ಅಮಿತ್ ಶಾ ಅಶ್ವಮೇಧ ಕುದುರೆ ಮುಂದಿನ ಓಟ ಎತ್ತ?
ಮುಂಬೈ, ಮೇ 20: ನರೇಂದ್ರ ಮೋದಿ ಪ್ರಧಾನಿಯಾಗುವಲ್ಲಿ ಪ್ರಧಾನ ಕೊಡುಗೆ ಸಲ್ಲಿಸಿದ ಬಳಿಕ ಮೋದಿ ಕಟ್ಟಾಳು ಅಮಿತ್ ಶಾ ಅವರ ಅಶ್ವಮೇಧ ಕುದುರೆಯ ಮುಂದಿನ ಓಟ ಎತ್ತ? ಎಂಬ ಕುತೂಹಲದ ಪ್ರಶ್ನೆ ಎಲ್ಲೆಡೆ ಚರ್ಚೆಗೆ ಬಂದಿದೆ.
ಉತ್ತರಪ್ರದೇಶ ಲೋಕಸಭಾ ಚುನಾವಣೆ ಫಲಿತಾಂಶ ಬಹಿರಂಗವಾದಾಗ 'ಎಸ್ಪಿ/ಬಿಎಸ್ಪಿ ನಿರ್ನಾಮವಾಗಿದೆ. ಕಾಂಗ್ರೆಸ್ಸಿಗೆ ಏಳೆಂಟು ಸೀಟು ಸಿಕ್ಕಿದೆಯಲ್ಲಾ? ನಿಮ್ಮ ಪ್ರತಿಕ್ರಿಯೆ ಏನು?' ಎಂದು ಸುದ್ದಿಗಾರರು ಅಮಿತ್ ಶಾಗೆ (Amitbhai Anilchandra Shah) ಕೇಳಿದಾಗ ತಮ್ಮ ಪೊಗದಸ್ತಾದ ಗಡ್ಡದೊಳಗಿಂದ ಗೆಲುವಿನ ನಗೆ ನಕ್ಕ ಅಮಿತ್ 'ಓ ಅದಾ! ಕಾಂಗ್ರೆಸ್ಸಿಗೆ ಇರಲಿ ಅಂತ ನಾನೇ ಆ ಸೀಟುಗಳನ್ನು ಬಿಟ್ಟುಕೊಟ್ಟೆ. ಅದರಲ್ಲಿ ಎರಡು ಅಮ್ಮ ಮಗನಿಗೂ ಸಲ್ಲುತ್ತದೆ' ಎಂದಿದ್ದರು.
ಅಂದರೆ ಅವರ ಆತ್ಮವಿಶ್ವಾಸ/ ಸಾಮರ್ಥ್ಯದ ಮಾತುಗಳು ಹಾಗಿದ್ದವು. ಅಂದಹಾಗೆ, ಶಾ ಅವರ ಅಮಿತ ಗೆಲುವಿಗೆ ಕಾರಣಕರ್ತರಾದವರೂ ಕೆಲವರಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಸಾರಥ್ಯವಹಿಸಿರುವ ಶಿವಪ್ರತಾಪ್ ಶುಕ್ಲಾ, ಡಾ. ಲಕ್ಷ್ಮಿಕಾಂತ್ ಬಾಜ್ಪಯಿ, ಸುನಿಲ್ ಬನ್ಸಾಲ್, ರತ್ನಾಕರ್ ಅವರುಗಳು ಗಣನೀಯ ಕೊಡುಗೆ ಸಲ್ಲಿಸಿದ್ದಾರೆ ಎಂಬುದು ಗಮನಾರ್ಹ. ಇವರೆಲ್ಲಾ ಅಮಿತ್ ಶಾಗೆ ಸಾಥ್ ನೀಡಿದ್ದಾರೆ.
ಸುಸ್ಥಿರ ಕುಟುಂಬದಲ್ಲಿ ಜನಿಸಿದ 49 ವರ್ಷ ವಯಸ್ಸಿನ ಅಮಿತ್ ಶಾ biochemistry ಪದವೀಧರ. ಆರಂಭದಲ್ಲಿ ಷೇರು ದಲ್ಲಾಳಿಯಾಗಿದ್ದವರು. ಅನಂತರ ಪಿವಿಸಿ ಪೈಪ್ ಉದ್ಯಮಕ್ಕೆ ಪರಿಚಿತರಾದರು. 1980ರಲ್ಲಿ ಇಬ್ಬರೂ ಒಟ್ಟಿಗೆ ಬಿಜೆಪಿ ಸೇರಿದವರು.

