Bengaluru-Mysuru Highway: ಟ್ರಾಫಿಕ್ ರೂಲ್ಸ್ ಉಲ್ಲಂಘನೆ..ಬರೋಬ್ಬರಿ 9 ಕೋಟಿ ರೂ ದಂಡ ಸಂಗ್ರಹ
ಮೈಸೂರು, ಜುಲೈ 03: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಕಾರಣಕ್ಕೆ ಸಂಚಾರಿ ನಿಯಮಗಳನ್ನು ಕಠಿಣಗೊಳಿಸಲಾಗಿತ್ತು. ಸ್ಟೀಡ್ ಲಿಮಿಟ್ ಸೇರಿದಂತೆ ಇತರ ಟ್ರಾಫಿಕ್ ರೂಲ್ಸ್‌ಗಳನ್ನು ಹೆಚ್ಚಿಸಲಾಗಿದ್ದು, ಸಂಚಾರಿ ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಯಿಂದ ಒಂದೇ ತಿಂಗಳಲ್ಲಿ ಸರಿಸುಮಾರು 9 ಕೋಟಿ ರೂ ದಂಡ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ

ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ (ಎನ್.ಹೆಚ್. 275) ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಂದ ಕೇವಲ ಒಂದೇ ತಿಂಗಳಲ್ಲಿ 8.99 ಕೋಟಿ ರೂಪಾಯಿ ದಂಡವನ್ನು ಸಂಚಾರಿ ಪೊಲೀಸ್ ಇಲಾಖೆ ಸಂಗ್ರಹಿಸಿದೆ. ನಿಯಮ ಮೀರಿದ ಸವಾರರು ಹಾಗೂ ಚಾಲಕರಿಗೆ ಸಾವಿರಾರು ರೂಪಾಯಿ ದಂಡ ಬಿದ್ದಿದ್ದು, ಸರಿಸುಮಾರು 9 ಕೋಟಿ ರೂ ದಂಡ ಸಂಗ್ರಹವಾಗಿದೆ.
ಐ.ಟಿ.ಎಂ.ಎಸ್ ಕ್ಯಾಮರಾದಲ್ಲಿ ನಿಯಮ ಉಲ್ಲಂಘನೆ ಪರಿಶೀಲನೆಯಲ್ಲಿ ನಿಯಮ ಉಲ್ಲಂಘನೆ ಸ್ಥಳ, ದಿನಾಂಕ, ಸಮಯ ಎಲ್ಲವನ್ನೂ ವಾಹನ ನೋಂದಣಿಯ ಮೊಬೈಲ್ ಸಂಖ್ಯೆಗೆ ರವಾನೆಯಾಗಲಿದ್ದು, 119 ಕಿಲೋ ಮೀಟರ್ ಉದ್ದಕ್ಕೂ 60 ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ಈ ಮೂಲಕ ಒಂದೇ ತಿಂಗಳಲ್ಲಿ ಪೊಲೀಸರು ದಾಖಲೆಯ ದಂಡ ವಿಧಿಸಿದ್ದಾರೆ.
ಇನ್ನು ಸಂಚಾರ ನಿಯಮ ಉಲ್ಲಂಘನೆ ತಡೆಗೆ ಅಳವಡಿಸಿರುವ ಈ ಕ್ಯಾಮೆರಾಗಳಿಂದ ಸಂಚಾರ ಉಲ್ಲಂಘನೆ ಕುರಿತು ಮೊಬೈಲ್‌ಗೂ ಸಂದೇಶ ಬರಲಿದ್ದು ನಿಯಮ ಉಲ್ಲಂಘಿಸಿದ ಚಾಲಕನ ಮನೆಗೆ ನೋಟಿಸ್ ಕೂಡ ರವಾನೆಯಾಗಲಿದೆ. ಹೀಗಾಗಿ ವಾಹನ ಸವಾರರು ಸಂಚಾರಿ ನಿಮಯಗಳನ್ನು ಪಾಲಿಸಿ ದಂಡ ಹಾಗೂ ಅಪಘಾತಗಳಿಂದ ದೂರವಿರಿ ಎನ್ನುವುದು ಸಂಚಾರಿ ಪೊಲೀಸರ ಕಳಕಳಿಯಾಗಿದೆ.












Click it and Unblock the Notifications