ಮಳೆಗಾಲದಲ್ಲಿ ಕಾಡುವ ರೋಗ, ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ? ಇಲ್ಲಿವೆ ಟಿಪ್ಸ್
ಮಳೆಗಾಲ ಬಂತೆಂದರೆ ಒಂಥರಾ ಖುಷಿ. ಸುಡುವ ಬಿಸಿಲಿನಿಂದ ಮುಕ್ತಿ ಸಿಕ್ಕರೂ, ಈ ಮಳೆಗಾಲ ತನ್ನ ಜೊತೆಗೆ ಹಲವಾರು ಕಾಯಿಲೆಗಳನ್ನೂ ತರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಆಸ್ಪತ್ರೆಗೆ ಅಲೆಯುವುದು ತಪ್ಪಿದ್ದಲ್ಲ. ಹಾಗಾಗಿ, ಮಳೆಗಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಪ್ರತಿಯೊಬ್ಬರೂ ತಿಳಿಯುವುದು ಬಹಳ ಮುಖ್ಯ. ತುಸು ಎಚ್ಚರ ವಹಿಸಿದರೂ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭ.
ಮಳೆಗಾಲದಲ್ಲಿ ಕಾಡುವ ಸಾಮಾನ್ಯ ಕಾಯಿಲೆಗಳು:
ಶೀತ, ಕೆಮ್ಮು ಮತ್ತು ಜ್ವರ: ವಾತಾವರಣದಲ್ಲಿನ ಹಠಾತ್ ಬದಲಾವಣೆಯಿಂದ ಮತ್ತು ತಂಪು ಗಾಳಿಯಿಂದ ಶೀತ, ಜ್ವರ ವೇಗವಾಗಿ ಹರಡುತ್ತದೆ.
ಸೊಳ್ಳೆಗಳಿಂದ ಬರುವ ಕಾಯಿಲೆಗಳು: ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದರಿಂದ ಡೆಂಗ್ಯೂ, ಮಲೇರಿಯಾ ಮತ್ತು ಚಿಕುನ್‌ಗುನ್ಯಾದಂತಹ ಅಪಾಯಕಾರಿ ರೋಗಗಳೂ ಕಾಡುವ ಸಾಧ್ಯತೆ ಹೆಚ್ಚು. ಶುಚಿತ್ವ ಕಾಪಾಡಿ, ಮನೆ ಸುತ್ತಿ ಮಳೆ ನೀರು ನಿಲ್ಲದಂತೆ ಎಚ್ಚರವಹಿಸಿದರೆ ಅಪಾಯದಿಂದ ತಪ್ಪಿಸಿಕೊಳ್ಳಬಹದು.

ಸೊಳ್ಳೆ ಕಚ್ಚದಂತೆ ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆ ಅಗತ್ಯ.
ನೀರು ಮತ್ತು ಆಹಾರದಿಂದ ಬರುವ ರೋಗಗಳು: ಮಳೆಗಾಲದಲ್ಲಿ ಕುಡಿಯುವ ನೀರು ಕಲುಷಿತಗೊಳ್ಳಬಹುದು. ಇದರಿಂದ ಟೈಫಾಯ್ಡ್, ಕಾಲರಾ ಮತ್ತು ಅತಿಸಾರವೂ (ಭೇದಿ) ಉಂಟಾಗುತ್ತದೆ.
ಏನು ಮಾಡಬಹುದು?
ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ: ನೀರನ್ನು ಚೆನ್ನಾಗಿ ಕುದಿಸಿ ಕುಡಿಯುವುದರಿಂದ, ನೀರಲ್ಲಿರುವ ರೋಗಾಣುಗಳು ನಾಶವಾಗುತ್ತವೆ. ಇದು ಕಾಯಿಲೆಗಳನ್ನು ತಡೆಯುವ ಅತಿ ದೊಡ್ಡ ಅಸ್ತ್ರ. ಕುಡಿಯುವ ನೀರಿನ ಶುಚಿತ್ವ ಕಾಪಾಡಿಕೊಂಡರೆ ಸುಮಾರು ಅರ್ಧದಷ್ಟು ಕಾಯಿಲೆಗಳಿಗೆ ಮುಕ್ತಿ ಹಾಡಬಹುದು.
