ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
ಮುಂಬೈ, ಮೇ 18: ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿಎಂ ಜೊತೆ ಇತರೆ 8 ಸದ್ಯಸರು ಇಂದೇ ಪ್ರಮಾಣ ವಚನ ಸ್ವೀಕರಿಸಿ ಮೇಲ್ಮನೆಗೆ ಅವಕಾಶ ಪಡೆದುಕೊಂಡಿದ್ದಾರೆ.
ರಾಜ್ಯ ವಿಧಾನಸಭೆಯ ಕೇಂದ್ರ ಸಭಾಂಗಣದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಠಾಕ್ರೆ ಅವರ ಪತ್ನಿ ರಶ್ಮಿ ಮತ್ತು ಮಗ ಆದಿತ್ಯ ಭಾಗಿಯಾಗಿದ್ದರು. ಉದ್ಧವ್ ಠಾಕ್ರೆ ಸೇರಿ ಒಂಬತ್ತು ಸದಸ್ಯರು ವಿಧಾನ ಪರಿಷತ್ ಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಕಳೆದ ಏಪ್ರಿಲ್ 24ರಂದು ತೆರವಾಗಿದ್ದ ವಿಧಾನ ಪರಿಷತ್‌ನ ಒಂಬತ್ತು ಸ್ಥಾನಗಳಿಗೆ ಮೇ 21ರಂದು ಚುನಾವಣೆ ನಿಗದಿಯಾಗಿತ್ತು. 9 ಸ್ಥಾನಗಳಿಗೆ 14 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಂತರ ತಾಂತ್ರಿಕ ಕಾರಣದಿಂದ ಐದು ನಾಮಪತ್ರ ತಿರಸ್ಕರಿಸಲಾಗಿತ್ತು.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಸಿಎಂ ಆದ 6 ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿತ್ತು.
ಹಾಗಾಗಿ, ಶಿವಸೇನೆ ಪಕ್ಷವೂ ಉದ್ಧವ್ ಠಾಕ್ರೆ ಮತ್ತು ವಿಧಾನ ಪರಿಷತ್ತಿನ ಉಪ ಸಭಾಧ್ಯಕ್ಷೆ ನೀಲಂ ಗೋರೆ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿದೆ. ಎನ್‌ಸಿಪಿ ಪಕ್ಷವೂ ಅಮೋಲ್ ಮಿಟ್ಕರಿ ಮತ್ತು ಶಶಿಕಾಂತ್ ಶಿಂಧೆ ಅವರನ್ನು ನೇಮಕ ಮಾಡಿದೆ. ಕಾಂಗ್ರೆಸ್ ರಾಜೇಶ್ ರಾಥೋಡ್ ಅವರನ್ನು ಆಯ್ಕೆ ಮಾಡಿದೆ.












Click it and Unblock the Notifications