ಮೈಸೂರು ಅರ್ಬನ್ ಹಾತ್‌ನಲ್ಲಿ ಮೆರಗು ತಂದ ಕೈಮಗ್ಗದ ವಸ್ತುಗಳು: ವಿಶೇಷತೆ ತಿಳಿಯಿರಿ
ಮೈಸೂರು, ನವೆಂಬರ್ 13: ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ರಿಂಗ್ ರಸ್ತೆಯ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ನೇಕಾರರು, ನೇಕಾರರ ಸಹಕಾರ ಸಂಘಗಳು ಸಿದ್ಧಗೊಳಿಸುವ ಕೈಮಗ್ಗ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು ಒಂದಕ್ಕಿಂತ ಒಂದು ವಸ್ತುಗಳು, ಸೀರೆಗಳು ಗಮನಸೆಳೆಯುತ್ತಿವೆ. ಜತೆಗೆ ನೇಕಾರರ ಕೌಶಲವನ್ನು ಪ್ರಚುರಪಡಿಸುವ ಉದ್ದೇಶದಿಂದ ಈ ಮೇಳ ನಡೆಯುತ್ತಿದ್ದು, ಸಾಂಪ್ರದಾಯಿಕ ಹಾಗೂ ವೈಶಿಷ್ಟ್ಯಪೂರ್ಣ ಪರಿಕರಗಳು ಮೇಳಕ್ಕೆ ಮೆರಗು ತಂದಿವೆ.
ನವದೆಹಲಿಯ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಸಚಿವಾಲಯದ ಸಹಯೋಗದೊಂದಿಗೆ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿದೇರ್ಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ ಮತ್ತು ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನ ಆಶ್ರಯದಲ್ಲಿ ಕೈಮಗ್ಗ ಮೇಳ 2024, ನನ್ನ ಕೈಮಗ್ಗ ನನ್ನ ಹೆಮ್ಮೆ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ನಡೆಯುತ್ತಿವೆ.

ಮೇಳದಲ್ಲಿ ನಮ್ಮ ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ, ಕಲಬುರ್ಗಿ ಮತ್ತು ಇಳಕಲ್ ಕೈಮಗ್ಗ ನೇಕಾರರು ತಮ್ಮ ಉತ್ಪನ್ನಗಳೊಂದಿಗೆ ಮೇಳಕ್ಕೆ ಮೆರುಗು ನೀಡಿದ್ದಾರೆ. ಕೈಮಗ್ಗ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳನ್ನು 75 ಕ್ಕೂ ಹೆಚ್ಚು ನೇಕಾರರು, ನೇಕಾರರ ಸಹಕಾರ ಸಂಘಗಳು ಪ್ರದರ್ಶಿಸುತ್ತಿವೆ.
ಕೈಮಗ್ಗ ಮೇಳದಲ್ಲಿ ಏನೇನಿದೆ?
ವಿಶೇಷ ಕೈಮಗ್ಗ ಮೇಳದಲ್ಲಿ ಇಷ್ಟೇ ಅಲ್ಲದೆ ಜಮ್ಮು-ಕಾಶ್ಮೀರ, ದೆಹಲಿ, ರಾಜಸ್ತಾನ್, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ, ಬಿಹಾರ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಹಾಗೂ ಕರ್ನಾಟಕದ ಕೈಮಗ್ಗ ನೇಕಾರರ ಮಳಿಗೆಗಳಿದ್ದು ಎಲ್ಲವೂ ಮೇಳಕ್ಕೆ ಹೊಸತನವನ್ನು ತಂದಿರುವುದರಲ್ಲಿ ಎರಡು ಮಾತಿಲ್ಲ. ಆಂಧ್ರಪ್ರದೇಶ ಸ್ಟೇಟ್ ಹ್ಯಾಂಡ್ಲೂಮ್ ವೀವರ್ಸ್ ಕಾರ್ಪೊರೇಟಿವ್ ಸೊಸೈಟಿ ಸರಕಾರದ ಮಳಿಗೆ ಮೇಳದ ಆಕರ್ಷಣೆಯಾಗಿದೆ.
ಸಾಲೇಶ್ವರ ಕೈಮಗ್ಗ ನೇಕಾರರ ಸಹಕಾರ ಸಂಘ ಗದಗ ಇವರ ಮಳಿಗೆಯಲ್ಲಿ ರಾಜ್ಯದ ಇಳಕಲ್ ಸೀರೆಗಳು ಜನರನ್ನು ಆಕರ್ಷಿಸುತ್ತಿದೆ.ಸಾಂಪ್ರದಾಯಿಕ ಇಳಕಲ್ ಸೀರೆಗಳ ನೇಯ್ಗೆಯಂತೂ ಕಣ್ಣಿಗೆ ಹಬ್ಬವನ್ನೇ ಉಂಟುಮಾಡುತ್ತವೆ. ವೆಲ್ಲೂರು ದೇವಾಂಗ ಕೈಮಗ್ಗ ಕೋ ಆಪರೇಟಿವ್ ಸೊಸೈಟಿರವರು ತಮಿಳುನಾಡು ರಾಜ್ಯದ ಅಪ್ಪಟ ಕಾಂಚೀವರಂ ರೇಷ್ಮೆ ಸೀರೆಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದು ಜನಾಕರ್ಷಣೆಗೊಳ್ಳುತ್ತಿದೆ. ಉತ್ತರ ಪ್ರದೇಶ ವಾರಣಾಸಿ ಕೈಮಗ್ಗ ನೇಕಾರರ ಮಳಿಗೆಯಲ್ಲಿ ಪರಿಶುದ್ಧ ಬನಾರಸಿ ರೇಷ್ಮೆ ಸೀರೆಗಳು ಆಕರ್ಷಣೀಯ ಕೇಂದ್ರಬಿಂದುವಾಗಿದೆ. ಶ್ರೀ ಲಕ್ಷ್ಮೀನಾರಾಯಣರವರು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿದ್ದು ಅವರ ಮಳಿಗೆಯಲ್ಲಿ ಆಂಧ್ರಪ್ರದೇಶದ ಉಪ್ಪಾಡ ರೇಷ್ಮೆ ಸೀರೆಗಳಂತೂ ಕಣ್ಣಿಗೆ ಮುದ ನೀಡುತ್ತವೆ.
ಗುಜರಾತ್ ರಾಜ್ಯ ಕೈಮಗ್ಗ ನೇಕಾರರ ಫೆಡರೇಶನ್ ರವರ ಮಳಿಗೆಯಲ್ಲಿ ಬೆಡ್ ಶೀಟ್ ಗಳು ನೆಲ ಹೊದಿಕೆಗಳು ಹೆಚ್ಚು ಆಕರ್ಷಣೀಯವಾಗಿದೆ. ತಮಿಳುನಾಡು ರಾಜ್ಯದ ವೀವರ್ಸ್ ಕಾರ್ಪೊರೇಟಿವ್ ಸೊಸೈಟಿ ಇವರ ಮಳಿಗೆಯಲ್ಲಿ ಕಾಂಚೀವರಂ ರೇಷ್ಮೆ ಸೀರೆಗಳು ಬಹಳ ಹೆಚ್ಚಿನ ಬೇಡಿಕೆಯಲ್ಲಿ ಮೈಸೂರಿನ ಜನತೆ ಖರೀದಿಸುತ್ತಿದ್ದಾರೆ.ಕಾಂಚೀವರಂ ಸೀರೆಗಳು ತಮ್ಮ ಮೆರುಗನ್ನು ಸಾರಿ ಸಾರಿ ಹೇಳುತ್ತಿವೆ. ನೇಕಾರ ಸೇವಾಕೇಂದ್ರ ಬೆಂಗಳೂರು ಇವರು ಕೈಮಗ್ಗದ ನೈಗೆ ಪ್ರಾತ್ಯಕ್ಷಿ ಕತೆ ಮಳಿಗೆಯಲ್ಲಿ ಮಾಡಿ ತೋರಿಸುತ್ತಾರೆ.
ಇವರು ಈ ಮೇಳದಲ್ಲಿ ಥೀಮ್ ಪೆವಿಲಿಯನ್ ರಚಿಸಿದ್ದು ಮತ್ತು ಮಗ್ಗದ ಮುಖೇನ ಸಾರಿ ನೈಗೆ ಪ್ರಾತ್ಯಕ್ಷತೆಯನ್ನು ಮೈಸೂರಿನ ಜನತೆಗೆ ತೋರಿಸುತ್ತಿದ್ದಾರೆ. ರಾಜಸ್ಥಾನ್ ರಾಜ್ಯದ ಭಗೀರಥ ಕೈಮಗ್ಗ ನೇಕಾರರ ಕೈಯಿಂದ ವಿಶಿಷ್ಟವಾಗಿ ಮೂಡಿ ಬಂದಿರುವ ನೆಲಹಾಸುಗಳು, ಮೇಲು ಹೋದಿಕೆ, ಸಾಲುಗಳ ಸಂಗ್ರಹವೂ ಇದೆ. ಇವರ ಮಳಿಗೆಯಲ್ಲಿ ಕೈಮಗ್ಗ ನೈಗೆ ಪ್ರಾತ್ಯಕ್ಷತೆ ಮೂಲಕ ಮೈಸೂರಿಗರನ್ನು ಕಲೆಯ ಕಡೆಗೆ ಆಕರ್ಷಿಸುವಂತೆ ಮಾಡುತ್ತಿದ್ದಾರೆ.
ಸಿಕ್ಕಿಂ ರಾಜ್ಯದ ಉತ್ತಮ ಗುಣಮಟ್ಟದ ಉಲನ್ ಶಾಲು, ಸ್ವೆಟರ್ ಜನರನ್ನು ತಮ್ಮ ಮಳಿಗೆ ಕಡೆಗೆ ಆಕರ್ಷಿಸುತ್ತಿದೆ. ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್ಗಳು, ಟವಲ್‌ಗಳು, ಕುಶನ್ ಕವರ್‌ಗಳು, ಕೈಮಗ್ಗ ಉತ್ಪನ್ನಗಳು ಮೇಳದಲ್ಲಿ ಮನ ಸೆಳೆಯುತ್ತಿವೆ. ಕರಕುಶಲ ಸಂಸ್ಕೃತಿಯ ಉಡುಗೆ-ತೊಡುಗೆಗಳು ಮತ್ತು ಆಲಂಕಾರಿಕ ವಸ್ತುಗಳು ನೇರವಾಗಿ, ಉತ್ತಮ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿರುವುದೂ ಮೇಳದ ಸೊಬಗನ್ನು ಇಮ್ಮಡಿಗೊಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ರೇಷ್ಮೆ ಸೀರೆಗಳು ಮತ್ತು ಕೈಮಗ್ಗ ಉತ್ಪನ್ನಗಳು ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಸೇರಿವೆ. ಮೇಳದಲ್ಲಿ 70ಕ್ಕೂ ಹೆಚ್ಚು ಮಳಿಗೆಗಳಲ್ಲಿ ದೇಶದ ಸಂಸ್ಕೃತಿಯ ಅನಾವರಣಗೊಂಡಿದೆ. ನವೆಂಬರ್ 21 ರವರೆಗೆ ರಾಜ್ಯ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ - ಹಾತ್ ಕರ್ಗ್ ನಡೆಯಲಿದ್ದು, ಬೆಳಿಗ್ಗೆ ಗಂಟೆ 10 ರಿಂದ ರಾತ್ರಿ ಗಂಟೆ 9 ರ ತನಕ ತೆರೆದಿರುತ್ತದೆ.












Click it and Unblock the Notifications