ನಕಲಿ ಟಿಆರ್‌ಪಿ ಹಗರಣ: ಬಾರ್ಕ್ ಮಾಜಿ ಸಿಇಒ ಬಂಧನ
ಮುಂಬೈ, ಡಿಸೆಂಬರ್ 24: ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್‌ನ (ಬಾರ್ಕ್) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರನ್ನು ಮುಂಬೈನ ಅಪರಾಧ ವಿಭಾಗದ ಪೊಲೀಸರು ಗುರುವಾರ ಬಂಧಿಸಿದ್ದಾರೆ. ನಕಲಿ ಟಿಆರ್‌ಪಿ ಹಗರಣದ ಪ್ರಕರಣದಲ್ಲಿ ಪುಣೆ ಜಿಲ್ಲೆಯಿಂದ ಅವರನ್ನು ಬಂಧಿಸಲಾಗಿದೆ.
ಕೆಲವು ಟಿವಿ ಚಾನೆಲ್‌ಗಳಲ್ಲಿ ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ನೀಡುವ ಮೂಲಕ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಥೋ ದಾಸ್‌ಗುಪ್ತಾ ಅವರು ಬಂಧನಕ್ಕೆ ಒಳಗಾದ 15 ವ್ಯಕ್ತಿಯಾಗಿದ್ದಾರೆ.
ಪುಣೆ ಜಿಲ್ಲೆಯ ರಾಜಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಅಪರಾಧ ಗುಪ್ತಚರ ಘಟಕದ (ಸಿಐಯು) ಪೊಲೀಸರು ಪಾರ್ಥೋ ಅವರನ್ನು ಬಂಧಿಸಿದ್ದು, ಮುಂಬೈನ ನ್ಯಾಯಾಲಯವೊಂದಕ್ಕೆ ಶುಕ್ರವಾರ ಹಾಜರುಪಡಿಸಲಿದೆ. ಇದಕ್ಕೂ ಮುನ್ನ ಸಿಐಯು ಪೊಲೀಸರು ಬಾರ್ಕ್‌ನ ಮಾಜಿ ಮುಖ್ಯ ಕಾರ್ಯಚರಣಾ ಅಧಿಕಾರಿ (ಸಿಒಒ) ರಮಿಲ್ ರಾಮಗರಿಯಾ ಹಾಗೂ ಇತರರನ್ನು ಬಂಧಿಸಿದ್ದರು.

ಕೆಲವು ಚಾನೆಲ್‌ಗಳು ಟಿಆರ್‌ಪಿ ವಂಚನೆಯಲ್ಲಿ ತೊಡಗಿವೆ ಎಂದು ರೇಟಿಂಗ್ ಸಂಸ್ಥೆ ಬಾರ್ಕ್ ದೂರು ಸಲ್ಲಿಸಿದ ಬಳಿಕ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ವೀಕ್ಷಕರ ಸಂಖ್ಯೆಯನ್ನು ಗುರುತಿಸಲು ಟಿಆರ್‌ಪಿ ಮಾದರಿಯನ್ನು ಬಳಸಲಾಗುತ್ತದೆ. ಟಿವಿ ವಾಹಿನಿಗಳು ಜಾಹೀರಾತುದಾರರನ್ನು ಸೆಳೆಯಲು ಟಿಆರ್‌ಪಿ ಮಹತ್ವದ್ದಾಗಿದೆ.
ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿ ಕೂಡ ತನ್ನ ಟಿಆರ್‌ಪಿಯನ್ನು ಹೆಚ್ಚಾಗಿ ತೋರಿಸಲು ಈ ಜಾಲದಲ್ಲಿ ಭಾಗಿಯಾಗಿತ್ತು ಎಂದು ಆರೋಪಿಸಲಾಗಿದೆ. ಆದರೆ ಇದನ್ನು ನಿರಾಕರಿಸಿರುವ ವಾಹಿನಿ, ಮುಂಬೈ ಪೊಲೀಸರು ಸುಳ್ಳು ಆರೋಪ ಹೊರಿಸಿದ್ದು, ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಸಂಚುರೂಪಿಸಿದ್ದಾರೆ ಎಂದು ಆರೋಪಿಸಿದೆ.












Click it and Unblock the Notifications