ನಾಡಹಬ್ಬದ ಮೆರುಗಿಗೆ ಈ ಬಾರಿ 70 ರಸ್ತೆ, 40ವೃತ್ತಗಳಲ್ಲಿ ಥರಾವರಿ ದೀಪಾಲಂಕಾರ
ಮೈಸೂರು, ಸೆಪ್ಟೆಂಬರ್ 3: ದಸರಾ ಬರುತ್ತಿದ್ದಂತೆ ಹಬ್ಬದ ಕಳೆ ತರುವ ದೀಪಾಲಂಕಾರಕ್ಕೂ ಹೊಸತನ ನೀಡಲಾಗುತ್ತದೆ. ಹಾಗೆಯೇ ಈ ಬಾರಿ ದಸರಾ ದೀಪಾಲಂಕಾರದಲ್ಲಿ ಯೋಗಾಸನಕ್ಕೆ ಪ್ರಾಮುಖ್ಯ ನೀಡಲಾಗಿದೆ. ಯೋಗಾಸನದ ವಿವಿಧ ಭಂಗಿಯ ಮಾದರಿಗಳನ್ನು ದೀಪಾಲಂಕಾರದ ಮೂಲಕ ತೋರಲಾಗುತ್ತಿದೆ.
ವಿವಿಧ ಭಂಗಿಯ ಮಾದರಿಯನ್ನು ದೀಪಾಲಂಕಾರದ ಮೂಲಕ ಪ್ರದರ್ಶಿಸಿ ಯೋಗಾಸನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ದುರ್ಗಾ ಪೂಜೆಗೂ ಮೈಸೂರು ದಸರೆಗೂ ಎಲ್ಲಿಲ್ಲದ ನಂಟು. ನವದುರ್ಗಾ ಸಮಿತಿಯು ಪ್ರತಿ ವರ್ಷವೂ ದುರ್ಗಾ ಪೂಜೆ ವೇಳೆ ದೀಪಾಲಂಕಾರ ಮಾಡುತ್ತದೆ. ಮೈಸೂರು ದಸರಾದಲ್ಲಿ ಅದೇ ಮಾದರಿಯಲ್ಲಿ ಆಕರ್ಷಣೆ ಹಾಗೂ ಭಕ್ತಿಯ ಪ್ರತೀಕವಾಗಿ ದೀಪಾಲಂಕಾರ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಕಳೆದ ಬಾರಿ ಎಲ್ ಇಡಿ ದೀಪಗಳನ್ನು ಅಳವಡಿಸಲಾಗಿದ್ದು, ಈ ಬಾರಿಯೂ ಆದ್ಯತೆ ನೀಡಿ ಹೊಸ ಮಾದರಿಯ ಪ್ರತಿಕೃತಿಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ.

ಹೊಸ ವಿನ್ಯಾಸಗಳ ಕುರಿತು ಸಾರ್ವಜನಿಕರೂ ಸಲಹೆ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಬಾರಿ ಕೆಲವೇ ಆಯ್ದ ರಸ್ತೆಗಳಿಗೆ ದೀಪಗಳಿಂದ ಅಲಂಕರಿಸಲಾಗಿತ್ತು. ಆದರೆ ಈ ವರ್ಷ ಮೈಸೂರು ನಗರಕ್ಕೆ ಒಳಪಡುವ ಎಲ್ಲಾ ಮುಖ್ಯ ರಸ್ತೆ ಹಾಗೂ ಸಂಸ್ಥೆಗಳಿಗೆ ದೀಪಾಲಂಕಾರ ಕಲ್ಪಿಸಲು ಯೋಜಿಸಲಾಗಿದೆ. 70 ರಸ್ತೆಗಳು ಹಾಗೂ 40 ಸರ್ಕಲ್ ಗಳಲ್ಲಿ ದೀಪಗಳು ಕಂಗೊಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹಿಂದಿನ ದಸರಾದಲ್ಲಿ ದೀಪಾಲಂಕಾರಕ್ಕಾಗಿ ಸುಮಾರು 6-7 ಮೆಗಾ ವ್ಯಾಟ್ ವಿದ್ಯುತ್ ಬೇಕಾಗುತ್ತಿತ್ತು. ಇದರಿಂದ 3 ಲಕ್ಷ ಯೂನಿಟ್ ವೆಚ್ಚವಾಗುತ್ತಿತ್ತು. ಆದರೆ ಎಲ್ ಇ ಡಿ ದೀಪಗಳ ಬಳಕೆಯಿಂದ ದೀಪಾಲಂಕಾರಕ್ಕೆ ಕಡಿಮೆ ವಿದ್ಯುತ್ ವ್ಯತ್ಯಯವಾಗುತ್ತದೆ. ಇದರಿಂದ ಸುಮಾರು 2 ಲಕ್ಷ ಯೂನಿಟ್ ವಿದ್ಯುತ್ ಉಳಿತಾಯ ಸಾಧ್ಯವಾಗಲಿದೆ ಎಂಬುದು ಸೆಸ್ಕ್ ಅಧಿಕಾರಿಗಳ ಅಭಿಪ್ರಾಯ.












Click it and Unblock the Notifications