ಬಿಸಿಬಿಸಿ ಆಹಾರ ಸೇವಿಸಿ: ತಣ್ಣಗಾದ, ಹೊರಗಡೆ ತೆರೆದಿಟ್ಟ ಅಥವಾ ರಸ್ತೆ ಬದಿಯ ಆಹಾರವನ್ನು ಆದಷ್ಟು ದೂರವಿಡಿ. ಮನೆಯಲ್ಲೇ ಮಾಡಿದ ತಾಜಾ ಮತ್ತು ಬಿಸಿ ಆಹಾರವನ್ನು ಮಾತ್ರ ಸೇವಿಸಿ.
ಸೊಳ್ಳೆಗಳಿಂದ ರಕ್ಷಣೆ: ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ತೆಂಗಿನ ಚಿಪ್ಪು, ಹಳೆಯ ಟೈರ್ ಅಥವಾ ಒಡೆದ ಮಡಕೆಗಳಲ್ಲಿ ನೀರು ನಿಂತಿದ್ದರೆ ತಕ್ಷಣ ಸ್ವಚ್ಛಗೊಳಿಸಿ. ಮಲಗುವಾಗ ಕಡ್ಡಾಯವಾಗಿ ಸೊಳ್ಳೆಪರದೆ ಬಳಸಿ. ಸೊಳ್ಳೆ ಮುಕ್ತವಾದ ಮನೆ ನಿಮ್ಮದಾಗಿದ್ದರೆ, ಡೆಂಗ್ಯೂ, ಮಲೇರಿಯಾದಂಥೆ ಕಾಯಿಲೆಗಳ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ: ನಿಮ್ಮ ದೈನಂದಿನ ಊಟದಲ್ಲಿ ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು ಮತ್ತು ಅರಿಶಿನವನ್ನು ಹೆಚ್ಚಾಗಿ ಬಳಸಿ. ನಿಂಬೆಹಣ್ಣು, ಕಿತ್ತಳೆಯಂತಹ ಸಿ ವಿಟಮಿನ್ ಹೆಚ್ಚಿರುವ ಹಣ್ಣುಗಳನ್ನು ತಿನ್ನುವುದರಿಂದ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ದೇಹಕ್ಕೆ ಸಿಗುತ್ತದೆ.
ವೈಯಕ್ತಿಕ ಸ್ವಚ್ಛತೆ: ಮಳೆಯಲ್ಲಿ ನೆನೆದು ಮನೆಗೆ ಬಂದ ತಕ್ಷಣ ಬಿಸಿ ನೀರಿನಿಂದ ಸ್ನಾನ ಮಾಡಿ. ಊಟಕ್ಕೂ ಮುನ್ನ ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ.
ನೆನಪಿರಲಿ: ಜ್ವರ, ವಿಪರೀತ ಸುಸ್ತು, ತಲೆನೋವು ಅಥವಾ ಮೈಕೈ ನೋವು ಎರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ, ಮನೆಯಲ್ಲೇ ಮದ್ದು ಮಾಡುತ್ತಾ ಕೂರಬೇಡಿ. ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ.
ಸಣ್ಣ ಎಚ್ಚರಿಕೆ ನಮ್ಮನ್ನು ದೊಡ್ಡ ಅಪಾಯದಿಂದ ಪಾರು ಮಾಡುತ್ತದೆ. ಮುನ್ನೆಚ್ಚರಿಕೆ ವಹಿಸಿ, ಈ ಮಳೆಗಾಲವನ್ನು ಆರೋಗ್ಯದಿಂದ ಆನಂದಿಸಿ! ತಿಳಿಯುವುದು ಬಹಳ ಮುಖ್ಯ. ಒಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ನಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ತುಸು ಬದಲಾಯಿಸಿಕೊಂಡು, ಆಯಾ ಕಾಲಕ್ಕೆ ತಕ್ಕಂತೆ ಉಡುಗೆ ತೊಡುಗೆ ತೊಟ್ಟರೆ ಆರೋಗ್ಯ ಚೆನ್ನಾಗಿರುವುದರಲ್ಲಿ ಅನುಮಾನವೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕಾಲಕ್ಕೆ ತಕ್ಕಂತೆ ಸಿಗುವ ಹಣ್ಣು, ತರಕಾರಿಗಳನ್ನು ಆದಷ್ಟು ಸೇವಿಸುವುದ ಮಿಸ್ ಮಾಡಬಾರದು.














Click it and Unblock the Notifications