ದಸರಾ : ಬೆಂಗಳೂರು-ಮೈಸೂರು ಸಂಪರ್ಕಿಸಲಿದೆ ಅಲಯನ್ಸ್ ಏರ್
ಮೈಸೂರು, ಅಕ್ಟೋಬರ್ 04 : ಮೈಸೂರು ದಸರಾ ಹಿನ್ನಲೆಯಲ್ಲಿ ಬೆಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭವಾಗಲಿದೆ. ಅಕ್ಟೋಬರ್ 10ರಿಂದ ಹತ್ತು ದಿನಗಳ ಕಾಲ ಮಾತ್ರ ವಿಮಾನ ಸೇವೆ ಒದಗಿಸಲು ಅಲಯನ್ಸ್ ಏರ್ ಮುಂದಾಗಿದೆ.
ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ಅಕ್ಟೋಬರ್ 10 ರಿಂದ 20ರ ತನಕ ಬೆಂಗಳೂರು-ಮೈಸೂರು ನಡುವೆ ವಿಮಾನ ಹಾರಾಟವನ್ನು ನಡೆಸಲಿದೆ. ದಸರಾದಲ್ಲಿ ಪಾಲ್ಗೊಳ್ಳಲು ಪ್ರವಾಸಿಗರಿಗೆ ಸಹಾಯಕವಾಗಲಿ ಎಂದು ವಿಮಾನ ಹಾರಾಟ ಆರಂಭಿಸಲಾಗುತ್ತಿದೆ.
70 ಸೀಟುಗಳ ಎಟಿಆರ್-72 ವಿಮಾನ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ. ಸದ್ಯದ ವೇಳಾಪಟ್ಟಿಯಂತೆ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಡುವ ವಿಮಾನ 3.30ಕ್ಕೆ ಮೈಸೂರಿಗೆ ತಲುಪಲಿದೆ.

ಮೈಸೂರಿನಿಂದ ಮಧ್ಯಾಹ್ನ 4 ಗಂಟೆಗೆ ಹೊರಡಲಿರುವ ವಿಮಾನ 4.30ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. ಬೆಂಗಳೂರು-ಮೈಸೂರು ನಡುವೆ ಎಷ್ಟು ಪ್ರಯಾಣ ದರ ನಿಗದಿ ಮಾಡಬೇಕು ಎಂದು ಸಂಸ್ಥೆ ಇನ್ನೂ ನಿರ್ಧರಿಸಿಲ್ಲ.
ಟ್ರೂಜೆಟ್ ಸಂಸ್ಥೆ ಹೈದರಾಬಾದ್-ಮೈಸೂರು-ಚೆನ್ನೈ ನಡುವೆ ಕಳೆದ ವರ್ಷದ ದಸರಾದಿಂದ ಸೇವೆ ಒದಗಿಸುತ್ತಿದೆ. ಈ ಸೇವೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರದ ರಜೆ ದಿನಗಳಲ್ಲಿ ವಿಮಾನ ಸಂಪೂರ್ಣವಾಗಿ ಭರ್ತಿ ಆಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications