ಮೈಸೂರು ಲೋಕಸಭಾ ಚುನಾವಣೆ ಇತಿಹಾಸ; ಕಾಂಗ್ರೆಸ್‌ಗೆ ಹೆಚ್ಚು ಬಾರಿ ಗೆಲುವು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಈವರೆಗೆ 17 ಬಾರಿ ಚುನಾವಣೆ ನಡೆದಿದೆ. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳೇ ಅತಿ ಹೆಚ್ಚು ಬಾರಿ ಲೋಕಸಭೆ ಪ್ರವೇಶಿಸಿರುವುದು ವಿಶೇಷ.

ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಾಲ್ಕು ಬಾರಿ ಹಾಗೂ ಎಚ್.ಡಿ.ತುಳಸೀದಾಸ್ ದಾಸಪ್ಪ ಮೂರು ಬಾರಿ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ. ಇದರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1989ನೇ ಸಾಲಿನ ಚುನಾವಣೆಯಲ್ಲಿ ದಾಖಲೆ ಗೆಲುವು ಕಂಡಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು ಬರೋಬ್ಬರಿ 2,49,364 ಮತಗಳ ಅಂತರದಿಂದ ಜಯಿಸಿದ್ದರು. ಅಂದಿನಿಂದ ಇಂದಿನವರೆಗೆ ಸಾರ್ವತ್ರಿಕ ದಾಖಲೆಯ ಗೆಲುವಾಗಿದೆ.

Congress Wins Mysuru Lok Sabha Constituency Multiple Times More than Any parties

ಮೈಸೂರು ದ್ವಿ ಸದಸ್ಯತ್ವ

1952ರಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದ ಸಂದರ್ಭ ಅವಿಭಜಿತ ಮೈಸೂರು ಜಿಲ್ಲೆ ಲೋಕಸಭೆಯಲ್ಲಿ ದ್ವಿಸದಸ್ಯತ್ತನ್ನು ಹೊಂದಿತ್ತು. ಕಾಂಗ್ರೆಸ್‌ನ ಎನ್‌.ರಾಚಯ್ಯ ಹಾಗೂ ಕೆಎಂಪಿಪಿಯ ಎಂ.ಎಸ್.ಗುರುಪಾದಸ್ವಾಮಿ ಆಯ್ಕೆಯಾಗಿದ್ದರು. 1957ರಲ್ಲಿ ಎರಡನೇ ಚುನಾವಣೆಯಲ್ಲಿ ಎನ್. ರಾಚಯ್ಯ ಸ್ಪರ್ಧೆ ಮಾಡಲಿಲ್ಲ. ಕಾಂಗ್ರೆಸ್‌ನ ಎಂ. ಶಂಕರಯ್ಯ ಹಾಗೂ ಎಸ್.ಎಂ.ಸಿದ್ದಯ್ಯ ಅವರು ಆಯ್ಕೆಯಾದರು.

1962ರಲ್ಲಿ ನಡೆದ ಮೂರನೇ ಸಾರ್ವತ್ರಿಕ ಚುನಾವಣೆಯ ವೇಳೆಗೆ ಕ್ಷೇತ್ರ ಪುನರ್ ವಿಂಗಡಣೆಯಾಗಿ ಸ್ವರೂಪದಲ್ಲಿ ಬದಲಾವಣೆ ಆಗಿತ್ತು. ಮೈಸೂರು ಹಾಗೂ ಚಾಮರಾಜನಗರ ಪ್ರತ್ಯೇಕ ಲೋಕಸಭಾ ಕ್ಷೇತ್ರಗಳಾದವು. ಮೈಸೂರು ಸಾಮಾನ್ಯ ಕ್ಷೇತ್ರವಾಗಿ ಉಳಿದುಕೊಂಡರೆ ಚಾಮರಾಜನಗರ ಪರಿಶಿಷ್ಟ ಜಾತಿಗೆ ಮೀಸಲಾಯಿತು. ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್‌ ಶಂಕರಯ್ಯ ಸತತ ಎರಡನೇ ಬಾರಿಗೆ ಲೋಕಸಭೆಗೆ ಪ್ರವೇಶ ಪಡೆದರು.

1967ರಲ್ಲಿ ನಡೆದ ನಾಲ್ಕನೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಚ್.ಡಿ.ತುಳಸಿದಾಸ್ ಅವರು ಆಯ್ಕೆಯಾದರು. 1971 ಹಾಗೂ 1977ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಡಿ.ತುಳಸಿದಾಸ್ ಅವರೇ ಆಯ್ಕೆಯಾದರು. ಆ ಮೂಲಕ ಅವರು ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದರು. 1980ರಲ್ಲಿ ಮುಂಚಿತವಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜಶೇಖರ ಮೂರ್ತಿ ಗೆಲುವು ಸಾಧಿಸಿದರು.

ರಾಜವಂಶಸ್ಥರು ಎಂಟ್ರಿ

1984ರ ಚುನಾವಣೆ ಅಖಾಡ ಬದಲಾಗಿತ್ತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಚುನಾವಣಾ ರಾಜಕೀಯಕ್ಕೆ ಧುಮುಕಿದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಅವರು ಗೆಲುವಿನ ನಗೆ ಬೀರಿದರು. 1989ರ ಚುನಾವಣೆಯಲ್ಲೂ ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಅವರೆ ಗೆಲುವು ಸಾಧಿಸಿದರು. ಆದರೆ, 1991ರಲ್ಲಿ ಅವಧಿಪೂರ್ವ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಸೋಲು ಅನುಭವಿಸುತ್ತಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ದೇವರಾಜ ಅರಸ್ ಪುತ್ರಿ ಚಂದ್ರಪ್ರಭಾ ಅರಸು ಗೆಲುವು ಸಾಧಿಸುತ್ತಾರೆ. ಆದರೆ, 1996ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಗೆಲುವಿನ ಲಯಕ್ಕೆ ಮರಳುತ್ತಾರೆ.

ಮೊದಲ ಬಾರಿ ಅರಳಿದ ಕಮಲ

1998ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಚಿಕ್ಕಮಾದು, ಜನತಾದಳದಿಂದ ಜಿ.ಟಿ. ದೇವೇಗೌಡ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಎಚ್.ವಿಜಯಶಂಕರ್ 1,03,024 ಮತಗಳ ಅಂತರದಲ್ಲಿ ಗೆಲುವು ಪಡೆದು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು. ಈ ಗೆಲುವಿನೊಂದಿಗೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. 1999ರಲ್ಲಿ ಮತ್ತೆ ಕಾಂಗ್ರೆಸ್‌ನಿಂದು ಗೆದ್ದು ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಲೋಕಸಭೆ ಪ್ರವೇಶಿಸುತ್ತಾರೆ. 2004ರಲ್ಲಿ ಸಿ.ಎಚ್.ವಿಜಯಶಂಕರ್ ಬಿಜೆಪಿಯಿಂದ ಎರಡನೇ ಬಾರಿಗೆ ಲೋಕಸಭೆಗೆ ಚುನಾಯಿತರಾಗುತ್ತಾರೆ.

2009ರಲ್ಲಿ ಕೊಡಗು ಜಿಲ್ಲೆ ಸೇರ್ಪಡೆ

2009ರ ಚುನಾವಣೆಯಲ್ಲಿ ಕೊಡಗು ಜಿಲ್ಲೆಯನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಯಿತು. ಮೈಸೂರಿನ ಕೆ.ಆ‌ರ್.ನಗರವನ್ನು ಮಂಡ್ಯಕ್ಕೆ ಮತ್ತು ಎಚ್.ಡಿ. ಕೋಟೆಯನ್ನು ಪಕ್ಕದ ಚಾಮರಾಜನಗರಕ್ಕೆ ಸೇರಿಸಲಾಯಿತು. ಇಡೀ ಕೊಡಗು ಜಿಲ್ಲೆಯನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ಗೆಲುವಿನ ನಗೆ ಬೀರಿದ್ದರು.

2014 ಚುನಾವಣೆಯಲ್ಲಿ ಪತ್ರಕರ್ತರಾಗಿದ್ದ ಹಾಲಿ ಸಂಸದ ಪ್ರತಾಪಸಿಂಹ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದ ಎಚ್. ವಿಶ್ವನಾಥ್, ಪ್ರತಾಪ್‌ಸಿಂಹ ವಿರುದ್ಧ ಸೋಲುಂಡರು. 2019ರಲ್ಲಿ ಪ್ರತಾಪ್ ಸಿಂಹ 6,85,105 ಮತ ಪಡೆದಿರುವುದು ಇದುವರೆಗಿನ ಅಭ್ಯರ್ಥಿಯೊಬ್ಬ ಹೆಚ್ಚು ಮತ ಪಡೆದಿರುವ ದಾಖಲೆ ಪಟ್ಟಿ ಸೇರಿದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿ.ಎಚ್.ವಿಜಯಶಂಕರ್ 5,48,911 ಮತಗಳನ್ನು ಗಳಿಸಿ ಸೋತರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+