Breaking; ನವನೀತ್ ಕೌರ್, ರವಿ ರಾಣಾ ದಂಪತಿಗೆ ಜಾಮೀನು ಭಾಗ್ಯವಿಲ್ಲ
ಮುಂಬೈ, ಏಪ್ರಿಲ್ 26; ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ, ರವಿ ರಾಣಾ ದಂಪತಿಗೆ ಮಂಗಳವಾರ ಜಾಮೀನು ಸಿಕ್ಕಿಲ್ಲ. 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ದಂಪತಿಗಳು ಏಪ್ರಿಲ್ 29ರ ತನಕ ಜೈಲಿನಲ್ಲೇ ಇರಬೇಕಿದೆ.
ಮಂಗಳವಾರ ಮುಂಬೈ ಸೆಷನ್ಸ್ ಕೋರ್ಟ್ ನವನೀತ್ ರಾಣಾ, ಆಕೆಯ ಪತಿ ರವಿ ರಾಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ 'ಮಾತೋಶ್ರೀ' ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ನವನೀತ್ ರಾಣಾ, ಆಕೆಯ ಪತಿ ರವಿ ರಾಣಾಗೆ ಪೊಲೀಸರು ನೋಟಿಸ್ ನೀಡಿದ್ದರು. ಶನಿವಾರ ರಾತ್ರಿ ದಂಪತಿಗಳನ್ನು ಬಂಧಿಸಿದ್ದರು.

ಭಾನುವಾರ ಬಾಂದ್ರಾದ ರಜೆ ಕಾಲದ ವಿಶೇಷ ನ್ಯಾಯಾಲಯ ದಂಪತಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ದಂಪತಿಗಳು ಮುಂಬೈ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು.
ಕೋರ್ಟ್ ಆದೇಶದ ಬಳಿಕ ಮಾತನಾಡಿದ ನವನೀತ್ ಕೌರ್ ಪರ ವಕೀಲ ರಿಜ್ವಾನ್, "ಏಪ್ರಿಲ್ 29ಕ್ಕೆ ಅರ್ಜಿಯ ವಿಚಾರಣೆ ನಡೆಯಲಿದೆ. ಅಂದೇ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. ನ್ಯಾಯಾಲಯದ ತೀರ್ಮಾನ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಹೇಳಿದರು.
ನವನೀತ್ ರಾಣಾ, ಆಕೆಯ ಪತಿ ರವಿ ರಾಣಾ ಈ ಪ್ರಕರಣದಲ್ಲಿ ಪೊಲೀಸರು ದಾಖಲು ಮಾಡಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಸೋಮವಾರ ಕೋರ್ಟ್ ವಜಾಗೊಳಿಸಿತ್ತು.












Click it and Unblock the Notifications