perfect election manager: ಅಂದಹಾಗೆ, ಅಮಿತ್ ಶಾ ಇಂತಹ ಯಶಸ್ಸು ಕಂಡಿರುವುದು ಇದೇ ಮೊದಲ ಬಾರಿ ಅಲ್ಲ. ಗುಜರಾತ್ ಮುಖ್ಯಮಂತ್ರಿ ಮೋದಿ ಅವರಿಗಂತೂ ಕಾಲ ಕಾಲಕ್ಕೆ ನೆರವಾಗುತ್ತಿದ್ದಾರೆ. ಆದರೆ ಅದಕ್ಕೂ ಮುಂಚೆ 1991ರಲ್ಲಿ ಗಾಂಧಿನಗರದಲ್ಲಿ ಎಲ್ ಕೆ ಅಡ್ವಾಣಿ ಅವರು ಜಯಶೀಲರಾಗುವುದಕ್ಕೂ ಮತ್ತು 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರೂ ಗೆಲುವು ಸಾಧಿಸುವಲ್ಲಿ ಅಮಿತ್ ಶಾ ಅಳಿಲು ಕಾಣಿಕೆ ಸಲ್ಲಿಸಿ, ಸೈ ಅನ್ನಿಸಿಕೊಂಡಿದ್ದಾರೆ.
ಹಾಗಾದರೆ 'ಆಧುನಿಕ ಕಾಲದ ಚಾಣಕ್ಯ' ಅಮಿತ್ ಶಾ ಸದ್ಯದಲ್ಲೇ ಕೇಂದ್ರ ಸರಕಾರದಲ್ಲಿ ಸಚಿವ ಸ್ಥಾನ ಹಿಡಿಯುತ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಶಾ ಅವರ ಅಮಿತ ಸಾಮರ್ಥ್ಯವನ್ನು ಅರಿತವರು ಅಮಿತ್ ಶಾ ಕೇಂದ್ರ ಸಚಿವ ಸ್ಥಾನ ಹಿಡಿದು ತಮ್ಮ ಹೊಣೆಗಾರಿಕೆಯನ್ನು ಮೊಟಕುಗೊಪಳಿಸುವುದಿಲ್ಲ ಅನ್ನುತ್ತಾರೆ.
ಹಾಗಾದರೆ ಅಮಿತ್ ಶಾರ ಅಶ್ವಮೇಧ ಕುದುರೆಯ ಮುಂದಿನ ಓಟ ಎತ್ತ? ಎಂಬ ಪ್ರಶ್ನೆ ತೂರಿಬಂದಾಗ ದೇಶದ ವಾಣಿಜ್ಯ ರಾಜಧಾನಿ, ರಾಜಕೀಯವಾಗಿ ಆಯಕಟ್ಟಿನ ರಾಜ್ಯ ಎನಿಸಿರುವ ಮಹಾರಾಷ್ಟ್ರ ಎದುರಿಗೆ ಕಾಣಿಸುತ್ತದೆ. ಹೌದು ಅಮಿತ್ ತಮ್ಮ ಬೇಸ್ ಅನ್ನು ಸದ್ಯದಲ್ಲೇ ಮುಂಬೈಗೆ ಶಿಫ್ಟ್ ಮಾಡಲಿದ್ದಾರೆ. ಏಕೆಂದರೆ ಮಹಾರಾಷ್ಟ್ರ ವಿಧಾನಸಭೆಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಸೋ, 288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯನ್ನು ಬಿಜೆಪಿ ಮಡಿಲಿಗೆ ಹಾಕಲು ಅಮಿತ್ ಶಾ ಮುಂಬೈಗೆ ಹೊರಡಲಿದ್ದಾರೆ ಎಂಬ ಸುದ್ದಿ ಸದ್ಯದಲ್ಲೇ ಖಚಿತಪಡಲಿದೆ.












Click it and Unblock the Notifications