ಮೈಸೂರು ತಾಯಿ-ಮಗನ ಪ್ರೀತಿಗೆ ಫಿದಾ ಆಗಿ ಕಾರು ಕೊಡಲು ಮುಂದಾದ ಆನಂದ್ ಮಹೀಂದ್ರಾ
ಮೈಸೂರು, ಅಕ್ಟೋಬರ್ 23: ಉದ್ಯಮದ ಜೊತೆ ಜೊತೆಯಲ್ಲೇ ಸದಾ ಒಂದಿಲ್ಲೊಂದು ಮಾನವೀಯ ಕಾರ್ಯಗಳಿಂದ ಗುರುತಿಸಿಕೊಳ್ಳುವ ಮಹೀಂದ್ರಾ ಕಂಪನಿಯ ಮುಖ್ಯಸ್ಥ, ಉದ್ಯಮಿ ಆನಂದ್ ಮಹೀಂದ್ರಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಅಮ್ಮ-ಮಗನ ಪ್ರೀತಿಯ ಕುರಿತಂತೆ ಅವರು ಮಾಡಿರುವ ಹೊಸ ಟ್ವೀಟ್ ಇದೀಗ ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಮೈಸೂರಿನ ದಕ್ಷಿಣಮೂರ್ತಿ ಕೃಷ್ಣ ಕುಮಾರ್ ಅವರಿಗೆ ತಾಯಿಯ ಮೇಲೆ ಎಲ್ಲಿಲ್ಲದ ಪ್ರೀತಿ. ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಅವರು, ತಮ್ಮ ತಾಯಿಗೋಸ್ಕರ ಕೆಲಸವನ್ನೇ ಬಿಟ್ಟು ದೇಶ ಸುತ್ತಲು ಮುಂದಾಗಿದ್ದಾರೆ. ಮನೆಯಿಂದ ಒಂದು ಹೆಜ್ಜೆಯನ್ನೂ ಹೊರಗೆ ಹಾಕದ ಮುಗ್ಧ ತಾಯಿಗೆ ಇಡೀ ದೇಶವನ್ನೂ ತೋರಿಸಬೇಕು ಎಂಬುದು ಅವರ ಆಸೆ. ಅದಕ್ಕೆಂದೇ ತಮ್ಮ ಸ್ಕೂಟರ್ ನಲ್ಲಿ ಈಗಾಗಲೇ 48100 ಕಿ.ಮೀ. ಪ್ರಯಾಣ ಮಾಡಿ, ತಮ್ಮ ತಾಯಿಗೆ ಹಲವು ಸ್ಥಳಗಳ ಪರಿಚಯ ಮಾಡಿಸಿದ್ದಾರೆ.
ಈ ಸುದ್ದಿಯನ್ನು ಮನೋಜ್ ಕುಮಾರ್ ಎಂಬುವವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ, ಆ ವ್ಯಕ್ತಿಗೆ ಒಂದು ಕಾರು ಉಡುಗೊರೆ ನೀಡಲು ಮುಂದಾಗಿದ್ದಾರೆ.
|
ಆನಂದ್ ಮಹೀಂದ್ರಾ ಪ್ರತಿಕ್ರಿಯೆ
"ಸುಂದರ ಕಥೆ. ಈ ಕಥೆಯನ್ನು ಶೇರ್ ಮಾಡಿದ್ದಕ್ಕೆ ಧನ್ಯವಾದ. ಅವರ ತಾಯಿ ಪ್ರೀತಿ ಮತ್ತು ದೇಶ ಪ್ರೀತಿಗೆ ನನ್ನ ಸಲಾಂ. ನಿಮಗ್ಯಾರಿಗಾದರೂ ಅವರನ್ನು ಸಂಪರ್ಕಿಸುವುದಕ್ಕೆ ಸಾಧ್ಯವಾದರೆ ಹೇಳಿ. ನಾನು ಅವರಿಗೆ ಮಹೀಂದ್ರಾ ಕೆಯುವಿ 100 ಎನ್ ಎಕ್ಸ್ ಟಿಯನ್ನು ವೈಯಕ್ತಿಕವಾಗಿ ಉಡುಗೊರೆ ನೀಡುತ್ತೇನೆ. ಅವರು ತಮ್ಮ ಮುಂದಿನ ಪ್ರಯಾಣವನ್ನು ಕಾರಿನಲ್ಲೇ ಮಾಡಬಹುದು" ಎಂದಿದ್ದಾರೆ.

ಅವರು ಉಡುಗೊರೆ ಸ್ವೀಕರಿಸಲ್ಲ!
"ಬೇಸರದ ವಿಷಯ ಅಂದ್ರೆ ಅವರು ಉಡುಗೊರೆ ಅಥವಾ ಹಣ ಸ್ವೀಕರಿಸುವುದಿಲ್ಲ. ದೇಣಿಗೆ ಎಂಬಂತೆ ಅವರಿಗೆ ನೀಡಿದರೆ ತೆಗೆದುಕೊಳ್ಳಬಹುದು. ಅದೂ ಅನುಮಾನ" ಎಂದು ಆನಂದ್ ಮಹೀಂದ್ರಾ ಟ್ವೀಟ್ ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ನಿಮಗೊಂದು ಸಲಾಂ
"ನೀವು ನಿಜಕ್ಕೂ ಗ್ರೇಟ್ ಸರ್. ಸಾಕಷ್ಟು ಕತುಣಾಮಯಿಯಾಗಿ ಜನರ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತರುವಲ್ಲಿ ಶ್ರಮಿಸುಸತ್ತಿದ್ದೀರಿ. ನಿಮಗೆ ಧನ್ಯವಾದ" ಎಂದು ಅಂಜಲಿ ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಉದ್ಯಮಿಗಳು ಮಾನವೀಯ ಮನಸ್ಸಿನವರಾಗಿರಲ್ಲ್!
"ನಿಜಕ್ಕೂ ಬಹಳ ಉತ್ತಮ ಕೆಲಸ ಸರ್. ಉದ್ಯಮಿಗಳು ಮಾನವೀಯ ಮನಸ್ಸುಳ್ಳವರೂ ಆಗಿರಲಾರರು. ನನಗೆ ನೆನಪಿದೆ, ನೀವು ಕೇರಳದ ಒಬ್ಬ ಅಜ್ಜಿಗೆ ಎಲ್ ಪಿಜಿ ಸ್ಟೋವ್ ನೀಡಿದ್ದು. ಇಂಥ ಉತ್ತಮ ಕೆಲಸಕ್ಕಾಗಿ ನಿಮಗೆ ಅಭಿನಂದನೆಗಳು" ಎಂದು ಭಾಸ್ಕರ್ ಎಂಬುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications