ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ
ರಾಜಕಾರಣದ ಮಹತ್ತರ ಬೆಳವಣಿಗೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಶ್ರೀನಿವಾಸ ಪ್ರಸಾದ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ಶ್ರೀನಿವಾಸ ಪ್ರಸಾದ್ ಮನೆಗೆ ಶನಿವಾರ ಭೇಟಿ ನೀಡಿದ ಸಿದ್ದರಾಮಯ್ಯ ಆರೋಗ್ಯ -ಯೋಗಕ್ಷೇಮ ವಿಚಾರಿಸಿದರು. ಕಳೆದ ಹಲವು ವರ್ಷಗಳಿಂದ ಸಿದ್ದರಾಮಯ್ಯರಿಂದ ದೂರ ಉಳಿದಿದ್ದ ಶ್ರೀನಿವಾಸ ಪ್ರಸಾದ್ ಬಿಜೆಪಿ ಸೇರಿ ಚಾಮರಾಜನಗರದ ಸಂಸದರಾಗಿದ್ದರು.

ಅನಾರೋಗ್ಯ ಕಾರಣದಿಂದ ಇತ್ತೀಚಿಗೆ ಶ್ರೀನಿವಾಸ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಜೊತೆಗೆ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದಿದ್ದರು. ಮೈಸೂರಿನಲ್ಲಿ ಚುನಾವಣಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಶನಿವಾರ ಶ್ರೀನಿವಾಸ ಪ್ರಸಾದ್ ಭೇಟಿಯಾಗಿ ಮಾತುಕತೆ ನಡೆಸಿದರು. ಆದರೆ, ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ಶ್ರೀನಿವಾಸ್ ಪ್ರಸಾದ್ ದೀರ್ಘಕಾಲದ ಸ್ನೇಹಿತರು. ರಾಜಕೀಯದಲ್ಲಿ ಅವರು ಬಿಜೆಪಿಗೆ ಹೋದರು ನಾನು ಕಾಂಗ್ರೆಸ್‌ನಲ್ಲಿದ್ದೆ. ಈಗ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ, ರಾಜಕೀಯವಾಗಿ ಏನೂ ಪ್ರಸ್ತಾಪ ಮಾಡಲಿಲ್ಲ. ನಾನು ಯಾರ ಪರವಾಗಿಯೂ ಪ್ರಚಾರಕ್ಕೆ ಹೋಗಲ್ಲ ಎಂದಿದ್ದಾರೆ. ಆದರೆ, ನೀವು ಕಾಂಗ್ರೆಸ್‌ನಲ್ಲಿದ್ದವರು ನಿಮ್ಮ ಸಿಂಪತಿ ಕಾಂಗ್ರೆಸ್ ಮೇಲಿರಲಿ ಎಂದು ಮನವಿ ಮಾಡಿದ್ದೇನೆ ಅಷ್ಟೇ ಎಂದರು.
ಮೋದಿ ಸಮಾರಂಭಕ್ಕೆ ಹೋಗಲ್ಲ
ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಸಿದ್ದರಾಮಯ್ಯ ಅವರ ಭೇಟಿ ಖುಷಿ ಕೊಟ್ಟಿದೆ. ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ ಉತ್ತಮವಾದ ವಾತಾವರಣ ಇದೆ. ನಾನು ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದೇನೆ. ಬಹಿರಂಗವಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ ಎಂದರು.
ನಾಳೆಯ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಹೋಗುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಮಾವೇಶಕ್ಕೆ ಆಹ್ವಾನ ಬಂದಿಲ್ಲ, ಬರುವುದು ಇಲ್ಲ. ನಾನು ಹೋಗೋದು ಇಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications