ಸಿಎಂ ಸಮಾಜವಾದಿಯಲ್ಲ, ಆತನ ಸೋಲಿಸಿಯೇ ಸಿದ್ದ:ಶ್ರೀನಿವಾಸ ಪ್ರಸಾದ್
ಮೈಸೂರು, ಏಪ್ರಿಲ್ 3 : 750 ಕೆ.ಜಿ ತೂಕದ ಸೇಬಿನ ಹಾರ ಹಾಕಿಸಿಕೊಳ್ಳುವ ಸಿದ್ದರಾಮಯ್ಯ, ನಾಳೆ 7 ಕೆ.ಜಿ ಚಿನ್ನದ ಹಾರವನ್ನು ಹಾಕಿಸಿಕೊಳ್ಳಲ್ಲ ಅನ್ನೋ ಗ್ಯಾರಂಟಿ ಏನು ?. ಅವನೊಬ್ಬ ಸಮಾಜವಾದಿ ಹೇಗೆ ಆಗ್ತಾನೆ? ಸಮಾಜವಾದಿ ಎನಿಸಿಕೊಂಡ ಯಾರೂ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸಿದ್ದರಾಮಯ್ಯನವರನ್ನು ಚಾಮುಂಡಿ ಕ್ಷೇತ್ರದಲ್ಲಿ ಸೋಲಿಸಿಯೇ ಸೋಲಿಸುತ್ತೇವೆ. ಆದರೆ ಯಾವ ರೀತಿ ಸೋಲಿಸುತ್ತೇವೆ ಎಂಬ ರಾಜಕೀಯ ತಂತ್ರಗಾರಿಕೆಯ ಗುಟ್ಟು ಬಿಟ್ಟುಕೊಡುವುದಿಲ್ಲ ಎಂದರು.
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪುಸ್ತಕದಲ್ಲಿ ಏನಿದೆ? ಮುಖ್ಯಾಂಶಗಳು
ನನ್ನ ಪುಸ್ತಕ ಓದದೇ ಮನಬಂದಂತೆ ಮಾತನಾಡುತ್ತಿದ್ದಾರೆ
ನಾನು ಬರೆದ 'ಸ್ವಾಭಿಮಾನದ ರಾಜಕಾರಣ' ಪುಸ್ತಕದಲ್ಲಿ ಬೈ-ಎಲೆಕ್ಷನ್ ಬಗ್ಗೆ ಬರೆದಿದ್ದೆ. ಇದರ ಬಗ್ಗೆ ಟೀಕೆ ಮಾಡಿದ ಮೂರು ಜನ ಪ್ರಮುಖರೂ ನನ್ನ ಪುಸ್ತಕ ಓದಿಯೇ ಇಲ್ಲ. ಅದರಲ್ಲಿ ಆಧಾರರಹಿತವಾದ ಮಾಹಿತಿ ಇದ್ದರೆ ಹೇಳಬೇಕಿತ್ತು. ಅವರು ನನ್ನ ಬಳಿ ಬಂದು ಪುಸ್ತಕದಲ್ಲಿ ಸುಳ್ಳಿದೆ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಉಪಚುನಾವಣೆಯಲ್ಲಿ ಅಕ್ರಮವಾಗಿದ್ದರೆ ಕೋರ್ಟಿಗೆ ಹೋಗಬೇಕಿತ್ತು ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪೀಪಲ್ ಕೋರ್ಟ್ ಮುಂದೆ ಅಂದರೆ ಜನರ ಮುಂದೆ ಹೋಗಿದ್ದೇನೆ. ನನ್ನ ಉದ್ದೇಶ ಕೋರ್ಟಿಗೆ ಹೋಗುವುದಲ್ಲ. ಪ್ರಕರಣವನ್ನು ಜನತಾ ನ್ಯಾಯಾಲಯದ ಮುಂದಿಡುವುದೇ ನನ್ನ ಪುಸ್ತಕದ ಉದ್ದೇಶ. ಸಿಎಂ ತಾತ್ಸಾರ - ಉಡಾಫೆ ಮಾತುಗಳನ್ನು ಆಡುತ್ತಲೇ ಇದ್ದಾರೆ. ಪಲಾಯನ ಮಾಡುವುದು ಅವರ ಚಾಳಿ ಎಂದರು.
ನನ್ನ ಮನಸ್ಸಿಗೆ ಅತೀ ನೋವುಂಟು ಮಾಡಿದವ ಸಿಎಂ ಸಿದ್ದರಾಮಯ್ಯ
ನನ್ನ ರಾಜಕೀಯ ಜೀವನದಲ್ಲಿ ಯಾರೂ ಸಹ ನನ್ನ ಮನಸ್ಸಿಗೆ ನೋವು ಮಾಡಿರಲಿಲ್ಲ. ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಸ್ಥಾಪನೆಗೆ ಒತ್ತಾಸೆ ಮಾಡಿದ್ದು ನಾನು. ನೂರು ಕೋಟಿ ಅನುದಾನ ವ್ಯವಸ್ಥಿತವಾಗಿ ಖರ್ಚು ಮಾಡಲು ಪ್ಲಾನ್ ಮಾಡಿದ್ದು ನಾನು. ಅಂಬೇಡ್ಕರ್ ಪ್ರತಿಮೆ ಹಾಗೂ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು ನಾನು. ಮೈಸೂರಿನ ನೂತನ ಡಿಸಿ ಕಚೇರಿ ಸಂಕೀರ್ಣಕ್ಕೆ ಪ್ಲಾನ್ ಆಗಿದ್ದು ನಾನು ಕಂದಾಯ ಸಚಿವನಾಗಿದ್ದಾಗ ಎಂದ ಅವರು ಪೀಪಲ್ ಮೆಮೊರಿ ಶಾರ್ಟ್ ಅದಕ್ಕಾಗಿಯೇ ಎಲ್ಲವನ್ನೂ ಮತ್ತೆ ನೆನಪು ಮಾಡುವ ಕಾಲ ಈಗ ಬಂದಿದೆ. ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುವೆ. ನನ್ನ ಮನಸ್ಸಿಗೆ ಹೆಚ್ಚು ನೋವುಂಟು ಮಾಡಿದವ ಸಿಎಂ ಸಿದ್ದರಾಮಯ್ಯ ಎಂದು ಹರಿಹಾಯ್ದರು.
ಗೆಲುವಿನ ಗುಟ್ಟು ಬಿಟ್ಟುಕೊಡುವುದಿಲ್ಲ
ಸಿಎಂ ಸಿದ್ದರಾಮಯ್ಯ ಆಪ್ತ ಮರಿಗೌಡ ಡಿಸಿ ಮೇಲೆ ಹಲ್ಲೆ ಮಾಡಿದ್ದ. ಇದು ಮೈಸೂರು ಮಹಾರಾಜರಿಗಿಂತ ಮಿಗಿಲಾದ ಸಿದ್ದರಾಮಯ್ಯನವರ ಕೊಡುಗೆ ಎಂದು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಿಲ್ಲಿಸಲೇಬೇಕು, ಸಿಎಂ ಅವರನ್ನು ಹೇಗೆ ಸೋಲಿಸಬೇಕೆಂಬುದು ಗುಟ್ಟು. ಅದನ್ನು ಈಗಲೇ ಹೇಳಲಾಗುವುದಿಲ್ಲ. ಅವರನ್ನು ಸೋಲಿಸುವುದು ನಿಶ್ಚಿತ. ಅಹಂಕಾರವೂ ಅವರನ್ನು ಸೋಲಿಸುತ್ತದೆ ಎಂದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !