ಅಪ್ಪನ ಹೆಗಲ ಮೇಲೆ ಕೂತು ದಸರಾ ನೋಡ್ತಿದ್ದೆ: ಬಾಲ್ಯ ನೆನೆದ ಡಿಸಿಎಂ
ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಅದ್ಧೂರಿಯಾಗಿ ನೆರವೇರಿದೆ. ನಾಡಹಬ್ಬದ ಅಂಗವಾಗಿ ತಾಯಿ ಚಾಮುಂಡೇಶ್ವರಿ ಸಹಿತ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ. ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ನಾನು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಪಾಲ್ಗೊಂಡು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದೆವು ಎಂದು ಡಿ.ಕೆ.ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಬಾಲ್ಯದಲ್ಲಿ ಅಪ್ಪನ ಹೆಗಲ ಮೇಲೆ ಕೂತು ಮೈಸೂರು ದಸರಾ ನೋಡ್ತಿದ್ದೆ, ಇಂದು ಅದೇ ದಸರಾಗೆ ಚಾಲನೆ ನೀಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ. ದಸರಾ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಹಾಗೂ ನಾನಾ ಜಿಲ್ಲೆ ಹಾಗೂ ಇಲಾಖೆಗಳ ಸ್ತಬ್ಧಚಿತ್ರಗಳು ಕಣ್ಮನಸೆಳೆದವು. ಜಂಬೂ ಸವಾರಿಯ ಕೇಂದ್ರಬಿಂದುವಾದ ಅಭಿಮನ್ಯು 750 ಕೆಜಿ ತೂಕದ ಅಂಬಾರಿ ಹೊತ್ತು ತಾಯಿ ಶ್ರೀ ಚಾಮುಂಡೇಶ್ವರಿಯನ್ನು ಊರ ತುಂಬ ಮೆರವಣಿಗೆ ಮಾಡಿದ ಎಂದು ಕೊಂಡಾಡಿದ್ದಾರೆ.
ಇಂದು ಸಾಂಸ್ಕೃತಿಕ ನಗರಿಯಲ್ಲಿ ಐತಿಹಾಸಿಕ 414ನೇ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಈ ಅಪರೂಪದ ಕ್ಷಣಕ್ಕಾಗಿ ಕಾಯುತ್ತಿದ್ದ ನಾಡಿನ ಜನರು ಅಭಿಮನ್ಯು ಹೊತ್ತಿದ್ದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡರು.
ಇನ್ನು ಪ್ರತಿ ವರ್ಷದ ಆಚರಣೆಯಂತೆ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಸೇರಿದಂತೆ ಗಣ್ಯರು ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಅರಮನೆ ಆವರಣದಲ್ಲಿ ಇದರ ಗೌರವಾರ್ಥವಾಗಿ 21 ಬಾರಿ ಕುಶಾಲತೋಪು ಸಿಡಿಸಲಾಯಿತು.

ಚಿನ್ನದ ಅಂಬಾರಿ ಹೊತ್ತು 5ನೇ ಬಾರಿಗೆ ಮುನ್ನಡೆದ ಅಭಿಮನ್ಯುಗೆ ಲಕ್ಷ್ಮಿ, ವರಲಕ್ಷ್ಮಿ ಆನೆಗಳು ಸಾಥ್ ಕೊಟ್ಟವು. ಈ ಬಾರಿಯ ಜಂಬೂಸವಾರಿಯಲ್ಲಿ ಒಂಬತ್ತು ಆನೆಗಳು ಪಾಲ್ಗೊಂಡಿದ್ದು, ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಉಳಿದ ಆನೆಗಳು ಸಾಲು ಆನೆಗಳಾಗಿ ಸಾಗಿ ಜಂಬೂಸವಾರಿಯಲ್ಲಿ ಸಾಗಿದವು. ಕಳೆದ ವರ್ಷಕ್ಕಿಂತ ಈ ಬಾರಿಯ ಸಂಭ್ರಮ ಹೆಚ್ಚಾಗಿಯೇ ಇತ್ತು.
ಇಂದು ಬೆಳಿಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ವಿಜಯದಶಮಿಯು ದಸರಾ ಉತ್ಸವದ ಕೊನೆಯ ದಿನವಾಗಿದ್ದು, ಜಂಬೂಸವಾರಿ, ಪಂಜಿನ ಮೆರವಣಿಗೆ ಸೇರಿದಂತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನಡೆಯಲಿದೆ. ಈ ಶುಭ ಸಂದರ್ಭದಲ್ಲಿ ನಾಡಿನ ಹಾಗೂ ದೇಶದ ಜನರಿಗೆ ದಸರೆಯ ಶುಭಾಶಯಗಳು ಎಂದಿದ್ದರು.
ಈ ಬಾರಿ ಉತ್ತಮ ಮಳೆ ಹಾಗೂ ಬೆಳೆಯಾಗಿದ್ದು, ರೈತರಲ್ಲಿ ನೆಮ್ಮದಿ ಮನೆಮಾಡಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿರುವುದು ಸಂತಸದ ವಿಚಾರ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ದಸರಾದ ಸಂಕೇತ. ರಾಜ್ಯದಲ್ಲಿ ಅಶಾಂತಿ ಮೂಡಿಸಿ, ಬದುಕುಗಳನ್ನು ಹಾಳುಮಾಡಲು ಸಂಚು ರೂಪಿಸುವವರಿಗೆ ದೇವರು ಸದ್ಭುದ್ಧಿ ನೀಡಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಶುಭಕೋರಿದ್ದರು.












Click it and Unblock the Notifications