಮಾನಗಳ ಹಾರಾಟ ಸ್ಥಗಿತಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಪ್ರಯಾಣಿಕರಿಗೆ ಮಹತ್ವದ ಭರವಸೆಯೊಂದನ್ನು ನೀಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ 'ಉಡಾನ್' ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆಯ ವ್ಯಾಪ್ತಿಗೆ ತರಲು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications