ಸ್ಯಾನಿಟರಿ ಪ್ಯಾಡ್ ಗಳ ಮೇಲಿನ ತೆರಿಗೆ ವಿರುದ್ಧ ಮಹಿಳೆಯರ ಸಹಿ ಸಂಗ್ರಹ
ಮೈಸೂರು, ಜುಲೈ 7: ಹೊಸ ತೆರಿಗೆ ನೀತಿಯನ್ವಯ ಸ್ಯಾನಿಟರಿ ಪ್ಯಾಡ್ ಗಳಿಗೆ ಜಿಎಸ್ ಟಿ ಅನ್ವಯ ತೆರಿಗೆ ಹೇರಿರುವುದನ್ನು ವಿರೋಧಿಸಿ ಶುಕ್ರವಾರ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು.
ಗರ್ಭ ನಿರೋಧಕ, ಕಾಂಡೋಮ್ ಗಳು ತೆರಿಗೆ ರಹಿತವಾದರೆ, ಸ್ಯಾನಿಟರಿ ಪ್ಯಾಡ್ ಗಳು ಮಾತ್ರ ತೆರಿಗೆಗೆ ಒಳಪಟ್ಟಿವೆ. ಪ್ಯಾಡ್ ಗಳನ್ನು ಜಿಎಸ್ ಟಿಯಿಂದ ಹೊರಗಿಡಬೇಕು ಹಾಗೂ ಬಡ ಕುಟುಂಬದ ಹೆಣ್ಣುಮಕ್ಕಳಿಗೆ ಉಚಿತವಾಗಿ ನ್ಯಾಪ್ ಕಿನ್ ಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿ ಅಭಿಯಾನ ನಡೆಯಿತು.

ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ದೇಶದ ಅತ್ಯಂತ ಮಹತ್ವದ ತೆರಿಗೆ ಸುಧಾರಣೆ ಎನ್ನಲಾಗುತ್ತಿರುವ ಜಿಎಸ್ ಟಿ ಅನುಷ್ಠಾನದಿಂದ ಹೆಣ್ಣುಮಕ್ಕಳು ಚಿಂತಿಸುವಂತಾಗಿದೆ ಎಂದು ಹೇಳಿದರು.
ಜೀವನಾವಶ್ಯಕ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಸ್ಯಾನಿಟರಿ ಪ್ಯಾಡ್ ಗಳನ್ನು ಶೇ 12ರ ತೆರಿಗೆಯ ಪಟ್ಟಿಯಲ್ಲಿರಿಸಿದ್ದು, ಹೆಣ್ಣುಮಕ್ಕಳು ತೊಂದರೆ ಅನುಭವಿಸುವಂತಾಗಿದೆ ಎಂದರು.
ಹಲವು ಕಡೆ ಸ್ಯಾನಿಟರಿ ಬಳಸಲಾಗುತ್ತಿಲ್ಲ. ಇದರಿಂದ ಫಂಗಲ್ ಇನ್ಫೆಕ್ಷನ್, ಗರ್ಭಕೋಶದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ. ಸ್ಯಾನಿಟರಿ ಪ್ಯಾಡ್ ಗಳು ಆರೋಗ್ಯಕರವಾಗಿದ್ದು, ಅವುಗಳ ಮೇಲೆ ಹೇರಿದ ತೆರಿಗೆಯನ್ನು ವಾಪಸ್ ಪಡೆಯಬೇಕು ಎಂದರು.
ಗರ್ಭ ನಿರೋಧಕಗಳು, ಕಾಂಡೋಮ್ ಗಳು ತೆರಿಗೆ ರಹಿತವಾಗಬಹುದಾದರೆ ಸ್ಯಾನಿಟರಿ ಪ್ಯಾಡ್ ಗಳಿಗೆ ಯಾಕೆ ತೆರಿಗೆ ಎಂದು ಪ್ರಶ್ನಿಸಿದರು. change.org, #LahuKaLagaan ಅಭಿಯಾನಗಳೊಂದಿಗೆ, ಹುಣಸೂರಿನಲ್ಲಿ ಈಗಾಗಲೇ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದೇವೆ ಎಂದು ಹೇಳಿದರು.
ಈಗಾಗಲೇ 5,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಹಿ ಮಾಡಿದ್ದು, ದನಿ ಎತ್ತಿದ್ದೇವೆ. ಶುಕ್ರವಾರ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದ್ದೇವೆ ಎಂದರು.












Click it and Unblock the Notifications