ಶಿರಡಿ,ಅಜಂತಾಗೆ ಅತೃಪ್ತ ಶಾಸಕರ ಪ್ರವಾಸ, ಖುಷಿ: ಇಲ್ಲಿ ಎಚ್‌ಡಿಕೆಗೆ ತಲೆಬಿಸಿ
ಮುಂಬೈ, ಜುಲೈ 13: ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿರಡಿಯಲ್ಲಿ ಸಾಯಿಬಾಬಾ ದರ್ಶನ ಪಡೆದು ಖುಷಿಯಾಗಿದ್ದರೆ, ಇಲ್ಲಿ ಎಚ್‌ಡಿ ಕುಮಾರಸ್ವಾಮಿ ಬಹುಮತ ಸಾಬೀತು ಮಾಡುವುದು ಹೇಗೆ ಎನ್ನುವ ತಲೆಬಿಸಿ ಮುಂದುವರೆದಿದೆ.
ಎಚ್‌ನಾಗೇಶ್ ಹಾಗೂ ಆರ್ ಶಂಕರ್ ತಮಗೆ ವಿರೋಧ ಪಕ್ಷದವರ ಪಕ್ಕ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿ ಎಂದು ಸ್ಪೀಕರ್ ರಮೇಶ್ ಕುಮಾರ್‌ಗೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಎಂಟಿಬಿ ನಾಗರಾಜ್ ಒಮ್ಮೊಮ್ಮೆ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವಂತೆ ಕಂಡರೂ ಕೂಡ ತಮ್ಮ ಮೊದಲ ನಿರ್ಧಾರದಂತೆಯೇ ನಡೆದುಕೊಳ್ಳುವಂತೆ ಕಾಣುತ್ತಿದೆ.
ಇಂದು ಬೆಳಗ್ಗೆ ಅತೃಪ್ತ ಶಾಸಕರು ಮುಂಬೈ ವಿಮಾನ ನಿಲ್ದಾನದಿಂದ 18 ಆಸನದ ವಿಶೇಷ ವಿಮಾನದದಲ್ಲಿ ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದಿದ್ದಾರೆ.

ಶಿರಡಿ ನಂತರ , ಶನಿಸಿಂಗ್ಣಾಪುರ, ಅಜಂತಾ ಎಲ್ಲೋರಾ ಗುಹೆ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಿ ಬಳಿಕ ಹಿಂತಿರುಗಲಿದ್ದಾರೆ.
ಇಂದು ರಾತ್ರಿ ಔರಂಗಾಬಾದ್ನಲ್ಲಿ ವಾಸ್ತವ್ಯ ಹೂಡಲಿದ್ದು, ನಾಳೆ ನಾಶಿಕ್ಗೆ ತೆರಳಿ ಅಲ್ಲಿಂದ ತ್ರಯಂಬಕೇಶ್ವರನ ದರ್ಶನ ಪಡೆದು ಮರಳಿ ಮುಂಬೈಗೆ ವಾಪಸಾಗಲಿದ್ದಾರೆ.
ರಾಜ್ಯ ರಾಜಕೀಯದಲ್ಲಿನ ಬಿಕ್ಕಟ್ಟಿಗೆ ಕಾರಣವಾಗಿರುವ ಕಾಂಗ್ರೆಸ್ - ಜೆಡಿಎಸ್‌ನ ಅತೃಪ್ತ ಶಾಸಕರು ಮುಂಬೈ ಹೋಟೆಲ್ನಲ್ಲಿ ತಂಗುವ ಮೂಲಕ ಮೈತ್ರಿ ಸರ್ಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದ್ದರು. ಇದೀಗ ವೀಕೆಂಡ್ ಮೂಡ್‌ನಲ್ಲಿರುವ ಅತೃಪ್ತ ಶಾಸಕರು ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ.












Click it and Unblock the Notifications