ಮೈಸೂರಿನಲ್ಲಿ ಪಕ್ಷಿಗಳ ರೆಕ್ಕೆ ಕತ್ತರಿಸುತ್ತಿದ್ದ ಸರ್ಕಸ್ ಕಂಪನಿ ವಿರುದ್ಧ ಎಫ್‌ಐಆರ್
ಮೈಸೂರು, ಅ. 10: ಪಕ್ಷಿಗಳು ಹಾರಿ ಹೋಗದಂತೆ ತಡೆಯಲು ರೆಕ್ಕೆ ಕತ್ತರಿಸಿದ ಅರೋಪದ ಮೇಲೆ ಗ್ರೇಟ್ ಬಾಂಬೆ ಸರ್ಕಸ್ ಕಂಪನಿ ವಿರುದ್ಧ ಇಲ್ಲಿನ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಾಣಿ ದಯಾ ಸಂಸ್ಥೆ ಪೆಟಾ (ಪಿಇಟಿಎ) ನೀಡಿದ ದೂರಿನ ಮೇರೆಗೆ ಮೈಸೂರಿನ ನಜರಾಬಾದ್ ಠಾಣೆ ಪೊಲೀಸರು ಭಾನುವಾರ ಸರ್ಕಸ್ ಕಂಪನಿ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ.
ಐಪಿಎಇ ಸೆಕ್ಷನ್ 429 (ಪಕ್ಷಿಗೆ ಗಂಭೀರ ಗಾಯಗೊಳಿಸುವುದು), ಹಾಗು 1960ರ ಪಿಸಿಎ ಕಾಯ್ದೆಯ (ಪ್ರಾಣಿಗಳ ಮೇಲಿನ ಕ್ರೌರ್ಯ ನಿಯಂತ್ರಣ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗ್ರೇಟ್ ಬಾಂಬೆ ಸರ್ಕಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೆಟಾ ಇಂಡಿಯಾ ನೀಡಿದ ಈ ದೂರಿಗೆ ಬಿಜೆಪಿ ಸಂಸದೆ ಮೇನಕಾ ಗಾಂಧಿ ಕೂಡ ಬೆಂಬಲ ನೀಡಿ ಎಫ್‌ಐಆರ್ ದಾಖಲಾಗುವಂತೆ ಮಾಡಿರುವುದು ತಿಳಿದುಬಂದಿದೆ.
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ಯಲ್ಲಿ ನೊಂದಾಯಿತವಾದ ಸಾಹಸಗಳನ್ನು ಗ್ರೇಟ್ ಬಾಂಬೆ ಸರ್ಕಸ್ ಕಂಪನಿಯಲ್ಲಿ ನಾಯಿ ಮತ್ತು ಪಕ್ಷಿಗಳಿಂದ ಮಾಡಿಸಲಾಗುತ್ತಿತ್ತೆನ್ನಲಾಗಿದೆ. ರಿಂಗ್‌ನ ತುದಿ ಮೇಲೆ ಮುಂಗಾಲುಗಳ ಮೇಲೆ ನಾಯಿಗಳನ್ನು ನಡೆಸುತ್ತಿದ್ದುದು ಇತ್ಯಾದಿ ಕ್ಲಿಷ್ಟಕರ ಸಾಹಸಗಳನ್ನು ಪ್ರಾಣಿ ಪಕ್ಷಿಗಳಿಂದ ಮಾಡಿಸಲಾಗುತ್ತಿತ್ತು ಎಂಬುದು ಪೀಟಾ ಇಂಡಿಯಾದ ಆರೋಪ.

"ಪಕ್ಷಿಗಳ ರೆಕ್ಕೆಗಳನ್ನು ಆಗಾಗ ಕತ್ತರಿಸುವ ಮೂಲಕ ಅವುಗಳ ಹಾರಾಟಕ್ಕೆ ಭಂಗ ತರಲಾಗುತ್ತಿತ್ತು. ಅವುಗಳನ್ನು ಪಂಜರದಲ್ಲಿ ಕೂಡಿ ಹಾಕಲಾಗುತ್ತಿತ್ತು" ಎಂದೂ ಪೀಟಾ ಇಂಡಿಯಾದ ಅಧಿಕಾರಿ ಹರ್ಷಿಲ್ ಮಹೇಶ್ವರಿ ಹೇಳಿದ್ದಾರೆ.
ಸರ್ಕಸ್‌ಗಳಲ್ಲಿ ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತದೆ. ಸಣ್ಣ ಗೂಡುಗಳಲ್ಲಿ ಕಟ್ಟಿ ಹಾಕಲಾಗುತ್ತದೆ. ಸರಿಯಾದ ಆರೋಗ್ಯ ಕಾಳಜಿ, ಆಹಾರ, ನೀರು ಇತ್ಯಾದಿ ವ್ಯವಸ್ಥೆಯೂ ಇರುವುದಿಲ್ಲ. ಪ್ರಾಣಿಗಳ ಸಹಜ ಹಾಗೂ ಪ್ರಮುಖ ಕ್ರಿಯೆಯ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಆಯುಧದಿಂದ ಭಯಗೊಳಿಸಿ ಪ್ರಾಣಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗುತ್ತಿದೆ. ಪ್ರಾಣಿಗಳಿಗೆ ಇಷ್ಟ ಇಲ್ಲದಿದ್ದರೂ ಹೆದರಿಸಿ ಸಾಹಸ ಮಾಡಿಸಲಾಗುತ್ತಿದೆ. ಪ್ರಾಣಿ, ಪಕ್ಷಿಗಳು ಸಾಹಸಗಳನ್ನು ಮಾಡುವಾಗ ಯಾತನೆಗೆ, ಒತ್ತಡಕ್ಕೆ ಒಳಗಾಗುತ್ತಿರುವುದು ಕಂಡು ಬಂದಿದೆ ಎಂದು ಪೀಟಾ ಇಂಡಿಯಾ ಹೇಳುತ್ತದೆ.

ಮೂಕ ಪ್ರಾಣಿಗಳ ಬದಲು ಸಮ್ಮತಿಸಿರುವ ಮನುಷ್ಯರನ್ನು ಬಳಸಿ ರೂಪಿಸುವ ಮನರಂಜನಾ ಕಾರ್ಯಕ್ರಮಗಳನ್ನು ಮಾತ್ರ ಬೆಂಬಲಿಸುವಂತೆ ಸಾರ್ವಜನಿಕರಿಗೆ ಪೆಟಾ ಸಂಸ್ಥೆ ಇದೇ ವೇಳೆ ಮನವಿ ಮಾಡಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications