'ಶುಭಾರಂಭ'ದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 116 ಜೋಡಿಗಳು
ಮೈಸೂರು, ನವೆಂಬರ್ 09 : ಸರಳವಾಗಿ ವಿವಾಹದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತದ ವತಿಯಿಂದ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ಸನ್ನಿಧಿಯಲ್ಲಿ ಭಾನುವಾರ 'ಶುಭಾರಂಭ' ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 116 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ಶ್ರೀ ಶ್ರೀಕಂಠೇಶ್ವರ ದೇಗುಲದ ಸನ್ನಿಧಿಯಲ್ಲಿರುವ ಕಲಾ ಮಂದಿರದಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಜೋಡಿಗಳಿಗೆ ಮಾಂಗಲ್ಯವನ್ನು ವಿತರಣೆ ಮಾಡಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹಾರೈಸಿದರು. [ಜ್ಯೋತಿಯ ಬಾಳು ಬೆಳಗಿದ ಗಿರೀಶ್ ಕುಮಾರ್]

ಮೈಸೂರು ಜಿಲ್ಲೆ ಮತ್ತು ಇತರೆ ಕಡೆಗಳಿಂದ ಬಂದಿದ್ದ ಜೋಡಿಗಳು ಸೇರಿದಂತೆ 116 ಜೋಡಿಗಳು 'ಶುಭಾರಂಭ' ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವು. ವಿವಾಹ ಬಂಧನಕ್ಕೆ ಒಳಗಾದ ಜೋಡಿಗಳ ಪೈಕಿ ಪರಿಶಿಷ್ಟ ಜಾತಿ 60, ಪರಿಶಿಷ್ಟ ಪಂಗಡ 19 ಮತ್ತು ಇತರೆ 31 ಜೋಡಿಗಳಿದ್ದವು. [ಶೇ.90ರಷ್ಟು ಮದುವೆ ಛತ್ರಗಳು ಪರವಾನಿಗೆ ಪಡೆದಿಲ್ಲವಂತೆ!]
'ಶುಭಾರಂಭ' ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರಿಗೆ 3 ಗ್ರಾಂ ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಸೀರೆ, ಬಾಸಿಂಗ ನೀಡಲಾಯಿತು. ವರನಿಗೆ ಶರ್ಟ್, ಪಂಚೆ, ಬಾಸಿಂಗ, ಪೇಟ ವಿತರಣೆ ಮಾಡಲಾಯಿತು. [ನೀರಾವರಿ ಜಾಗೃತಿಗಾಗಿ ಯುವಶಕ್ತಿಯ ಹೊಸ ಪ್ರಯೋಗ]
ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶ್ರೀನಿವಾಸ ಪ್ರಸಾದ್ ಅವರು, 'ಈ ರೀತಿಯ ಸಾಮೂಹಿಕ ವಿವಾಹ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಯಬೇಕು. ಪ್ರತಿ ಜಿಲ್ಲೆಯ ಜಿಲ್ಲಾಡಳಿತ ಶುಭಾರಂಭ ವಿವಾಹವನ್ನು ಮಾಡಲು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು' ಎಂದು ಹೇಳಿದರು.

'ಆಡಂಬರದ ಮದುವೆ ಕೊನೆಯಾಗಬೇಕು. ಇಂತಹ ಸರಳ ಮದುವೆಗಳು ಮುಂದಿನ ದಿನಗಳಲ್ಲಿ ಹೆಚ್ಚು ನಡೆಯುವ ಮೂಲಕ ಬಡವರಿಗೆ, ದುರ್ಬಲರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗಬೇಕು. ಇಂತಹ ವಿವಾಹಗಳಿಂದ ಸುಂದರ ಬದುಕನ್ನು ಕಂಡುಕೊಳ್ಳಬಹುದು' ಎಂದು ಸಚಿವರು ತಿಳಿಸಿದರು.
ಗಮನ ಸೆಳೆದ ಡಿಸಿ : ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನ ನಂಜನಗೂಡಿನಲ್ಲಿ ಶುಭಾರಂಭಕ್ಕೆ ಚಾಲನೆ ದೊರೆತಿದ್ದು, ಜನಪ್ರತಿನಿಧಿಗಳ, ಅಧಿಕಾರಿಗಳ ಸಹಕಾರ ಪಡೆದು ಸರ್ಕಾರದಿಂದ ಹಣ ಖರ್ಚಾಗದಂತೆ 116 ಜೋಡಿಗಳಿಗೆ ವಿವಾಹ ಮಾಡಿಸುವಲ್ಲಿ ಜಿಲ್ಲಾಧಿಕಾರಿ ಡಿ.ಶಿಖಾ ಅವರ ಶ್ರಮ ಶ್ಲಾಘನೀಯವಾಗಿದೆ.












Click it and Unblock the Notifications