ಕೊರೊನಾವನ್ನೇ ಲಾಭಕ್ಕೆ ಬಳಸಿ ನಕಲಿ ಸ್ಯಾನಿಟೈಸರ್ ಮಾರುತ್ತಿದ್ದವನ ಬಂಧನ
ಮೈಸೂರು, ಮಾರ್ಚ್ 21: ಕೊರೊನಾ ಭೀತಿಯಿಂದ ಜನರು ಆರೋಗ್ಯ ಕಾಪಾಡಿಕೊಳ್ಳಲು ಸ್ಯಾನಿಟೈಸರ್ ಖರೀದಿಗೆ ಮುಂದಾಗಿದ್ದು, ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ ಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ.
ಈ ಪರಿಸ್ಥಿತಿಯನ್ನೇ ಲಾಭಕ್ಕೆ ಬಳಸಿಕೊಂಡು ಜನರಿಗೆ ನಕಲಿ ವಸ್ತುಗಳನ್ನು ನೀಡಿ ಮೋಸ ಮಾಡಲೂ ದುಷ್ಕರ್ಮಿಗಳು ಪ್ರಯತ್ನಿಸುತ್ತಿರುತ್ತಾರೆ. ಇದೇ ರೀತಿ ಮೊನ್ನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ 50 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಸ್ಯಾನಿಟೈಸರ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಬೆನ್ನಲ್ಲೇ ಮೈಸೂರಿನಲ್ಲೂ ನಕಲಿ ಸ್ಯಾನಿಟೈಸರ್ ಮಾರುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ. ನಗರದ ವಿವೇಕಾನಂದ ಸರ್ಕಲ್ ಬಳಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಂಡಿರುವ ಕಾನೂನು ಮಾಪನಶಾಸ್ತ್ರ ಅಧಿಕಾರಿಗಳು ನೂರಕ್ಕೂ ಹೆಚ್ಚು ನಕಲಿ ಸ್ಯಾನಿಟೈಸರ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ನೀಡಿದ ಸುಳಿವಿನ ಮೇರೆಗೆ ಮೇಟಗಳ್ಳಿಯ ಉತ್ಪಾದನಾ ಘಟಕಕ್ಕೇ ದಾಳಿ ಮಾಡಿದ ಮಾಪನ ಸಹಾಯಕ ನಿಯಂತ್ರಕ ಪಿ.ಎಂ. ಮಹದೇವ ಸ್ವಾಮಿ ಮತ್ತು ಸಿಬ್ಬಂದಿ ರಾಸಾಯನಿಕ ಮತ್ತು ಬಾಟಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.











Click it and Unblock the Notifications