ಮೈಸೂರಿನಲ್ಲಿ ಕೊರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯ
ಮೈಸೂರು, ಮಾರ್ಚ್ 14: ಕೊರೊನಾ ವೈರಸ್ ಕೋವಿಡ್-19 ಪತ್ತೆ ಹಚ್ಚಲು ಇಲ್ಲಿನ ಕೃಷ್ಣ ರಾಜ ಆಸ್ಪತ್ರೆಯ ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ( ವಿಆರ್ ಡಿಎಲ್) ಅನ್ನು ಸೋಂಕು ಪರೀಕ್ಷಾ ಪ್ರಯೋಗಾಲಯವನ್ನಾಗಿ ಕೇಂದ್ರ ಸರ್ಕಾರ ಗುರುತಿಸಿರುವುದಾಗಿ ತಿಳಿದು ಬಂದಿದೆ.
ಕೊರೊನಾ ಶಂಕೆ ಇರುವ ವ್ಯಕ್ತಿಗಳ ರಕ್ತ, ಗಂಟಲು ದ್ರವ ಮಾದರಿಗಳನ್ನು ವಿಶ್ಲೇಷಣೆಗಾಗಿ ಈ ಪ್ರಯೋಗಾಲಯಕ್ಕೆ ಕಳುಹಿಸಿದರೆ ಮೂರು ಗಂಟೆಗಳಲ್ಲಿ ಪರೀಕ್ಷೆ ನಡೆಸಿ, ಪುಣೆಯ ವೈರಾಣು ಸಂಸ್ಥೆಗೆ ಕಳುಹಿಸಿಕೊಡಲಿದೆ.
ಪರೀಕ್ಷೆಗಳನ್ನು ನಡೆಸಲು ವಿಆರ್ ಡಿಎಲ್ ಸಜ್ಜುಗೊಂಡಿದ್ದರೂ, ದೇಶದಲ್ಲಿ ಸೋಂಕು ದೃಢಪಡಿಸುವ ಏಕೈಕ ಅಧಿಕಾರ ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮಾತ್ರ ಹೊಂದಿದೆ. ಕೋವಿಡ್ -19ರ ಶಂಕಿತ ಮಾದರಿಗಳನ್ನು ಸಂಗ್ರಹಿಸಿ ಸಾಗಿಸುವ ಕಾರ್ಯವನ್ನು ಮಾತ್ರ ವಿಆರ್ ಡಿಎಲ್ ಮಾಡಲಿದೆ. ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಭಾಗವಾಗಿರುವ ವಿಆರ್ ಡಿಎಲ್ ರಾಷ್ಟ್ರೀಯ ವೈರಾಣು ಸಂಸ್ಥೆಯ ಸಲಹೆಯಂತೆ ಕಾರ್ಯನಿರ್ವಹಿಸುತ್ತಿದೆ. ಕೆ.ಆರ್. ಆಸ್ಪತ್ರೆಯ ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ಸ್ಥಾಪಿಸಲಾಗಿರುವ ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ( ವಿಆರ್ ಡಿಎಲ್) ದೇಶದ 52ಕ್ಕೂ ಹೆಚ್ಚು ಸುಸಜ್ಜಿತ ಪ್ರಯೋಗಾಲಯಗಳಲ್ಲಿ ಒಂದಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಇಲ್ಲಿ ನಡೆಸಿದ ಪರೀಕ್ಷೆಗಳ ಫಲಿತಾಂಶಗಳನ್ನು ಅದೇ ದಿನ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಬೇಕಿದೆ. ಅಲ್ಲದೆ, ಕೊರೊನಾ ಸೋಂಕಿನ ಮಾದರಿಗಳು ನಕಾರಾತ್ಮಕ ಎಂದು ಕಂಡು ಬಂದರೂ ರಾಷ್ಟ್ರೀಯ ವೈರಾಣು ಸಂಸ್ಥೆ ದೃಢೀಕರಿಸಿ ಘೋಷಿಸಬೇಕಿದೆ. ಮೈಸೂರಿಗೆ ಸಮೀಪದ ಇತರ ಜಿಲ್ಲೆಗಳ ಆಸ್ಪತ್ರೆಗಳಿಂದ ರೋಗಿಗಳ ರಕ್ತ, ಎಂಜಲು ಮಾದರಿಗಳನ್ನು ತೆಗೆದು ಕೆ.ಆರ್. ಆಸ್ಪತ್ರೆಗೆ ಕಳಿಸಿಕೊಡಬೇಕಿದೆ.












Click it and Unblock the Notifications